ಹಾಸನ : ವಿಷಕಾರಿ ಮೇವು ತಿಂದು 70ಕ್ಕೂ ಹೆಚ್ಚು ಕುರಿಗಳು ಸಾವನ್ನಪ್ಪಿದ ಘಟನೆ ಅರಸೀಕೆರೆ ತಾಲೂಕಿನ ಜಾವಗಲ್ ಬಳಿಯ ದೊಡ್ಡಘಟ್ಟ ಗ್ರಾಮದಲ್ಲಿ ನಡೆದಿದೆ.
ತುಮಕೂರಿನ ಶಿರಾದಿಂದ 800 ಕುರಿಗಳನ್ನು ಕುರಿಗಾಹಿಗಳು ಕರೆದುಕೊಂಡು ದೊಡ್ಡಘಟ್ಟಕ್ಕೆ ಬಂದಿದ್ದರು. ಈ ವೇಳೆ ವಿಷಕಾರಿ ಮೇವು ತಿಂದು ಕುರಿಗಳು ಸಾವನ್ನಪ್ಪಿವೆ. ಹೊಲಗಳ ತುಂಬೆಲ್ಲಾ ಕುರಿಗಳು ಸತ್ತು ಬಿದ್ದಿವೆ. ಮೆಕ್ಕೆಜೋಳದ ಚಿಗುರು ತಿಂದು ಕುರಿಗಳು ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ.
ಮತ್ತಷ್ಟು ಕುರಿಗಳು ತೀವ್ರ ಅಸ್ವಸ್ಥಗೊಂಡಿವೆ. ಚಿಕಿತ್ಸೆಗಾಗಿ ಹಾಸನದಿಂದ ಮೂವರು ಪಶು ವೈದ್ಯರ ತಂಡ ಸ್ಥಳಕ್ಕೆ ತೆರಳಿದೆ. ಕುರಿಗಳು ಶಿರಾ ಮೂಲದ ರಾಜಣ್ಣ ಎಂಬುವವರಿಗೆ ಸೇರಿದ್ದು ಎಂದು ತಿಳಿದು ಬಂದಿದೆ. ಕುರಿಗಳನ್ನು ಕಳೆದುಕೊಂಡ ರೈತರು ಕಂಗಾಲಾಗಿದ್ದಾರೆ. ಸರ್ಕಾರ ಸೂಕ್ತ ಪರಿಹಾರ ನೀಡಬೇಕು ಎಂದು ಆಗ್ರಹಿಸಿದ್ದಾರೆ.















