ಮನೆ ರಾಜ್ಯ ನಮ್ಮ ಮೆಟ್ರೋ ನಿಲ್ದಾಣಗಳಲ್ಲಿ ನಂದಿನಿ ಪಾರ್ಲರ್ ಗ್ರಾಹಕರಿಗೆ ಹೆಚ್ಚು ಉತ್ಪನ್ನಗಳು ಲಭ್ಯ

ನಮ್ಮ ಮೆಟ್ರೋ ನಿಲ್ದಾಣಗಳಲ್ಲಿ ನಂದಿನಿ ಪಾರ್ಲರ್ ಗ್ರಾಹಕರಿಗೆ ಹೆಚ್ಚು ಉತ್ಪನ್ನಗಳು ಲಭ್ಯ

0

ಬೆಂಗಳೂರು : ನಮ್ಮ ಮೆಟ್ರೋ ನಿಲ್ದಾಣಗಳಲ್ಲಿ ಇದೀಗ ನಂದಿನಿ ಪಾರ್ಲರ್‌ಗಳು ಆರಂಭವಾಗಿದ್ದು, 175ಕ್ಕೂ ಅಧಿಕ ನಂದಿನಿ ಉತ್ಪನ್ನಗಳು ಗ್ರಾಹಕರಿಗೆ ಲಭ್ಯವಾಗುತ್ತಿವೆ. ನಮ್ಮ ಮೆಟ್ರೋ ನಿಲ್ದಾಣಗಳಲ್ಲಿ ನಮ್ಮ ಹೆಮ್ಮೆಯ ನಂದಿನಿ ಪಾರ್ಲರ್‌ಗೆ ಅವಕಾಶ ಕೊಡದೇ ಅಮುಲ್ ಪಾರ್ಲರ್‌ಗಳಿಗೆ ಅವಕಾಶ ಕೊಟ್ಟಿದೆ ಎಂದು ದೊಡ್ಡ ಮಟ್ಟದ ಪ್ರತಿರೋಧ ವ್ಯಕ್ತವಾಗಿತ್ತು. ಇದೆಲ್ಲದರ ನಂತರ ಕಡೆಗೂ ನಂದಿನಿ ಪಾರ್ಲರ್‌ಗಳು ಮೆಟ್ರೋ ನಿಲ್ದಾಣದಲ್ಲಿ ಕಾರ್ಯಾರಂಭ ಮಾಡಿವೆ.

ಕೆಎಂಎಫ್ ಟೆಂಡರ್ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿಲ್ಲದೇ ಇದ್ದದ್ದೇ ಇದಕ್ಕೆ ಕಾರಣ ಅನ್ನೋದು ಗೊತ್ತಾಗಿತ್ತು. ಬೆಂಗಳೂರು ಮೆಟ್ರೋ ರೈಲು ನಿಗಮ ಹಂಚಿಕೆ ಪ್ರಕ್ರಿಯೆಯಲ್ಲಿ ಯಾವುದೇ ರೀತಿಯ ಪಕ್ಷಪಾತ ಮಾಡಿಲ್ಲ ಎಂದು ಸ್ಪಷ್ಟಪಡಿಸಿತ್ತು. ನಂತರ ನಂದಿನಿ ಪಾರ್ಲರ್‌ಗೆ 10 ಕಡೆ ಅವಕಾಶ ಮಾಡಿಕೊಡಲಾಗಿತ್ತು. ಈಗ ಕೊನೆಗೂ ಮೂರು ಕಡೆ ನಂದಿನಿ ಪಾರ್ಲರ್‌ಗಳು ಆರಂಭವಾಗಿದ್ದು, ಭರ್ಜರಿ ರೆಸ್ಪಾನ್ಸ್ ದೊರೆಯುತ್ತಿದೆ ಎನ್ನಲಾಗಿದೆ.

ಈ ನಂದಿನಿ ಪಾರ್ಲರ್‌ಗಳಲ್ಲಿ ಸುಮಾರು 175ಕ್ಕೂ ಹೆಚ್ಚು ನಂದಿನಿ ಉತ್ಪನ್ನಗಳು ದೊರೆಯುತ್ತಿವೆ. ಇದರ ಜೊತೆಗೆ ಹಲವು ಹೊಸ ಉತ್ಪನ್ನಗಳನ್ನೂ ಪರಿಚಯಿಸಲಾಗಿದೆ. ಗೌರಿ-ಗಣೇಶ ಹಬ್ಬ, ದಸರಾ ಹಬ್ಬಗಳಲ್ಲಿ ಹೆಚ್ಚಾಗಿ ನಂದಿನಿ ಉತ್ಪನ್ನ ಬಳಸಿ ನಮ್ಮ ರೈತರಿಗೆ ಪರೋಕ್ಷವಾಗಿ ಸಪೋರ್ಟ್ ಮಾಡಿ ಎಂದು ಕೆಎಂಎಫ್ ಎಂಡಿ ತಿಳಿಸಿದ್ದಾರೆ.

ಇನ್ನುಳಿದ 7 ಪಾರ್ಲರ್‌ಗಳನ್ನು ಆದಷ್ಟು ಬೇಗ ಶುರು ಮಾಡಲು ಸಿದ್ಧತೆತೆಗಳು ನಡೆಯುತ್ತಿದ್ದು, ಇನ್ನಷ್ಟು ನಿಲ್ದಾಣಗಳಲ್ಲಿ ನಂದಿನಿ ಪಾರ್ಲರ್ ಪ್ರಾರಂಭಿಸಲು ಕೆಎಂಎಫ್ ಜಾಗ ಕೇಳಲು ನಿರ್ಧರಿಸಿದೆ. ಜೊತೆಗೆ ಮುಂದಿನ ಒಂದು ವರ್ಷದಲ್ಲಿ ರಾಜ್ಯದಲ್ಲಿ 500ಕ್ಕೂ ಹೆಚ್ಚು ಪಾರ್ಲರ್ ಶುರು ಮಾಡುವ ಗುರಿಯನ್ನು ಕೆಎಂಎಫ್ ಹೊಂದಿದೆ ಎಂದು ತಿಳಿಸಿದೆ.