ಮೈಸೂರು : ಮಂಗಳೂರು ಜಿಲ್ಲೆ ಧರ್ಮಸ್ಥಳ ಮತ್ತು ಇದರ ಸುತ್ತ ಮುತ್ತ ನಡೆದಿರುವ ಹಲವಾರು ಅತ್ಯಾಚಾರ, ಹತ್ಯೆಗಳಂತ ಅಪರಾಧ ಕೃತ್ಯಗಳ ಬಗ್ಗೆ ಮಾಹಿತಿ ಇರುವುದಾಗಿ ವ್ಯಕ್ತಿಯೋರ್ವರು ಸ್ಥಳೀಯ ಪೊಲೀಸ್ ಠಾಣೆಗೆ ದೂರು ದಾಖಲಿಸಿರುವುದನ್ನು ಗಂಭೀರವಾಗಿ ಪರಿಗಣಿಸಿ ಆ ವ್ಯಕ್ತಿ ಮತ್ತು ಕುಟುಂಬಕ್ಕೆ ಭದ್ರತೆ ನೀಡಿ ಉನ್ನತ ಮಟ್ಟದ ತನಿಖೆ ನಡೆಸಬೇಕು ಎಂದು ಒತ್ತಾಯಿಸಿ ದಲಿತ ಸಂಘರ್ಷ ಸಮಿತಿ ವತಿಯಿಂದ ಪ್ರತಿಭಟನೆ ನಡೆಸಲಾಯಿತು.
ನಗರದ ಪುರಭವನದ ಅಂಬೇಡ್ಕರ್ ಪ್ರತಿಮೆ ಮುಂಭಾಗ ಮಂಗಳವಾರ ಜಮಾಯಿಸಿದ ಪ್ರತಿಭಟನಾಕಾರರು, ಅತ್ಯಾಚಾರ, ಕೊಲೆ ಪ್ರಕರಣದಲ್ಲಿ ಭಾಗಿಯಾದವರನ್ನು ಬಂಧಿಸುವಂತೆ ಆಗ್ರಹಿಸಿದರು.
ಇದೇ ವೇಳೆ ದಸಂಸ ಜಿಲ್ಲಾ ಸಂಚಾಲಕ ಚೋರನಹಳ್ಳಿ ಶಿವಣ್ಣ ಮಾತನಾಡಿ, ಮಂಗಳೂರು ಜಿಲ್ಲೆ, ಬೆಳ್ತಂಗಡಿ ತಾಲ್ಲೂಕಿನ, ಧರ್ಮಸ್ಥಳ ಮತ್ತು ಇದರ ಸುತ್ತಮುತ್ತ ನಡೆದಿರುವ ಹಲವಾರು ಅತ್ಯಾಚಾರ, ಹತ್ಯೆಗಳಂತಹ ಅಪರಾಧ ಕೃತ್ಯಗಳ ಬಗ್ಗೆ ಮಾಹಿತಿ ಇರುವುದಾಗಿ ವ್ಯಕ್ತಿಯೋರ್ವ ತನಗೆ ಜೀವ ಬೆದರಿಕೆಯೊಡ್ಡಿ ಹೆದರಿಸಿ, ಹತ್ಯಗೊಳಗಾದ ಮೃತದೇಹಗಳನ್ನು ವಿಲೇವಾರಿ ಮಾಡಿ ಹೂತು ಹಾಕಿರುವ ಸ್ಥಳಗಳ ಮಾಹಿತಿ ನೀಡಲು ಮುಂದೆ ಬಂದು ದಿನಾಂಕ ೦೩.೦೭.೨೦೨೫ರಂದು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಧರ್ಮಸ್ಥಳದ ಮಂಜುನಾಥ ಸ್ವಾಮಿ ದೇವಸ್ಥಾನದ ಆಡಳಿತ ಮಂಡಳಿಯ ಕೆಲವು ಸದಸ್ಯರ ವಿರುದ್ಧ ಅಪರಾಧ ಸಂಖ್ಯೆ ೩೯/೨೦೨೫ ಕಲಂ ೨೧೧/ಎ ಬಿಎನ್‌ಎಸ್ ಕಾಯ್ದೆಯಡಿ ದೂರು ದಾಖಲಿಸಿರುವುದು ಬೆಳಕಿಗೆ ಬಂದು ಮುಚ್ಚಿಹೋಗಿದ್ದ ಆನೆ ಮಾವುತ ನಾರಾಯಣ ಇವರ ತಂಗಿ ಯಮುನಾ, ಪದ್ಮಲತಾ, ಅಪ್ರಾಪ್ತ ವಿದ್ಯಾರ್ಥಿನಿ ಸೌಜನ್ಯರಂತಹವರ ಕೊಲೆ ಪ್ರಕರಣಗಳಿಗೆ ಮರು ಜೀವ ಬಂದಂತಾಗಿದೆ ಎಂದು ಹೇಳಿದರು.
ಜನರ ಧಾರ್ಮಿಕ ಭಾವನೆಗಳನ್ನು ಬಂಡವಾಳ ಮಾಡಿಕೊಂಡು ಕ್ರಿಮಿನಲ್ ಚಟುವಟಿಕೆಗಳ ಹಿನ್ನೆಲೆ ಇರುವವರ ಬೆಂಗಾವಲಿನಲ್ಲಿ ತಮ್ಮದೆ ಸಾಮ್ರಾಜ್ಯವನ್ನೇ ಸ್ಥಾಪಿಸಿಕೊಂಡು ಕೆಲವು ಪಟ್ಟಭದ್ರ, ಹಿತಾಸಕ್ತಿಗಳು ನೂರಾರು ಅಮಾಯಕ ಯುವತಿಯರು, ಮಹಿಳೆಯರು, ಮಕ್ಕಳನ್ನು ಅಮಾನೀಯವಾಗಿ ಅತ್ಯಾಚಾರ ಮಾಡಿ, ಕೊಲೆ ಮಾಡಿ, ಸುಟ್ಟುಹಾಕಿ ಹೂತು ಹಾಕಿರುವ ಬಗ್ಗೆ ಹಲವಾರು ದೂರುಗಳು ಬಂದರು ಸರ್ಕಾರಗಳು ನಿಸ್ಪಕ್ಷಪಾತ ತನಿಖೆಗೆ ಮುಂದಾಗದೆ ಆರೋಪಿಗಳು ಪ್ರಭಾವಿಗಳಾಗಿರುವುದರಿಂದ ಇವರುಗಳನ್ನು ರಕ್ಷಣೆ ಮಾಡುವ ಸಲುವಾಗಿ ಉಜಿರೆಯ ವಿದ್ಯಾರ್ಥಿನಿ ಸೌಜನ್ಯಳ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಅಮಾಯಕ ಸಂತೋಷರಾವ್‌ರನ್ನು ಸಿಲುಕಿಸಿ, ಹಿಂಸಿಸಿ ಜೈಲಿಗೆ ಹಾಕಲಾಗಿತ್ತು.
ಆದರೆ, ವಾಸ್ತವತೆಯನ್ನ ಮನಗಂಡ ನ್ಯಾಯಾಲಯವು ಸಂತೋಷ್ ರಾವ್ ನಿರ್ದೋಷಿ ಎಂದು ತೀರ್ಪು ನೀಡಿದೆ.
ನಿಜವಾದ ಆರೋಪಿಗಳ್ಯಾರು? ಸಂತೋಷ್ ರಾವ್ ರನ್ನು ಹಿಡಿದು ತಂದ ರವಿಪೂಜಾರಿ, ವಾರಿಜ ಆಚಾರಿ, ಪ್ರಮುಖ ಸಾಕ್ಷಿಗಳು ಆತ್ಮಹತ್ಯೆ ಮಾಡಿಕೊಳ್ಳಲು ಕಾರಣವೇನು? ತನಿಖೆಯ ವಿಧಾನದಲ್ಲಿ ಉದ್ದೇಶಪೂರ್ವಕ ಲೋಪ ಎಸಗಿರುವ
ತನಿಖಾಧಿಕಾರಿಗಳ, ವೈದ್ಯರ ವಿರುದ್ಧ ಇದುವರೆವಿಗೂ ಏಕೆ ಕ್ರಮಕೈಗೊಂಡಿಲ್ಲ? ಯಾವ ಒತ್ತಡ ಅಥವಾ ಪ್ರಭಾವದಿಂದ ಅಗತ್ಯ ಸಾಕ್ಷಿಗಳನ್ನು ನಾಶ ಮಾಡಲಾಗಿದೆ? ನೂರಾರುಅಸಹಜ ಹೆಸರಿನ ಸಾವುಗಳ ಹಿಂದೆ ಯಾರಿದ್ದಾರೆ? ಮುಂತಾದ ಪ್ರಶ್ನೆಗಳಿಗೆ ಸರ್ಕಾರವೇ ಉತ್ತರಿಸಬೇಕಾಗಿದೆ ಎಂದು ಹೇಳಿದರು.
ರಾಜ್ಯ ಸರ್ಕಾರ ಧರ್ಮಸ್ಥಳದ ಸುತ್ತ ಮುತ್ತ ನಡೆದಿರುವ ಎಲ್ಲಾ ಅತ್ಯಾಚಾರ ಮತ್ತು ಕೊಲೆ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿ ಅಪರಾಧ ಕೃತ್ಯಗಳ ಬಗ್ಗೆ ಮಾಹಿತಿ ನೀಡಲು ಮುಂದೆ ಬಂದು ದೂರು ದಾಖಲಿಸಿರುವ ವ್ಯಕ್ತಿ ಮತ್ತು ಕುಟುಂಬಕ್ಕೆ ಭದ್ರತೆ ನೀಡಿ ಉನ್ನತ ಮಟ್ಟದ ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸಿ ಕಠಿಣ ಶಿಕ್ಷೆಗೊಳಪಡಿಸಿ ಎಲ್ಲಾ ಸಂತ್ರಸ್ಥ ಕುಟುಂಬಗಳಿಗೂ ನ್ಯಾಯ ದೊರಕಿಸಿಕೊಡಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ದಸಂಸ ಜಿಲ್ಲಾ ಸಂಚಾಲಕ ಚೋರನಹಳ್ಳಿ ಶಿವಣ್ಣ, ಸಂಘಟನಾ ಸಂಚಾಲಕ ಕೆ.ವಿ.ದೇವೇಂದ್ರ, ಕಿರಂಗೂರು ಸ್ವಾಮಿ, ಹಾರೋಹಳ್ಳಿ ನಟರಾಜ್, ಎಡದೊರೆ ಮಹದೇವಯ್ಯ, ಮೈಸೂರು ವಿವಿ ಸಂಶೋಧನಾ ವಿದ್ಯಾರ್ಥಿಗಳಾದ ರೋಜ,ಪ್ರದೀಪ್ ಮುಮ್ಮಡಿ, ಧೀರಜ್, ನವೀನ್ ಅಳಗಂಚಿ, ಮುಖಂಡುಗಳಾದ ಹನುಮನಪುರ ಪುಟ್ಟಣ್ಣ, ಶಿವಮ್ಮ, ಪುಟ್ಟಸಿದ್ಧಮ್ಮ, ರತ್ನಮ್ಮ, ಸಿದ್ಧಮ್ಮ, ಲಕ್ಷ್ಮಮ್ಮ, ರವಿಕುಮಾರ್ ಸೇರಿದಂತೆ ಹಲವರು ಭಾಗವಹಿಸಿದ್ದರು














