ಮನೆ ರಾಜ್ಯ ರಾಜ್ಯದಲ್ಲಿ ಮುಂಗಾರು ದುರ್ಬಲ: 3 ದಿನದ ಬಳಿಕ ಮಳೆ ಬಿರುಸು ಪಡೆಯುವ ಸಾಧ್ಯತೆ

ರಾಜ್ಯದಲ್ಲಿ ಮುಂಗಾರು ದುರ್ಬಲ: 3 ದಿನದ ಬಳಿಕ ಮಳೆ ಬಿರುಸು ಪಡೆಯುವ ಸಾಧ್ಯತೆ

0

ಬೆಂಗಳೂರು (Bengaluru): ರಾಜ್ಯದಲ್ಲಿ ಮುಂಗಾರು ದುರ್ಬಲಗೊಂಡಿದ್ದು, ವಾಡಿಕೆಯಂತೆ ಮಳೆ ಆಗಲು ಇನ್ನೂ ಕೆಲವು ದಿನಗಳು ಬೇಕಾಗಬಹುದು ಹವಾಮಾನ ತಜ್ಞರು ತಿಳಿಸಿದ್ದಾರೆ.

ಇಡಿ ದೇಶದಲ್ಲೇ ಮುಂಗಾರು ದುರ್ಬಲಗೊಂಡಿದೆ. ರಾಜ್ಯದಲ್ಲಿ ಮುಂಗಾರು ಅವಧಿಯಲ್ಲಿ ವಾಡಿಕೆಯಂತೆ ಮಳೆ ಆಗಲು ಇನ್ನೂ ಕೆಲವು ದಿನಗಳು ಬೇಕಾಗಬಹುದು ಎಂದಿದ್ದಾರೆ. ಈಗಿನ ಮುನ್ಸೂಚನೆ ಗಮನಿಸಿದರೆ ಮೂರು ದಿನಗಳ ಬಳಿಕ ಮಳೆ ಬಿರುಸು ಪಡೆಯುವ ನಿರೀಕ್ಷೆಯಿದೆ.

ರಾಜ್ಯಕ್ಕೆ ಮುಂಗಾರು ಪ್ರವೇಶಿಸಿ ವಾರವಾದರೂ ವ್ಯಾಪಕವಾಗಿ ಮಳೆ ಸುರಿಯುತ್ತಿಲ್ಲ. ಚದುರಿದಂತೆ ಮಳೆ ಬೀಳುತ್ತಿದೆ. ಮಲೆನಾಡು ಹಾಗೂ ಕರಾವಳಿ ಜಿಲ್ಲೆಗಳಲ್ಲಿ ಮುಂಗಾರು ದುರ್ಬಲಗೊಂಡಿದೆ.

ರಾಜ್ಯಕ್ಕೆ ಮೇ 27ಕ್ಕೆ ಮುಂಗಾರು ಪ್ರವೇಶಿಸಲಿದೆ ಎಂದು ಹವಾಮಾನ ಇಲಾಖೆ ಈ ಹಿಂದೆ ಮುನ್ಸೂಚನೆ ನೀಡಿತ್ತು. ಅವಧಿಗೆ ಮೊದಲೇ ಮುಂಗಾರು ಮಳೆ ಬರುವ ನಿರೀಕ್ಷೆಯಲ್ಲಿ ಕೃಷಿ ಚಟುವಟಿಕೆಗಳೂ ಗರಿಗೆದರಿದ್ದವು. ಈಗ ರಾಜ್ಯದಲ್ಲಿ ಮಳೆಯಾದ ಸ್ಥಳದಲ್ಲಿಯೇ ಧಾರಾಕಾರ ಮಳೆ ಸುರಿದರೆ, ಉಳಿದೆಡೆ ಸಾಧಾರಣ ಮಳೆ ಬೀಳುತ್ತಿದೆ. ರಾಜ್ಯದಾದ್ಯಂತ ಮುಂಗಾರು ಸಿಂಚನವಾಗುವುದು ತಡವಾಗುತ್ತಿದೆ.

ಕರಾವಳಿ, ಮಲೆನಾಡು ಜಿಲ್ಲೆಗಳಲ್ಲಿ ಮುಂಗಾರು ಪೂರ್ವ ಮಳೆ ವಾಡಿಕೆಗೂ ಮೀರಿ ಸುರಿದಿತ್ತು. ಈಗ ಮುಂಗಾರು ಮಾರುತಗಳ ಪ್ರವೇಶ ವಿಳಂಬವಾಗುತ್ತಿದೆ. ಕೇರಳದಲ್ಲೂ ಇದೇ ಸ್ಥಿತಿಯಿದೆ ಎಂದು ಹವಾಮಾನ ತಜ್ಞ ಡಾ.ಜಿ.ಎಸ್‌.ಶ್ರೀನಿವಾಸ ರೆಡ್ಡಿ ‘ಪ್ರಜಾವಾಣಿ’ಗೆ ತಿಳಿಸಿದರು.

ರಾಜ್ಯದಲ್ಲಿ ಮುಂಗಾರು ಪೂರ್ವದಲ್ಲಿ, ಸರಾಸರಿ 11.5 ಸೆಂ.ಮೀನಷ್ಟು ವಾಡಿಕೆ ಮಳೆ ಸುರಿಯಬೇಕಿತ್ತು. ಆದರೆ, 23.6 ಸೆಂ.ಮೀನಷ್ಟು ಮಳೆಯಾಗಿದೆ ಎಂದು ತಿಳಿಸಿದರು.

ಮಲೆನಾಡು ಜಿಲ್ಲೆಗಳಾದ ಚಿಕ್ಕಮಗಳೂರು, ಕೊಡಗು, ಶಿವಮೊಗ್ಗ, ಹಾಸನ ಹಾಗೂ ಕರಾವಳಿ ಪ್ರದೇಶವಾದ ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡದಲ್ಲಿ ಗಾಳಿಯು ಜೋರಾಗಿ ಬೀಸುತ್ತಿದ್ದರೂ ಮಳೆ ಸುರಿಸುವ ಮೋಡಗಳನ್ನು ಹೊತ್ತು ತರುತ್ತಿಲ್ಲ. ಈ ಜಿಲ್ಲೆಗಳಲ್ಲಿ ಬಿರುಸು ಪಡೆಯದೇ ಮುಂಗಾರು ನಿರಾಸೆ ಮೂಡಿಸಿದೆ.