ಮನೆ ಮನರಂಜನೆ ಮಂಸೋರೆ ನಿರ್ದೇಶನದ ‘19.20.21’ ಸಿನಿಮಾ ವಿಮರ್ಶೆ

ಮಂಸೋರೆ ನಿರ್ದೇಶನದ ‘19.20.21’ ಸಿನಿಮಾ ವಿಮರ್ಶೆ

0

ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕ ಮಂಸೋರೆ ಅವರು ಈ ಹಿಂದೆ ‘ಹರಿವು’, ‘ನಾತಿಚರಾಮಿ’, ‘ಆಕ್ಟ್ 1978’ ಸಿನಿಮಾಗಳನ್ನು ಮಾಡಿ ಮೆಚ್ಚುಗೆ ಪಡೆದುಕೊಂಡಿದ್ದರು. ಈ ಬಾರಿ ‘19.20.21’ ಹೆಸರಿನ ಒಂದು ನೈಜ ಘಟನೆ ಆಧಾರಿತ ಸಿನಿಮಾ ಮಾಡಿದ್ದಾರೆ. ಆರಂಭದಿಂದಲೂ ಕುತೂಹಲ ಮೂಡಿಸಿದ್ದ ಈ ಸಿನಿಮಾ ಈ ತೆರೆಗೆ ಬಂದಿದೆ. ಹಾಗಾದರೆ, ಈ ಸಿನಿಮಾ ಹೇಗಿದೆ?

ಇದು ಮಂಜು ಕೂಡುಮಲೆಯ ಕಥೆ

ಆದಿವಾಸಿ ಸಮುದಾಯದ ಮಂಜು (ಶೃಂಗ) ಪದವಿ ಓದುತ್ತಿರುವ ವಿದ್ಯಾರ್ಥಿ. ಭಗತ್ ಸಿಂಗ್, ಡಾ. ಅಂಬೇಡ್ಕರ್ರಂತಹ ಮಹನೀಯರನ್ನು ಓದಿಕೊಂಡಿರುವ ಆತನಲ್ಲಿ ತನ್ನ ಸಮುದಾಯಕ್ಕೆ, ತನ್ನ ಆದಿವಾಸಿ ಜನರಿಗೆ ಸಿಗಬೇಕಾದ ಕನಿಷ್ಠ ಸೌಲಭ್ಯಗಳು ಸಿಕ್ಕಿಲ್ಲವೆಂಬ ಆಕ್ರೋಶ ಮಡುಗಟ್ಟಿರುತ್ತದೆ. ಆಗಾಗ ಅದನ್ನು ವ್ಯಕ್ತಪಡಿಸುತ್ತಿರುತ್ತಾನೆ ಕೂಡ. ಇನ್ನು, ಆ ಆದಿವಾಸಿ ಜನರು ವಾಸಿಸುತ್ತಿರುವ ಸ್ಥಳವು ನಕ್ಸಲ್ ಪೀಡಿತ ಪ್ರದೇಶ ಎಂದು ಘೋಷಣೆ ಆಗಿರುತ್ತದೆ. ಹಾಗಾಗಿ, ಒಂದಲ್ಲ ಒಂದು ಸಮಸ್ಯೆಗಳು ಅಲ್ಲಿನ ಜನರಿಗೆ ದಿನನಿತ್ಯ ತಪ್ಪಿದ್ದಲ್ಲ. ಹೀಗಿರುವಾಗ ಮಂಜು ಮತ್ತು ಆತನ ತಂದೆ ರಾಮಣ್ಣನನ್ನು ಬಂಧಿಸುವ ಎಎನ್ಎಫ್ (ನಕ್ಸಲ್ ನಿಗ್ರಹ ದಳ), ಅವರ ಮೇಲೆ ಯುಎಪಿಎ ಕೇಸ್ ದಾಖಲಿಸುತ್ತದೆ. ಈ ಆದಿವಾಸಿಗಳ ಮೇಲೆ ಇಂಥದ್ದೊಂದು ಗಂಭೀರ ಕೇಸ್ ದಾಖಲಾಗಿದ್ದೇಕೆ? ಅಷ್ಟಕ್ಕೂ ಮಂಜು ಮತ್ತು ಆತನ ತಂದೆ ರಾಮಣ್ಣ ಮಾಡಿದ್ದ ತಪ್ಪಾದಾರೂ ಏನು? ಇಂತಹ ಪ್ರಶ್ನೆಗಳೊಂದಿಗೆ ಸಿನಿಮಾ ಸಾಗುತ್ತದೆ.

ಇದು ನೈಜ ಘಟನೆ

ಅಂದಹಾಗೆ, ಇದು 2012 ಮಾರ್ಚ್ 3ರಂದು ನಕ್ಸಲ್ ನಿಗ್ರಹ ಪಡೆಯಿಂದ ಬಂಧಿತರಾದ ವಿಠಲ್ ಮಲೆಕುಡಿಯ ಹಾಗೂ ಆತನ ತಂದೆ ಲಿಂಗಣ್ಣ ಮಲೆಕುಡಿಯ ಅವರ ಕಾನೂನು ಹೋರಾಟದ ಕಥೆ. ವಿಠಲ್ ಮಲೆಕುಡಿಯ ಪಾತ್ರವೇ ಈ ಸಿನಿಮಾದಲ್ಲಿ ಮಂಜು ಕೂಡುಮಲೆ ಆಗಿ ಬದಲಾಯಿಸಲಾಗಿದೆ.

ಮನಕಲುಕುವ ಮಂಸೋರೆ

ಈ ಹಿಂದಿನ ಮೂರು ಸಿನಿಮಾಗಳಿಗೆ ಹೋಲಿಸಿದೆ ಇಲ್ಲಿ ನಿರ್ದೇಶಕ ಮಂಸೋರೆ ಬೇರೆಯದೇ ರೀತಿಯ ಪ್ರಯೋಗ ಮಾಡಿದ್ದಾರೆ. ಒಂದು ಸಮುದಾಯದ ನೋವಿನ ಕಥೆಯನ್ನು ಬಹಳ ಎಚ್ಚರಿಕೆಯಿಂದ ಎಲ್ಲಿಯೂ ಹೆಚ್ಚು ಕಮ್ಮಿಯಾಗದಂತೆ, ತೆರೆಗೆ ಅಳವಡಿಸಿದ್ದಾರೆ. ಸಿನಿಮ್ಯಾಟಿಕ್ ಲಿಬರ್ಟಿಯನ್ನು ಹೆಚ್ಚು ಆಶ್ರಯಿಸಿದೇ, ನೈಜತೆಗೆ ಜಾಸ್ತಿ ಒತ್ತು ನೀಡಿ ಸಿನಿಮಾ ಮಾಡಿರುವ ಮಂಸೋರೆ, ಕಲಾವಿದರ ಆಯ್ಕೆಯಲ್ಲಿಯೇ ಮೊದಲ ಗೆಲುವು ಸಂಪಾದಿಸಿದ್ದಾರೆ. ಕಥೆಯನ್ನು ನಾನ್ಲೀನಿಯರ್ ಶೈಲಿಯಲ್ಲಿ ಹೇಳುತ್ತ ಸಾಗುವ ಅವರು, ಜೊತೆ ಜೊತೆಗೆ ಸಂವಿಧಾನದ ಬಗ್ಗೆ ಅರಿವು ಮೂಡಿಸುವ ಪ್ರಯತ್ನ ಮಾಡಿದ್ದಾರೆ. ಸಂವಿಧಾನದ ಮಹತ್ವ ಮತ್ತು ಪ್ರತಿಯೊಬ್ಬರು ಸಂವಿಧಾನದ ಬಗ್ಗೆ ತಿಳಿದುಕೊಳ್ಳುವುದು ಎಷ್ಟು ಮುಖ್ಯ ಎಂಬ ವಿಚಾರವನ್ನು ಹೇಳಲಾಗಿದೆ.

ಪ್ರಭಾವಿಗಳ ಒತ್ತಡಕ್ಕೆ ಮಣಿದಾಗ ಪೊಲೀಸ್ ವ್ಯವಸ್ಥೆ, ಅರಣ್ಯ ಇಲಾಖೆ ಯಾವ ರೀತಿ ವರ್ತಿಸಬೇಕಾಗುತ್ತದೆ ಎಂಬ ಕರಾಳ ವಿಚಾರವೂ ಇಲ್ಲಿದೆ. ಕ್ಲೈಮ್ಯಾಕ್ಸ್ನಲ್ಲಿ ಚಪ್ಪಾಳೆ ಗಿಟ್ಟಿಸುವಂತಹ, ಚಿಂತನೆಗೆ ಈಡುಮಾಡುವಂತಹ ಅನೇಕ ಸಂಭಾಷಣೆಗಳಿವೆ. ಒಂದು ಉತ್ತಮವಾದ ಸಿನಿಮಾವನ್ನು ನೋಡುವ ತೃಪ್ತಿಯ ಜೊತೆಗೆ ಇಂಥದ್ದೊಂದು ಕರಾಳ ಘಟನೆ ನಮ್ಮ ನಡುವೆಯೇ ನಡೆದಿದೆ ಮತ್ತು ನಮ್ಮ ಅಕ್ಕಪಕ್ಕವೇ ನಡೆದಿದ್ದರೂ, ಅದು ನಮ್ಮ ಅರಿವಿಗೆ ಬಾರದೇ ಹೋಗಿದೆ ಎಂಬ ಬೇಸರ ಪ್ರೇಕ್ಷಕನಿಗೆ ಕಾಡದೇ ಇರದು.

ಮೌನದಲ್ಲೇ ಗಮನಸೆಳೆಯುವ ಶೃಂಗ

ಈ ಸಿನಿಮಾದ ಮಂಜು ಎಂಬ ಮುಖ್ಯ ಪಾತ್ರವನ್ನು ನಿಭಾಯಿಸಿರುವ ನಟ ಶೃಂಗ, ತಾನೆಷ್ಟು ಪ್ರಬುದ್ಧ ಕಲಾವಿದ ಅನ್ನೋದನ್ನು ಮತ್ತೊಮ್ಮೆ ಸಾಬೀತು ಮಾಡಿದ್ದಾರೆ. ಹೆಚ್ಚು ಮಾತಿಲ್ಲದೆ, ತನ್ನ ಅಸಹಾಯಕತೆ, ನೋವು, ಸಂಕಟ, ಆಕ್ರೋಶ ಎಲ್ಲವನ್ನೂ ತೋರ್ಪಡಿಸುವ ಅವರ ನಟನಾ ಶೈಲಿ ಅನನ್ಯವಾಗಿದೆ. ಸಿನಿಮಾದ ಕೊನೆಯಲ್ಲಿ ಅವರು ನಗುತ್ತ ನಿಲ್ಲುವ ಒಂದು ದೃಶ್ಯ ಸಾಕಷ್ಟು ಅರ್ಥಗಳನ್ನು ಹೊರಹೊಮ್ಮಿಸುತ್ತದೆ. ಶೃಂಗ ಅವರ ಜೊತೆಗೆ ಹೆಚ್ಚು ಸ್ಕೋರ್ ಮಾಡುವುದು ನಟ ಬಾಲಾಜಿ ಮನೋಹರ್. ವಕೀಲರ ಪಾತ್ರ ಮಾಡಿರುವ ಅವರು ಕ್ಲೈಮ್ಯಾಕ್ಸ್ನಲ್ಲಿ ಸಂವಿಧಾನದ ಕುರಿತು ಹೇಳುವಾಗಿನ ದೃಶ್ಯಗಳು ಮೈನವಿರೇಳಿಸುವಂತಿದೆ. ಏನೇ ಆಗಲಿ, ಒಬ್ಬ ನಿರಾಪರಾಧಿಗೆ ಶಿಕ್ಷೆ ಆಗಬಾರದೆಂಬ ಆ ಪಾತ್ರದ ಕಳಕಳಿ ಇಷ್ಟವಾಗುತ್ತದೆ.

ಎಂಡಿ ಪಲ್ಲವಿ, ರಾಜೇಶ್ ನಟರಂಗಗೆ ಫುಲ್ ಮಾರ್ಕ್ಸ್

ಈ ಸಿನಿಮಾದಲ್ಲಿ ರಂಗಭೂಮಿ ಕಲಾವಿದರ ದೊಡ್ಡ ದಂಡೇ ಇದೆ. ಮಂಜು ತಾಯಿ ಪಾತ್ರ ಮಾಡಿರುವ ಎಂಡಿ ಪಲ್ಲವಿ ಮತ್ತು ತಂದೆ ಪಾತ್ರ ಮಾಡಿರುವ ಮಹದೇವ್ ನಿಜಕ್ಕೂ ಆ ಪಾತ್ರಗಳೇ ತಾವಾಗಿದ್ದಾರೆ. ಸಾಮಾಜಿಕ ಹೋರಾಟಗಾರ ರಫಿ ಪಾತ್ರದಲ್ಲಿ ರಾಜೇಶ್ ನಟರಂಗ ಅವರದ್ದು ಗಮನಸೆಳೆಯುವ ನಟನೆ. ಪೊಲೀಸ್ ಅಧಿಕಾರಿ ಪಾತ್ರ ಮಾಡಿರುವ ಕೃಷ್ಣ ಹೆಬ್ಭಾಳೆ ನಟನೆ ಕಾಡುತ್ತದೆ. ಸಂಪತ್, ಅವಿನಾಶ್, ರವಿ ಭಟ್, ಸಂದೀಪ್, ವಿಶ್ವ ಕರ್ಣ, ಸತೀಶ್ಚಂದ್ರ ಎಲ್ಲರೂ ಕೂಡ ಅಚ್ಚುಕಟ್ಟಾಗಿ ತಮ್ಮ ಪಾತ್ರಗಳಿಗೆ ಜೀವ ತುಂಬಿದ್ದಾರೆ.

ಶಿವು ಬಿಕೆ ಕುಮಾರ್ ಕೆಲಸಕ್ಕೆ ಭೇಷ್ ಎನ್ನಲೇಬೇಕು

ಈ ಸಿನಿಮಾದ ಮತ್ತೋರ್ವ ಹೀರೋ ಛಾಯಾಗ್ರಾಹಕ ಶಿವು ಬಿಕೆ ಕುಮಾರ್. ಈ ಸಿನಿಮಾದ ಬಹುತೇಕ ದೃಶ್ಯಗಳನ್ನು ಛಾಯಾಗ್ರಾಹಕ ಶಿವು ಹೆಗಲ ಮೇಲೆ ಕ್ಯಾಮೆರಾವನ್ನು ಹೊತ್ತುಕೊಂಡೇ ಚಿತ್ರಿಸಿದ್ದಾರೆ. ಅದು ಪರಿಣಾಮಕಾರಿಯಾಗಿ ಮೂಡಿಬಂದಿದೆ. ಹಾಡುಗಳಿಗಾಗಿ ಬಿಂದುಮಾಲಿನಿ ಮತ್ತು ಹಿನ್ನೆಲೆ ಸಂಗೀತಕ್ಕಾಗಿ ರೋಣದ ಬಕ್ಕೇಶ್ ಅವರು ಮೆಚ್ಚುಗೆಗೆ ಅರ್ಹರು.

ಹಿಂದಿನ ಲೇಖನಶಿವಮೊಗ್ಗ: ಆಯನೂರಲ್ಲಿ ಬಿಜೆಪಿ ಪ್ರಗತಿರಥಕ್ಕೆ ಚಾಲನೆ
ಮುಂದಿನ ಲೇಖನಬಿಜೆಪಿ ನಾಯಕರು ರಾಜ್ಯಕ್ಕೆ ಬಂದು ಹೋಗುವುದು ಸೂಟ್ ಕೆಸ್ ತೆಗೆದುಕೊಂಡು ಹೋಗುವುದಕ್ಕಾ?: ಬಿಜೆಪಿಗೆ ನೇರ ಪ್ರಶ್ನೆ ಹಾಕಿದ ಹೆಚ್ ಡಿಕೆ