ಮುದ್ದೇಬಿಹಾಳ: ಸಾಲದ ಬಾಧೆ ತಾಳಲಾರದೆ ರೈತನೊಬ್ಬ ತನ್ನದೇ ಜಮೀನಿನಲ್ಲಿ ನೇಣಿಗೆ ಶರಣಾದ ಘಟನೆ ಗುರುವಾರ ಬೆಳಿಗ್ಗೆ ಬೆಳಕಿಗೆ ಬಂದಿದೆ.
ಆತ್ಮಹತ್ಯೆ ಮಾಡಿಕೊಂಡ ರೈತನನ್ನು ನಡಹಳ್ಳಿ ಗ್ರಾಮದ ಶಾಂತಗೌಡ ಬಲವಂತರಾಯ ಬಿರಾದಾರ(59) ಎಂದು ಗುರ್ತಿಸಲಾಗಿದೆ.
ಮೃತನಿಗೆ ಪತ್ನಿ, ಪುತ್ರ, ಪುತ್ರಿ ಇದ್ದಾರೆ. 4 ಎಕರೆ 10 ಗುಂಟೆ ಜಮೀನು ಹೊಂದಿರುವ ಇವರು ಬರಗಾಲದಲ್ಲಿಯೂ ಹೊಲದಲ್ಲಿನ ಬೆಳೆಗೆ ನೀರುಣಿಸಲು ವಿವಿಧೆಡೆ ಸಾಲ ಮಾಡಿ ಪಂಪಸೆಟ್ ಖರೀದಿಸಿದ್ದರು. ಬೆಳೆದ ಬೆಳೆಗೆ ಸೂಕ್ತ ಬೆಲೆ ಸಿಕ್ಕಿರಲಿಲ್ಲ. ಇದಲ್ಲದೆ ಕೃಷಿಗಾಗಿಯೂ ಬ್ಯಾಂಕ್ ಸೇರಿ ಹಲವೆಡೆ ಸಾಲ ಮಾಡಿಕೊಂಡಿದ್ದರು. ಸಾಲ ತುಂಬಲು ಮೇಲಿಂದ ಮೇಲೆ ಒತ್ತಡ ಹೆಚ್ಚಾಗಿದ್ದರಿಂದ ಮಾನಸಿಕವಾಗಿ ನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಲಿಂಗದಳ್ಳಿಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ(ಪಿಕೆಪಿಎಸ್)ದಲ್ಲಿ 65000 ರೂ, ಮಿಣಜಗಿಯ ಗ್ರಾಮಿಣ ಬ್ಯಾಂಕಿನಲ್ಲಿ 3 ಲಕ್ಷ, ಕೈಗಡವಾಗಿ 1.80 ಲಕ್ಷ ಸೇರಿ ಒಟ್ಟಾರೆ 5.45 ಲಕ್ಷ ಸಾಲವಿತ್ತು ಎಂದು ಮೂಲಗಳು ತಿಳಿಸಿವೆ. ನಡಹಳ್ಳಿ ಗ್ರಾಮವು ಮುದ್ದೇಬಿಹಾಳ ತಾಲೂಕಲ್ಲಿದ್ದರೂ ತಾಳಿಕೋಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬರುವ ಕಾರಣ ಅಲ್ಲಿ ಪ್ರಕರಣ ದಾಖಲಿಸಲು ತೀರ್ಮಾನಿಸಲಾಗಿದೆ. ಸ್ಥಳಕ್ಕೆ ತಾಳಿಕೋಟೆ ಪೊಲೀಸರು ಆಗಮಿಸಿ ಕಾನೂನು ಕ್ರಮ ಕೈಕೊಂಡಿದ್ದಾರೆ.