ಮಂಡ್ಯ: ಡೆಂಗ್ಯೂ, ಮಲೇರಿಯಾ, ಚಿಕನ್ ಗುನ್ಯಾ ಮುಂತಾದ ಸಾಂಕ್ರಮಿಕ ರೋಗಗಳು ಸೊಳ್ಳೆಗಳ ಕಡಿತದಿಂದ ಉಂಟಾಗುತ್ತದೆ. ಇದನ್ನು ತಡೆಗಟ್ಟಲು ರೋಗ ಹೆಚ್ಚಾಗಿ ಹರಡುವ ಸ್ಥಳಗಳನ್ನು ಗುರುತಿಸಿ ಪ್ರತಿ ಶುಕ್ರವಾರ ನೀರಿನ ಮಾದರಿಗಳನ್ನು ಪಡೆದು ಲಾರ್ವಾ ಸರ್ವೇ ತಂಡದಿAದ ಲಾರ್ವಾ ಸರ್ವೇ ನಡೆಸಲಾಗುವುದು ಎಂದು ಜಿಲ್ಲಾಧಿಕಾರಿ ಡಾ. ಕುಮಾರ ಅವರು ತಿಳಿಸಿದರು.
ಅವರು ಇಂದು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಡೆಂಗ್ಯೂ ರೋಗ ನಿಯಂತ್ರಣ ಕುರಿತು ಆಯೋಜಿಸಲಾಗಿದ್ದ ಅಂತರ ಇಲಾಖಾ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಡೆಂಗಿ ರೋಗ ಉಂಟು ಮಾಡುವ ಈಡೀಸ್ ಲಾರ್ವಾ ಸಮೀಕ್ಷೆಯಲ್ಲಿ ಕಂಡು ಬಂದಲ್ಲಿ ತಕ್ಷಣ ಅವುಗಳ ಉತ್ಪತ್ತಿಯಾಗದಂತೆ ತಡೆಗಟ್ಟಲಾಗುವುದು ಎಂದರು.
ಕಟ್ಟಡ ನಿರ್ಮಿಸುವ ಪ್ರದೇಶಗಳಲ್ಲಿ, ಗ್ಯಾರೇಜ್ ಗಳಲ್ಲಿ, ದನ – ಕರು ಸಾಕಾಣಿಕೆ ಪ್ರದೇಶ, ಗುಜರಿ, ಎಳನೀರು ಮಾರುವ ಸ್ಥಳ, ನೀರಿನ ತೊಟ್ಟಿಗಳು ಹಾಗೂ ನೀರು ನಿಲುಗಡೆಯಾಗುವ ಪ್ರದೇಶಗಳಲ್ಲಿ ಡೆಂಗಿ ಜ್ವರವನ್ನು ತಡೆಗಟ್ಟಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಿ ಎಂದರು.
ಲಾರ್ವಾ ಸರ್ವೇ ನಡೆಸಲು ಸಾರ್ವಜನಿಕರು ಸಹಕರಿಸದಿದ್ದಲ್ಲಿ ಹಾಗೂ ಸರ್ವೇಯ ನಂತರ ತಮ್ಮ ಸುತ್ತ ಮುತ್ತಲಿನ ಪ್ರದೇಶದಲ್ಲಿ ಸ್ವಚ್ಛತೆಯನ್ನು ಕಾಪಡದಿದ್ದಲ್ಲಿ ದಂಡ ವಿಧಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಜಿಲ್ಲೆಯಲ್ಲಿ 2025 ರ ಜನವರಿ ಮಾಹೆಯಿಂದ ಇಲ್ಲಿಯವರೆಗೆ 17 ಡೆಂಗ್ಯೂ ಪ್ರಕರಣಗಳು, 4 ಚಿಕನ್ ಗುನ್ಯಾ ಪ್ರಕರಣಗಳು ವರದಿಯಾಗಿರುತ್ತದೆ. ಆಸ್ಪತ್ರೆಗಳಲ್ಲಿ ಡೆಂಗ್ಯೂ ಪ್ರಕರಣಗಳಿಗಾಗಿ ಪ್ರತ್ಯೇಕ ಹಾಸಿಗೆ ವ್ಯವಸ್ಥೆ ಮಾಡಿ. ವೈದ್ಯರು ಸೂಕ್ತ ಔಷಧೋಪಚಾರ ನೀಡಿರುತ್ತಾರೆ. ಸಾರ್ವಜನಿಕರು ರೋಗ ಬರುವ ಮೊದಲೇ ಮುನ್ನಚ್ಚರಿಕೆ ವಹಿಸುವಂತೆ ಸಲಹೆ ನೀಡಿದರು.
ಸಕ್ಕರೆ ಕಾರ್ಖಾನೆಗಳಿಗೆ ಬೇರೆ ಜಿಲ್ಲೆ ಹಾಗೂ ರಾಜ್ಯಗಳಿಂದ ಕಬ್ಬು ಕಟಾವು ಕಾರ್ಮಿಕರು ಜಿಲ್ಲೆಗೆ ಆಗಮಿಸಿದ್ದು, ಕಾರ್ಮಿಕ ಇಲಾಖೆ ಅವರು ಕಾರ್ಮಿಕರಿಗೆ ಎಲ್ಲಾ ಮೂಲಭೂತ ವ್ಯವಸ್ಥೆ ಒದಗಿಸಿರುವ ಬಗ್ಗೆ ಖಾತ್ರಿ ಪಡಿಸಿಕೊಳ್ಳಿ ಹಾಗೂ ಅವರು ವಾಸಿಸುವ ಸ್ಥಳದಲ್ಲಿ ಸ್ವಚ್ಛತೆಗೆ ಆದ್ಯತೆ ನೀಡುವಂತೆ ಜಾಗೃತಿ ಮೂಡಿಸಿ ಎಂದರು.
ಸೊಳ್ಳೆಗಳ ಸಂತಾನೋತ್ಪತ್ತಿ ತಡೆಗಟ್ಟಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಹಾಗೂ ಸೊಳ್ಳೆ ಕಚ್ಚುವಿಕೆಯಿಂದ ಉಂಟಾಗುವ ಅರೋಗ್ಯ ಸಮಸ್ಯೆಗಳ ಬಗ್ಗೆ ಕುರಿತು ಶಾಲಾ, ಕಾಲೇಜುಗಳಲ್ಲಿ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಿ ಎಂದು ಶಿಕ್ಷಣ ಇಲಾಖೆಗೆ ತಿಳಿಸಿದರು. ಕೆ.ಎಸ್.ಆರ್. ಟಿ. ಸಿ ಬಸ್ಸ್ ನಿಲ್ದಾಣದ ಡಿಪೋಗಳಲ್ಲಿ ನಿರುಪಯುಕ್ತ ಟೈರ್ ಗಳು ಹಾಗೂ ಹಳೆ ಯಂತ್ರೋಪಕರಣಗಳಿದ್ದಲ್ಲಿ ತೆರವುಗೊಳಿಸಿ ಎಂದು ಕೆ.ಎಸ್.ಆರ್. ಟಿ. ಸಿ ಅಧಿಕಾರಿಗಳಿಗೆ ತಿಳಿಸಿದರು.
ಸಭೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಕೆ. ಮೋಹನ್, ಮಲೇರಿಯಾ ನಿಯಂತ್ರಣ ಅಧಿಕಾರಿ ಡಾ; ಕಾಂತರಾಜು, ನಿವೃತ್ತ ಡಿ. ಹೆಚ್. ಒ ಡಾ; ಮರಿಗೌಡ, ಏಡ್ಸ್ ನಿಯಂತ್ರಣ ಅಧಿಕಾರಿ ಡಾ: ಆಶಾಲತಾ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ರಾಜಾಮೂರ್ತಿ ಹಾಗೂ ಲೋಕೋಪಯೋಗಿ ಇಲಾಖೆ ಕಾರ್ಯಪಾಲಕ ಅಭಿಯಂತರ ಹರ್ಷ ಸೇರಿದಂತೆ ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.














