ಮಂಡ್ಯ: ಮೈಸೂರು- ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ದರೋಡೆ ಪ್ರಕರಣಗಳು ಹೆಚ್ಚಾಗುತ್ತಿದ್ದು, ಹೆದ್ದಾರಿಯ ಸರ್ವೀಸ್ ರಸ್ತೆಯಲ್ಲಿ ವಾಹನ ಸವಾರರಿಗೆ ಸುರಕ್ಷತೆ ಇಲ್ಲದಂತಾಗಿದೆ.
ರಾತ್ರಿ ವೇಳೆ ಸರ್ವೀಸ್ ರಸ್ತೆಯಲ್ಲಿ ಓಡಾಡುವರೇ ದರೋಡೆಕೋರರ ಟಾರ್ಗೆಟ್ ಆಗಿದ್ದು, ಹೆದ್ದಾರಿ ಹಾಗೂ ಸರ್ವೀಸ್ ರಸ್ತೆಯಲ್ಲಿ ದರೋಡೆ ಪ್ರಕರಣಗಳು ಹೆಚ್ಚಾಗುತ್ತಲೇ ಇವೆ.
ಆ.15 ರ ರಾತ್ರಿ ಟಾಟಾ ಏಸ್ ವಾಹನ ಅಡ್ಡಗಟ್ಟಿ ದರೋಡೆಗೆ ವಿಫಲ ಯತ್ನ ನಡೆಸಲಾಗಿದ್ದು, ಪ್ರಕರಣ ಮೂರು ದಿನದ ಬಳಿಕ ತಡವಾಗಿ ಬೆಳಕಿಗೆ ಬಂದಿದೆ.
ಅದೃಷ್ಟವಶಾತ್ ಆ ದಿನ ವಾಹನ ನಿಲ್ಲಿಸದೆ ಬಂದಿದ್ದರಿಂದ ವಾಹನ ಚಾಲಕ ಅಪಾಯದಿಂದ ಪಾರಾಗಿದ್ದಾನೆ.
ಅಂದು ಮಂಡ್ಯದ ಇಂಡುವಾಳು ಬಳಿಯ ಸರ್ವೀಸ್ ರಸ್ತೆಯಲ್ಲಿ ಮದ್ದೂರಿನ ನಿಡಘಟ್ಟ ಗ್ರಾಮದ ಪ್ರಸನ್ನರ ವಾಹನದ ಮೇಲೆ ತಡರಾತ್ರಿ ಮಾರಕಾಸ್ತ್ರಗಳೊಂದಿಗೆ ದುಷ್ಕರ್ಮಿಗಳ ಗುಂಪಿನಿಂದ ದಾಳಿ ನಡೆಸಲಾಗಿದೆ. ಗಾಡಿ ನಿಲ್ಲಿಸದ ಕಾರಣಕ್ಕೆ ವಾಹನದ ಮೇಲೆ ಮಾರಾಕಾಸ್ತ್ರಗಳಿಗೆ ಹಲ್ಲೆ ನಡೆಸಲಾಗಿದ್ದು, ಘಟನೆಯಲ್ಲಿ ವಾಹನದ ಭಾಗಗಳು ಜಖಂ ಆಗಿವೆ.
ಅಂದಿನ ಘಟನೆಯನ್ನು ವಾಹನ ಚಾಲಕ ಎಳೆಎಳೆಯಾಗಿ ಬಿಚ್ಚಿಟ್ಟಿದ್ದು, ಹೆದ್ದಾರಿಯ ಸರ್ವೀಸ್ ರಸ್ತೆಯಲ್ಲಿ ರಾತ್ರಿ ವೇಳೆ ಪ್ರಯಾಣಿಸಿದಂತೆ ಮನವಿ ಮಾಡಿದ್ದಾನೆ.
ಹೆದ್ದಾರಿಯಲ್ಲಿ ಮೇಲಿಂದ ಮೇಲೆ ದರೋಡೆ ಪ್ರಕರಣಗಳು ನಡೆಯುತ್ತಿದ್ದರು ಪೊಲೀಸ್ ಇಲಾಖೆ ಸೂಕ್ತ ಕ್ರಮ ಕೈಗೊಳ್ಳದೇ ಕಣ್ಮುಚ್ಚಿ ಕುಳಿತಿದೆ ಎಂದು ವಾಹನ ಚಾಲಕರು ಆರೋಪಿಸಿದ್ದಾರೆ.