ಲೋಳೆಸರವು ಒಂದು ಬಹುವಾರ್ಷಿಕ ಬೆಳೆ ಯಾಗಿದ್ದು ಭಾರತದೆಲ್ಲೆಡೆ ಬೆಳೆಯಲಾಗುತ್ತದೆ. ಇದನ್ನು ಪ್ರಥಮ ಚಿಕಿತ್ಸೆ ಅಥವಾ ಔಷಧಿ ಗಿಡವೆಂದು ಕರೆಯ ಲಾಗುತ್ತದೆ. (ಮಕ್ಕಳು) ತಾಯಿ ಹಾಲು ಕುಡಿಯು ವುದನ್ನು ಬಿಡಿಸಲು ಬಳಸುವ ಮೂಸಾಂಬ್ರ ಎಂಬ ಕಹಿ ವಸ್ತುವಿನ ಮೂಲವೇ ಲೋಳೆಸರ ಸ್ತ್ರೀಯರಲ್ಲಿ ಕಂಡುಬರುವ ಮುಟ್ಟಿನ ತೊಂದರೆಗಳಿಗೆ ಇದು ಉತ್ತಮ ಔಷಧಿಯಾಗಿರುವುದರಿಂದ ಸಂಸ್ಕೃತದಲ್ಲಿ ‘ಕುಮಾರಿ’ ಎಂದು ಕರೆಯಲಾಗುತ್ತದೆ.
ಗುಜರಾತ್ ನಲ್ಲಿ ಲೋಳೆಸರದ ಉಪ್ಪಿನಕಾಯಿಯನ್ನು ತಯಾರಿಸುತ್ತಾರೆ ಇದನ್ನು ಸುವಾಸನೆ ವಸ್ತುವಾಗಿ ಮದ್ಯಸಾರ ಹಾಗೂ ಮದ್ಯಸಾರರಹಿತ ಪಾನೀಯಗಳಲ್ಲೂ ಮತ್ತು ಇತರ ಪಾನೀಯಗಳಲ್ಲೂ ಬಳಸುತ್ತಾರೆ.
ಲೋಳೆಸರದ ಎಲೆಗಳನ್ನು ಬುಡಕ್ಕೆ ಕತ್ತರಿಸಿ, ನಂತರ ಸುರಿಯುವ ಹಳದಿ ಬಣ್ಣದ ಕಹಿ ರಸವನ್ನು ಹೋಗಲು ಬಿಟ್ಟು ನಂತರ ಬರುವ ತಿಳಿ ಬಿಳಿ ಬಣ್ಣದ ಲೋಳೆಯಂತಹ ವಸ್ತುವನ್ನು ಔಷಧಿಯಾಗಿ ಬಳಸಬೇಕು. ಮನೆಯ ಹಿತ್ತಲಲ್ಲಿ ಇದನ್ನು ಬೆಳೆಯುವುದರಿಂದ ಬೇಕಾದಾಗ ಕಿತ್ತು ಉಪಯೋಗಿಸಿಕೊಳ್ಳಬಹುದು. ನೀರು ನಿಂತ ಜಾಗದಲ್ಲಿ ಇದು ಚೆನ್ನಾಗಿ ಬೆಳೆಯುವುದಿಲ್ಲ.
ಸಸ್ಯವರ್ಣನೆ
ಆಲೋ (ಆಲೋ ವೆರಾ) ಲಿಲಿಯೇಸಿ ಜಾತಿಗೆ ಸೇರಿದ ಗಿಡ ಈ ಗಿಡವು ಒರಟಾಗಿ ಕಾಣುವ ನಿಜವಾದ ಕಾಂಡವಿಲ್ಲದ ಸಸ್ಯ ಗಿಡವು ಭೂಮಿಯಿಂದಲೇ ಮೂಡಿ ಬಂದ ಹಾಗೆ ಎಲೆಗಳು ಗುಂಪಾಗಿರುತ್ತವೆ. ಎಲೆಗಳು ದಪ್ಪವಾಗಿದ್ದು ಅಂಚಿನಲ್ಲಿ ಮುಳ್ಳುಗಳಿರುತ್ತವೆ. ಹೂಗಳು ಹಳದಿ ಕಿತ್ತಲೆ ಬಣ್ಣವಿರುತ್ತವೆ ಬೀಜಗಳಿಂದಲೂ ಸಸಿಗಳನ್ನು ಪಡೆಯಬಹುದು.
ಕಾಂಡವು ಚಿಕ್ಕದಾಗಿದ್ದು ಒಂದರಿಂದ ಎರಡು ಅಡಿ ಎತ್ತರ ಬೆಳೆಯುತ್ತದೆ. ಭೂಮಿಯೊಳ ಗಿಂದಲೇ ಹೊಂದಿರುವ ಹಸಿರು ಬಣ್ಣದ ಎಲೆಗಳು, ದಪ್ಪ ಹೆಡೆಗಳಂತಿದ್ದು ರಸಭರಿತವಾಗಿರುತ್ತದೆ.
ಎಲೆಗಳ ಎರಡೂ ಅಂಚಿನಲ್ಲಿ ಅಭಿಮುಖವಾಗಿ ಮುಳ್ಳುಗಳು ಹುಟ್ಟಿಕೊಳ್ಳುತ್ತವೆ. ಪ್ರತಿಗಿಡದಲ್ಲಿ ಎಂಟು ಹತ್ತು ಎಲೆಗಳಿರುತ್ತವೆ. ಹಳದಿ ಹೂವುಗಳು ಗೊಂಚಲುಗಳಲ್ಲಿ ಬರುತ್ತವೆ.
ಉಗಮ ಮತ್ತು ಹಂಚಿಕೆ
ಪೂರ್ವ ಮತ್ತು ದಕ್ಷಿಣ ಆಫ್ರಿಕಾದ ಕ್ಯಾನರಿ ದ್ವೀಪಗಳು ಮತ್ತು ಸ್ಪೇನ್ ಇದರ ತವರು. ಇದನ್ನು ಭಾರತಕ್ಕೆ 16ನೇ ಶತಮಾನದಲ್ಲಿ ಪರಿಚಯಿಸಲಾಯಿತು.
ಮಣ್ಣು
ಇದು ಸಾಮಾನ್ಯವಾಗಿ ಎಲ್ಲಾ ವಿಧವಾದ ಮಣ್ಣುಗಳಲ್ಲಿ ಬೆಳೆಯಬಲ್ಲದು. ಮರಳು ಮಣ್ಣು ಮತ್ತು ಬಯಲು ಪ್ರದೇಶದ ಗೋಡು ಮಣ್ಣು ಹೆಚ್ಚು ಸೂಕ್ತ
ಹವಾಗುಣ :
ಮಾರ್ಚ್ ಮತ್ತು ಜೂನ್ ತಿಂಗಳುಗಳಲ್ಲಿ ಚೆನ್ನಾಗಿ ಬೆಳೆಯುತ್ತದೆ. ಎಲ್ಲಾ ತರಹದ ವಾತಾವರಣದಲ್ಲಿ ಹೊಂದಿಕೊಳ್ಳುವುದರಿಂದ ಎಲ್ಲಾ ಭಾಗಗಳಲ್ಲೂ ಬೆಳೆಯಬಹುದಾಗಿದೆ. ಇದು ಚೆನ್ನಾಗಿ ತೇವಾಂಶಭರಿತ ಬಿಸಿ ಅಥವಾ ಒಣ ವಾತಾವರಣದಲ್ಲಿ ಚೆನ್ನಾಗಿ ಬರುತ್ತದೆ. ಒಣ ಪ್ರದೇಶದಲ್ಲಿ ಆಗಾಗ ನೀರು ಕೊಟ್ಟರೆ ಉತ್ಕೃಷ್ಟವಾಗಿ ಬೆಳೆಯುತ್ತದೆ.
ಬೇಸಾಯ ಕ್ರಮಗಳು :
ಸಸ್ಯಾಭಿವೃದ್ಧಿ : ಲೋಳೆಸರವನ್ನು ಸಾಮಾನ್ಯವಾಗಿ ಬೇರು ಕಂದುಗಳಿಂದ, ಗುಪ್ತಕಾಂಡದ ತುಂಡುಗಳಿಂದ ಅಭಿವೃದ್ಧಿ ಮಾಡಲಾಗುತ್ತದೆ.
ಭೂಮಿ ಸಿದ್ಧತೆ : ಭೂಮಿಯನ್ನು ನಾಟಿ ಮಾಡುವುದಕ್ಕೆ ಮೊದಲು ಚೆನ್ನಾಗಿ ಅಗೆದು ಹೆಂಟೆ ಗಳನ್ನು ಪುಡಿಮಾಡಿ, ಸ್ವಚ್ಛಗೊಳಿಸಬೇಕು. ಅವಶ್ಯಕತೆಯಿದ್ದಲ್ಲಿ ಸಣ್ಣನೆಯ ಕಾಲುವೆಗಳನ್ನು ತೆಗೆದು ಹೆಚ್ಚುವರಿ ನೀರನ್ನು ಬಸಿದು ಹೋಗುವಂತೆ ಮಾಡಬೇಕು. 1 x 1 ಮೀ. (ಭೂಮಿಗೆ 5 ಕೆ.ಜಿ.ಯಷ್ಟು ಕೊಟ್ಟಿಗೆ ಗೊಬ್ಬರವನ್ನು ಹಾಕಿ ಮಣ್ಣಿನಲ್ಲಿ ಚೆನ್ನಾಗಿ ಮಿಶ್ರ ಮಾಡಬೇಕು).
ನಾಟಿ ಮಾಡುವುದು :
30 x 60 ಸೆಂ.ಮೀ. ಅಥವಾ 60 x 45 ಸೆಂ.ಮೀ. ಅಂತರದಲ್ಲಿ 14 ರಿಂದ 20 ಗಿಡಗಳನ್ನು ನಾಟಿ ಮಾಡಬಹುದು. ಸುಮಾರು 15 x 18 ಸೆಂ.ಮೀ. ಉದ್ದನೆಯ ಬೇರು ಕಂದುಗಳು ಅಥವಾ ಗುಪ್ತಕಾಂಡದ ತುಂಡುಗಳನ್ನು ಮೂರನೇ ಎರಡು ಭಾಗದಷ್ಟು ಭೂಮಿಗೆ ಸೇರುವಂತೆ ನಾಟಿ *ಮಾಡಬೇಕು.
ಗೊಬ್ಬರ :
20 ಕೆ.ಜಿ. ಕೊಟ್ಟಿಗೆ ಗೊಬ್ಬರವನ್ನು ಭೂಮಿಗೆ ಹಾಕುವುದರಿಂದ ಮಣ್ಣಿನ ಫಲವತ್ತತೆಯ ಜೊತೆಗೆ ಬೆಳೆಯ ಬೆಳವಣಿಗೆಯನ್ನು ಹೆಚ್ಚಿಸಬಹುದು.
ನೀರಾವರಿ :
ನಾಟಿ ಮಾಡಿದ ಕೂಡಲೇ ಗಿಡಗಳಿಗೆ ನೀರು ಕೊಡುವುದು ಸೂಕ್ತ ಗಿಡಗಳು ಬೆಳೆಯುವ ಸಮಯದಲ್ಲಿ ಹವಾಮಾನ ಪರಿಸ್ಥಿತಿಗನುಗುಣವಾಗಿ ನೀರು ಕೊಡುವುದು ಒಳ್ಳೆಯದು. ಭೂಮಿಯಲ್ಲಿ ಹೆಚ್ಚು ಕಾಲ ನೀರು ನಿಲ್ಲದ ಹಾಗೆ ನೋಡಿಕೊಳ್ಳುವುದು ಅಗತ್ಯ.
ಕಳೆ ಹತೋಟಿ :
ಕೈಯಿಂದ ಕಳೆ ನಿಯಂತ್ರಣ ಮಾಡಿ ಭೂಮಿಯಲ್ಲಿ ಕಳೆ ಇಲ್ಲದಂತೆ ನೋಡಿಕೊಳ್ಳಬೇಕು.
ಕೀಟ ಮತ್ತು ರೋಗಗಳು :
ಸಾಮಾನ್ಯವಾಗಿ ಈ ಗಿಡಕ್ಕೆ ಯಾವುದೇ ತರಹದ ರೋಗ ಮತ್ತು ಕೀಟಗಳ ಬಾಧೆಇರುವುದಿಲ್ಲ. ನೀರು ಹೆಚ್ಚಾದಲ್ಲಿ ಚುಕ್ಕೆ ರೋಗ ತಗಲುತ್ತದೆ. ಅಂತಹ ಎಲೆಗಳನ್ನು ಕಿತ್ತು ಹಾಕಬೇಕು.
ಕೊಯ್ದು ಮತ್ತು ಇಳುವರಿ :
ನಾಟಿ ಮಾಡಿದ 8 ತಿಂಗಳ ನಂತರ ಬೆಳೆ ಕೊಯ್ಲಿಗೆ ಬರುತ್ತದೆ. 1 x 1 ಮೀ. ಪ್ರದೇಶದಿಂದ 750 ಕೆ.ಜಿ.ಯಷ್ಟು ತಾಜಾ ಸಸ್ಯದ ಇಳುವರಿ ಪಡೆಯಬಹುದು. ಬೇಕಾದಾಗ ಎಲೆಗಳನ್ನು ತೆಗೆದು ಔಷಧಿಯ ಬಳಕೆಗೆ ಉಪಯೋಗಿಸಿಕೊಳ್ಳಬಹುದು.
ಉಪಯುಕ್ತ ಭಾಗಗಳು :
ಲೋಳೆಸರದ ಎಲೆ ಕತ್ತರಿಸಿದಾಗ ಬರುವ ಲೋಳೆಯಂತಹ ದ್ರವ.
ರಾಸಾಯನಿಕ ಘಟಕಗಳು :
ಆಲೊಎಮೊಡಿನ್, ಆಲೊಯಿನಿನ್, ಬಾರ್ಬಲಾಯಿನ್, ಗ್ಯಾಲಕ್ಟೋಸ್ ಮುಂತಾದವುಗಳು ಇರುತ್ತವೆ.
ಔಷಧೀಯ ಗುಣಗಳು :
★ಲೋಳೆಸರವು ಪಿತ್ತಶಾಮಕ, ಕ್ರಿಮಿನಾಶಕ, ಮೂತ್ರವರ್ಧಕ ಮತ್ತು ನೋವು ನಿವಾರಕ. ಮಲಬದ್ಧತೆ ನಿವಾರಿಸುವಂತಹುದಾಗಿದೆ.
★ ಕಣ್ಣುಗಳು ಕೆಂಪಗಾಗಿದ್ದರೆ ಮತ್ತು ಕಣ್ಣು ನೋವಾಗಿದ್ದಲ್ಲಿ ಲೋಳೆಸರದ ತಿರುಳನ್ನು ಗುಲಾಬಿ ಜಲದಲ್ಲಿ ಬೆರೆಸಿ ಕಣ್ಣಿನ ಮೇಲೆ ಲೇಪಿಸಿಕೊಳ್ಳಬೇಕು.
★ ಯಕೃತ್ (liver) ಮತ್ತು ಪೀಹ (spleen)ಗಳ ಗಾತ್ರ ದೊಡ್ಡದಾಗಿದ್ದಲ್ಲಿ ಲೋಳೆಸರದ ರಸವನ್ನು ಅರಿಶಿನಪುಡಿಯೊಡನೆ ಬೆರೆಸಿ ದಿನಕ್ಕೆರಡು ಬಾರಿ ಖಾಲಿಹೊಟ್ಟೆಯಲ್ಲಿ ಸೇವಿಸಬೇಕು.
★ಈ ಜ್ವರ ಬರುತ್ತಿದ್ದಲ್ಲಿ ಲೋಳೆಸರದ ರಸದೊಂದಿಗೆ ಒಂದು ಚಿಟಕಿ ಹಿಪ್ಪಲಿ ಪುಡಿ ಮತ್ತು ಜೇನುತುಪ್ಪ ಬೆರೆಸಿ ಸೇವಿಸಬೇಕು.
★ ಗಾಯಗಳಾಗಿದ್ದಲ್ಲಿ ಲೋಳೆಸರದ ಎಲೆಗಳನ್ನು ಕುದಿಸಿ ನಂತರ ಒಳಗಿನ ತಿರುಳನ್ನು ತೆಗೆದು ಅದನ್ನು ಪೋಲ್ಟೀಸ್ ಹಾಕುವುದರಿಂದ ಬೇಗನೆ ಗುಣವಾಗುತ್ತದೆ.
★ ಕೆಮ್ಮು ಇರುವಾಗ ಲೋಳೆಸರದ ರಸದಲ್ಲಿ ಕರಿಮೆಣಸಿನ ಪುಡಿ ಮತ್ತು ಜೇನುತುಪ್ಪ ಬೆರೆಸಿ ಸೇವನೆ ಮಾಡುವುದರಿಂದ ಕಫವು ಕರಗಿ ಕೆಮ್ಮು ವಾಸಿಯಾಗುತ್ತದೆ.
★ಮಹಿಳೆಯರಲ್ಲಿ ಕಂಡುಬರುವ ಮುಟ್ಟಿನ ತೊಂದರೆಗಳಿಗೆ ಲೋಳೆಸರದ ರಸ ಉತ್ತಮ ಔಷಧಿಯಾಗಿ ಕೆಲಸ ಮಾಡುತ್ತದೆ.
★ ಅನಿಯಮಿತ ಮುಟ್ಟಿನ ತೊಂದರೆಯಿರುವ ಸ್ತ್ರೀಯರು ಲೋಳೆಸರದ ರಸವನ್ನು ಕಲ್ಲುಸಕ್ಕರೆಯೊಡನೆ ಸೇವಿಸಬೇಕು.
★ ಸುಟ್ಟಗಾಯಗಳಾಗಿದ್ದಲ್ಲಿ ಲೋಳೆಸರದ ರಸವನ್ನು ಜೀರಿಗೆಯೊಡನೆ ಅರೆದು ಲೇಪಿಸುವುದರಿಂದ ಗಾಯ ವಾಸಿಯಾಗುವುದಲ್ಲದೇ ಉರಿಯೂ ತಗ್ಗುತ್ತದೆ ಮತ್ತು ಕಲೆಯೂ ಉಳಿಯುವುದಿಲ್ಲ.
ಅಡುಗೆ ಮಾಡುವಾಗ ಹೆಣ್ಣುಮಕ್ಕಳು ಸುಟ್ಟುಕೊಳ್ಳುವುದು ಸಾಮಾನ್ಯ ಸಂಗತಿ. ಆಗ ಲೋಳೆ ಸರವನ್ನು ಕತ್ತರಿಸಿ ರಸ ತೆಗೆದು ಲೇಪಿಸಿಕೊಂಡಲ್ಲಿ ಉರಿ, ನೋವು ಕಡಿಮೆಯಾಗುತ್ತದೆ.
★ ಮೂಲವ್ಯಾಧಿಯ ತೊಂದರೆಯಿರುವವರು ಲೋಳೆಸರದ ತಿರುಳನ್ನು ಕಲ್ಲುಸಕ್ಕರೆ ಬೆರೆಸಿ ತಿನ್ನಬೇಕು.
★ನೆಗಡಿಯಿಂದ ಬಳಲುವವರು ಲೋಳೆಸರದ ತಿರುಳನ್ನು ಜೇನುತುಪ್ಪ ಮತ್ತು ಅರಿಶಿನದೊಂದಿಗೆ ಬೆರೆಸಿ ಸೇವಿಸಬೇಕು.
★ ಮಕ್ಕಳಲ್ಲಿ ಹೊಟ್ಟೆನೋವಿನ ಬಾಧೆಯಿದ್ದಲ್ಲಿ ಲೋಳೆಸರದ ರಸದಲ್ಲಿ ಒಂದು ಚಿಟಿಕೆ ಹಿಂಗು ಬೆರೆಸಿ ಹಾಲಿನೊಂದಿಗೆ ಸೇರಿಸಿ ಕುಡಿಸಬೇಕು. ಹಾಲೂಡಿಸುವ ಮಕ್ಕಳಿಗಾದರೆ ತಾಯಿ ಹಾಲಿನಲ್ಲಿಯೇ ಬೆರಸಿ ಕುಡಿಸಬೇಕು.
★ಸೌಂದರ್ಯವರ್ಧಕ : ಲೋಳೆಸರವು ಅತ್ಯುತ್ತಮ ಸೌಂದರ್ಯವರ್ಧಕವಾಗಿದ್ದು ಅನೇಕ ಕ್ರೀಂಗಳಲ್ಲಿ ಮತ್ತು ಶಾಂಪೂಗಳ ತಯಾರಿಕೆಯಲ್ಲಿ ಬಳಸುತ್ತಾರೆ. ಮನೆಯಲ್ಲಿಯೇ ಇದರಿಂದ ಮಾಯಿಶ್ಚರೈಸರ್ ತಯಾರಿಸಿಕೊಳ್ಳಬಹುದು.
ಅರ್ಧ ಚಮಚ ನಿಂಬೆರಸ ಮತ್ತು ಅರ್ಧ ಚಮಚೆ ಲೋಳೆಸರದ ರಸವನ್ನು ಬೆರೆಸಿ ಇದಕ್ಕೆ 1 ಚಮಚೆ ನೀರು ಬೆರೆಸಬೇಕು. ಇದನ್ನು ಮುಖ ಮತ್ತು ಕುತ್ತಿಗೆಗೆ ಹಚ್ಚಿಕೊಂಡು 15 ನಿಮಿಷಗಳ ನಂತರ ತೊಳೆದುಕೊಳ್ಳಬೇಕು.
★ ಲೋಳೆಸರದ ರಸ ಒಂದು ಚಮಚೆ, ಗುಲಾಬಿ ಜಲ ಒಂದು ಚಮಚೆ, ಬೆಣ್ಣೆ 4 ಚಮಚೆ ಬೆರೆಸಿಟ್ಟುಕೊಂಡು ಪ್ರತಿದಿನ ರಾತ್ರಿ ಮಲಗುವ ಮುಂಚೆ ಮುಖಕ್ಕೆ ಲೇಪಿಸಿಕೊಳ್ಳು ವುದರಿಂದ ಮುಖದ ಕಾಂತಿ ಹೆಚ್ಚುತ್ತದಲ್ಲದೇ ಮೊಡವೆಗಳು ಉಂಟಾಗುವುದಿಲ್ಲ.
★ತಲೆಹೊಟ್ಟಿನ ತೊಂದರೆಯಿರುವವರು ಲೋಳೆಸರದ ತಿರುಳನ್ನು ತಲೆಗೆ ಹಚ್ಚಿಕೊಂಡು ಒಂದು ಗಂಟೆ ಬಿಟ್ಟು ಸ್ನಾನ ಮಾಡುವುದರಿಂದ ಹೊಟ್ಟು ಕಡಿಮೆಯಾಗುವುದಲ್ಲದೇ ಕೂದಲು ಆರೋಗ್ಯಕರವಾಗಿರುತ್ತದೆ.
★ ಮಾರುಕಟ್ಟೆಯಲ್ಲಿ ಲೋಳೆಸರದಿಂದ ತಯಾರಿಸಿದ ಕುಮಾರ್ಯಾಸವ, ಆಲೊ ಜ್ಯೂಸ್ ಮತ್ತು ಆಲೊ ಕ್ರೀಂಗಳು ದೊರೆಯುತ್ತವೆ.
ಇತರ ಭಾಷೆಗಳಲ್ಲಿ
ಸಂಸ್ಕೃತ — ಕುಮಾರಿ, ಧೃತಕುಮಾರಿ, ಇಕ್ಷುರ ಮಲ್ಲಿಕಾ
ಹಿಂದಿ — ಘಿಕನ್ವರ್, ಮ್ಯುಸಂಬರ್, ಕುಮಾರಿ
ಮರಾಠಿ — ಕೋರ್‌ಫಡ್
ತಮಿಳು — ಕತ್ತಾಳ್ಮೆ, ಕುಮಾರಿ
ತೆಲುಗು ₋ ಕಲಬಂದ
ಮಲಯಾಳಂ — ಕಟ್ಟವಲ
ಇಂಗ್ಲಿಷ್ ಅಳೋ
ವೈಜ್ಞಾನಿಕ ಹೆಸರು— Aloe vera (L) Burman