ಮನೆ ರಾಷ್ಟ್ರೀಯ ಹಿಂದಿ ಅಸ್ಮಿತೆಯಿಂದ 25ಕ್ಕೂ ಹೆಚ್ಚು ಪ್ರಾಚೀನ ಮಾತೃಭಾಷೆಗಳು ಕಣ್ಮರೆ: ಸಿಎಂ ಸ್ಟಾಲಿನ್

ಹಿಂದಿ ಅಸ್ಮಿತೆಯಿಂದ 25ಕ್ಕೂ ಹೆಚ್ಚು ಪ್ರಾಚೀನ ಮಾತೃಭಾಷೆಗಳು ಕಣ್ಮರೆ: ಸಿಎಂ ಸ್ಟಾಲಿನ್

0

ಚೆನ್ನೈ: ತಮಿಳುನಾಡಿನಲ್ಲಿ ತ್ರಿಭಾಷಾ ನೀತಿಯ ಹೇರುವಿಕೆಯನ್ನು ಬಲವಾಗಿ ವಿರೋಧಿಸಿರುವ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್, ಏಕರೂಪದ ಹಿಂದಿ ಅಸ್ಮಿತೆ ಜಾರಿಗೆ ತರುತ್ತಿರುವುದರ ಪರಿಣಾಮವಾಗಿ 25ಕ್ಕೂ ಹೆಚ್ಚು ಪ್ರಾಚೀನ ಮಾತೃಭಾಷೆಗಳು ಕಣ್ಮರೆಯಾಗಿವೆ ಎಂದು ಹೇಳಿದ್ದಾರೆ.

Join Our Whatsapp Group

ಈ ಬಗ್ಗೆ ಸಾಮಾಜಿಕ ಜಾಲತಾಣ ಎಕ್ಸ್​ನಲ್ಲಿ ಪೋಸ್ಟ್ ಮಾಡಿರುವ ಅವರು, ಭೋಜ್ ಪುರಿ, ಅವಧಿ, ಬ್ರಜ್ ಮತ್ತು ಗರ್ವಾಲಿ ಸೇರಿದಂತೆ ಹಲವಾರು ಭಾರತೀಯ ಭಾಷೆಗಳನ್ನು ಹಿಂದಿ ನುಂಗಿ ಹಾಕಿದೆ ಎಂದು ಬರೆದಿದ್ದಾರೆ.

ನಿಜವಾದ ಭಾಷೆಗಳು ಈಗ ಗತಕಾಲದ ಅವಶೇಷಗಳು- ಸ್ಟಾಲಿನ್: “ಇತರ ರಾಜ್ಯಗಳ ನನ್ನ ಪ್ರೀತಿಯ ಸಹೋದರ ಸಹೋದರಿಯರೇ, ಹಿಂದಿ ಎಷ್ಟು ಭಾರತೀಯ ಭಾಷೆಗಳನ್ನು ನುಂಗಿ ಹಾಕಿದೆ ಎಂದು ಯಾವತ್ತಾದರೂ ಯೋಚಿಸಿದ್ದೀರಾ? ಭೋಜ್ ಪುರಿ, ಮೈಥಿಲಿ, ಅವಧಿ, ಬ್ರಜ್, ಬುಂದೇಲಿ, ಗರ್ವಾಲಿ, ಕುಮಾವೊನಿ, ಮಗಹಿ, ಮಾರ್ವಾರಿ, ಮಾಲ್ವಿ, ಛತ್ತೀಸ್ ಗಢಿ, ಸಂತಾಲಿ, ಅಂಗಿಕಾ, ಹೋ, ಖಾರಿಯಾ, ಖೋರ್ತಾ, ಕುರ್ಮಾಲಿ, ಕುರುಖ್, ಮುಂಡಾರಿ ಮತ್ತು ಇನ್ನೂ ಅನೇಕ ಭಾಷೆಗಳು ಈಗ ಅಸ್ತಿತ್ವಕ್ಕಾಗಿ ಹೆಣಗಾಡುತ್ತಿವೆ. ಏಕರೂಪದ ಹಿಂದಿ ಅಸ್ಮಿತೆಯ ಹೇರುವಿಕೆಯು ಪ್ರಾಚೀನ ಮಾತೃಭಾಷೆಗಳನ್ನು ಕೊಲ್ಲುತ್ತದೆ. ಉತ್ತರ ಪ್ರದೇಶ ಮತ್ತು ಬಿಹಾರ ಎಂದಿಗೂ ಕೇವಲ ‘ಹಿಂದಿ ಹೃದಯಭಾಗ’ಗಳಾಗಿರಲಿಲ್ಲ. ಅವರ ನಿಜವಾದ ಭಾಷೆಗಳು ಈಗ ಗತಕಾಲದ ಅವಶೇಷಗಳಾಗಿವೆ. ಇದರ ಪರಿಣಾಮ ಏನಾಗಲಿದೆ ಎಂಬುದು ನಮಗೆ ಗೊತ್ತಿರುವುದರಿಂದಲೇ ತಮಿಳುನಾಡು ಇದನ್ನು ಪ್ರತಿರೋಧಿಸುತ್ತದೆ” ಎಂದು ಪೋಸ್ಟ್ ನಲ್ಲಿ ಬರೆಯಲಾಗಿದೆ.

ರಾಷ್ಟ್ರೀಯ ಶಿಕ್ಷಣ ನೀತಿಯಡಿ ತ್ರಿಭಾಷಾ ಸೂತ್ರದ ಬಗ್ಗೆ ತಮಿಳುನಾಡು ಹಾಗೂ ದಕ್ಷಿಣದ ಇತರ ರಾಜ್ಯಗಳು ಮತ್ತು ಕೇಂದ್ರದ ನಡುವಿನ ಸಂಘರ್ಷದ ಹಿನ್ನೆಲೆಯಲ್ಲಿ ಸ್ಟಾಲಿನ್ ಅವರ ತೀಕ್ಷ್ಣವಾದ ಹೇಳಿಕೆಗಳು ಮಹತ್ವ ಪಡೆದುಕೊಂಡಿವೆ.

ತಮಿಳುನಾಡು ಹಿಂದಿ ಹೇರಿಕೆಯನ್ನು ನಿರಂತರವಾಗಿ ವಿರೋಧಿಸುತ್ತಿದ್ದು, 1967 ರಿಂದ ದ್ವಿಭಾಷಾ ನೀತಿ ಅಳವಡಿಸಿಕೊಂಡಿದೆ. ಹಿಂದಿಯನ್ನು ಅಧಿಕೃತ ಭಾಷೆಯನ್ನಾಗಿ ಮಾಡಲು ಆಗಿನ ಕಾಂಗ್ರೆಸ್ ನೇತೃತ್ವದ ಕೇಂದ್ರ ಸರ್ಕಾರವು ಪ್ರಯತ್ನಿಸಿದ ನಂತರ ತಮಿಳುನಾಡಿನಲ್ಲಿ ಹಿಂಸಾತ್ಮಕ ಪ್ರತಿಭಟನೆಗಳು ನಡೆದಿದ್ದವು. ಅದರ ನಂತರದ ಚುನಾವಣೆಯಲ್ಲಿ ಕಾಂಗ್ರೆಸ್ ರಾಜ್ಯದಲ್ಲಿ ಅಧಿಕಾರ ಕಳೆದುಕೊಳ್ಳಬೇಕಾಯಿತು.

ಹೊಸ ಶಿಕ್ಷಣ ನೀತಿಯನ್ನು ಸಂಪೂರ್ಣವಾಗಿ ಜಾರಿಗೆ ತರದಿದ್ದರೆ ತಮಿಳುನಾಡಿಗೆ ನೀಡಬೇಕಾಗಿರುವ 2,400 ಕೋಟಿ ರೂ.ಗಳ ನಿಧಿಯನ್ನು ತಡೆಹಿಡಿಯುವುದಾಗಿ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಹೇಳಿದ ನಂತರ ಭಾಷಾ ವಿವಾದ ಈಗ ಮತ್ತೆ ತೀವ್ರ ಸ್ವರೂಪ ಪಡೆದುಕೊಂಡಿದೆ. ಸಚಿವ ಪ್ರಧಾನ್ ಮಾತಿಗೆ ಸಿಎಂ ಸ್ಟಾಲಿನ್ ಹಾಗೂ ಡಿಸಿಎಂ ಉದಯನಿಧಿ ಸ್ಟಾಲಿನ್ ಇಬ್ಬರೂ ಆಕ್ಷೇಪ ವ್ಯಕ್ತಪಡಿಸಿದ್ದಾರೆ.