ರಾಯಚೂರು: ನರೇಗಾ ಯೋಜನೆಯಲ್ಲಿ 150 ಕೋಟಿಗೂ ಅಧಿಕ ಹಣ ಅಕ್ರಮ ಕೇಸ್ ಗೆ ಸಂಬಂಧಿಸಿದಂತೆ ದೇವದುರ್ಗ ತಾಲೂಕಿನ 32 ಪಿಡಿಒಗಳ ಅಮಾನತುಗೊಳಿಸಿ ರಾಯಚೂರು ಜಿ.ಪಂ. ಸಿಇಓ ಪಿ.ರಾಹುಲ್ ತುಕಾರಾಂ ಆದೇಶ ಹೊರಡಿಸಿದ್ದಾರೆ.
ದೇವದುರ್ಗ ತಾಲೂಕಿನ ಒಟ್ಟು 33 ಗ್ರಾಮ ಪಂಚಾಯಿತಿಗಳಲ್ಲಿ ಅಕ್ರಮ ಪ್ರಕರಣ ನಡೆದಿದೆ. 2020ರಿಂದ 2023ರ ಅವಧಿಯಲ್ಲಿ ನರೇಗಾ ಯೋಜನೆಯಲ್ಲಿ ಭ್ರಷ್ಟಾಚಾರ ಪ್ರಕರಣ ನಡೆದಿತ್ತು. ಲೆಕ್ಕ ಪರಿಶೋಧನಾ ಸಮಿತಿಯ ತನಿಖೆಯಿಂದ ಅಕ್ರಮ ಬಹಿರಂಗವಾಗಿತ್ತು.
ದೇವದುರ್ಗ ಠಾಣೆಯಲ್ಲಿ ಇಬ್ಬರು ಗೆಜೆಟೆಡ್ ಅಧಿಕಾರಿಗಳ ವಿರುದ್ಧ ಇತ್ತೀಚೆಗೆ ಎಫ್ಐಆರ್ ದಾಖಲಾಗಿತ್ತು. ಇದರ ಬೆನ್ನಲ್ಲೇ ನಾಲ್ಕು ಪಿಡಿಓಗಳನ್ನ ಅಮಾನತ್ತು ಕೂಡ ಮಾಡಲಾಗಿತ್ತು. ಜಾಳಹಳ್ಳಿ ಪಂಚಾಯಿತಿ ಪಿಡಿಓ ಪತ್ಯಪ್ಪ ರಾಠೋಡ್, ಶಾವಂತಗೆರಾ ಪಿಡಿಓ ಗುರುಸ್ವಾಮಿ, ಕ್ಯಾದಿಗೆರಾ ಪಿಡಿಓ ಸಿಬಿ ಪಾಟೀಲ್ ಹಾಗೂ ಗಾಣದಾಳ ಪಿಡಿಓ ಮಲ್ಲಪ್ಪ ಅಮಾನತ್ತಾಗಿದ್ದರು.
ಈ ನಾಲ್ಕು ಪಿಡಿಓಗಳ ವಿರುದ್ಧ ಇಲಾಖಾ ತನಿಖೆ, ವಿಚಾರಣೆ ಕಾಯ್ದಿರಿಸಿ ರಾಯಚೂರು ಜಿಲ್ಲಾ ಪಂಚಾಯತ ಸಿಇಓ ಪಾಂಡ್ವೆ ರಾಹುಲ್ ತುಕಾರಾಮ್ ಆದೇಶಿಸಿದ್ದರು. ಆದರೆ ಇದರ ವಿರುದ್ಧ ಈಗ ಪಿಡಿಓಗಳು ಹಾಗೂ ವಿವಿಧ ನೌಕಕರ ಸಂಘಗಳ ಸದಸ್ಯರು ಬೀದಿಗಳಿದು ಹೋರಾಟಕ್ಕೆ ಮುಂದಾಗಿದ್ದರು.
ದೇವದುರ್ಗ ತಾಲ್ಲೂಕಿನ 33 ಗ್ರಾ.ಪಂಚಾಯಿತಿಗಳಲ್ಲಿ ಅನುಷ್ಠಾನಗೊಂಡ ಒಟ್ಟು 5385 ಕಾಮಗಾರಿಗಳಲ್ಲಿ ಭಾರೀ ಅಕ್ರಮ ನಡೆದಿದ್ದು ಸುಮಾರು 100 ಕೋಟಿಗೂ ಅಧಿಕ ಹಣ ದುರುಪಯೋಗವಾಗಿದೆ ಅಂತ ಸಾಮಾಜಿಕ ಪರಿಶೋಧನಾ ಸಮೀತಿ ಸರ್ಕಾರಕ್ಕೆ ವರದಿ ಸಲ್ಲಿಸಿತ್ತು. ಆ ಪೈಕಿ 32 ಗ್ರಾಮ ಪಂಚಾಯತಿಗಳ ಕಾಮಗಾರಿಗಳ ಸಾಮಾಗ್ರಿಗಳನ್ನು ಒಂದೇ ಸಂಸ್ಥೆಯಲ್ಲಿ ಖರೀದಿಸಲಾಗಿತ್ತು.
ಒಟ್ಟು 102.32 ಕೋಟಿ ರೂ. ಅನ್ನ ಮಾರುತೇಶ್ವರ ಎಂಟರ್ ಪ್ರೈಸಸ್ ಅನ್ನೋ ಒಂದೇ ಸಂಸ್ಥೆಗೆ ಪಾವತಿಸುವುದರೊಳಗೆ ಬೆಳಕಿಗೆ ಬಂದಿತ್ತು. ಕಡತಗಳನ್ನು ನಿರ್ವಹಿಸದೇ 32.51 ಕೋಟಿ ರೂ.ಪಾವತಿ. ಅಂದಾಜು ಮೊತ್ತಕ್ಕಿಂತ ಹೆಚ್ಚುವರಿಯಾಗಿ 11.64 ಕೋಟಿ ರೂ. ಪಾವತಿ ಮಾಡಿರುವುದನ್ನೂ ಪತ್ತೆಹಚ್ಚಲಾಗಿತ್ತು. ಇದರ ಜೊತೆ ಸರ್ಕಾರಕ್ಕೆ 5.10 ಕೋಟಿ ರೂ. ತೆರಿಗೆ ವಂಚಿಸಲಾಗಿತ್ತು.
ನಕಲಿ ಜಾಬ್ ಕಾರ್ಡ್ ಸೃಷ್ಟಿ, ಫಲಾನುಭವಿಗಳಿಗೆ ಹಣ ಹಾಕದೇ ಸಾಮಾಗ್ರಿ ಪೂರೈಕೆದಾರರಿಗೆ ಹಣ ಸಂದಾಸಿದ್ದಲ್ಲದೇ, ಶೇಕಡಾ 95 ರಷ್ಟು ಕಾಮಗಾರಿಗಳಿಗೆ ನಾಮಫಲಕ ಅಳವಡಿಸದೇ ಪ್ರತಿ ನಾಮಫಲಕಕ್ಕೆ 5000 ರೂ.ಪಾವತಿಸಲಾಗಿತ್ತು. ಹೀಗೆ ವಿವಿಧ ವಿಧಾನಗಳಲ್ಲಿ 49 ಕೋಟಿ 27 ಲಕ್ಷ ರೂ. ಹಣ ದುರುಪಯೋಗವಾಗಿರೋದನ್ನ ಬಯಲಿಗೆಳೆಯಲಾಗಿತ್ತು. ಆದರೆ ಈ ವರದಿಯೇ ಅವೈಜ್ಞಾನಿಕ ಅಂತ ಪಿಡಿಓಗಳು ಹಾಗೂ ವಿವಿಧ ನೌಕಕರ ಸಂಘಟಗಳು ರಾಯಚೂರಿನಲ್ಲಿ ಪ್ರತಿಭಟನೆ ನಡೆಸಿದ್ದರು.