ಮನೆ ಸುದ್ದಿ ಜಾಲ ಉಕ್ರೇನ್‌ನಲ್ಲಿ ಮೈಸೂರಿನ ವಿದ್ಯಾರ್ಥಿಗಳು ಸುರಕ್ಷಿತ

ಉಕ್ರೇನ್‌ನಲ್ಲಿ ಮೈಸೂರಿನ ವಿದ್ಯಾರ್ಥಿಗಳು ಸುರಕ್ಷಿತ

0

ಮೈಸೂರು: ರಷ್ಯಾ ಆಕ್ರಮಣದಿಂದ ತತ್ತರಿಸಿರುವ ಉಕ್ರೇನ್‌ನಲ್ಲಿ ಮೈಸೂರು ಮೂಲದ ವಿದ್ಯಾರ್ಥಿಗಳು ಸಿಲುಕಿದ್ದು, ಸುರಕ್ಷಿತವಾಗಿದ್ದಾರೆ.

ಮೈಸೂರಿನ ಕುವೆಂಪುನಗರದಲ್ಲಿ ವಾಸವಿರುವ ಉದ್ಯಮಿ, ಶಿವಕುಮಾರ್ ಮತ್ತು ಗೀತಾ ಅವರ ಪುತ್ರಿಯಾದ ಐಸಿರಿ ಅವರು ಸದ್ಯಕ್ಕೆ ಸುರಕ್ಷಿತವಾಗಿದ್ದು, ಭಾರತೀಯ ರಾಯಭಾರ ಕಚೇರಿಯವರು ಎಲ್ಲಾ ವಿದ್ಯಾರ್ಥಿಗಳನ್ನು ಸುರಕ್ಷಿತ ಸ್ಥಳದಲ್ಲಿ ಇರುವಂತೆ ಸೂಚಿಸಿದ್ದಾರೆ. ಅಗತ್ಯ ಇರುವವರಿಗೆ ಕಚೇರಿಯಿಂದಲೇ ಸಮೀಪದ ಸುರಕ್ಷಿತ ಸ್ಥಳಗಳನ್ನು ಗುರುತಿಸಿ ನೀಡಿರುವುದಾಗಿ ಐಸಿರಿ ತಂದೆ ಶಿವಕುಮಾರ್ ತಿಳಿಸಿದ್ದಾರೆ.

ಕಳೆದ ಮೂರ್ನಾಲ್ಕು ದಿನಗಳಿಂದ ಐಸಿರಿ ಅವರನ್ನು ಭಾರತಕ್ಕೆ ಕರೆಸಿಕೊಳ್ಳಲು ಆಕೆಯ ಪೋಷಕರು ಶ್ರಮಿಸುತ್ತಿದ್ದಾರೆ. ಆದರೆ ಒಮ್ಮೆ ಟಿಕೆಟ್ ಬುಕ್ ಆಗಿ ನಂತರ ರದ್ದಾಗಿದೆ. ವಿಮಾನ ಹಾರಾಟ ಕಷ್ಟವಾಗಿರುವುದರಿಂದ ಟಿಕೆಟ್ ಬೇಗ ಸಿಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಕೆಲ ದಿನಗಳ ಬಳಿಕ ಭಾರತಕ್ಕೆ ಕರೆಸಿಕೊಳ್ಳಲು ತೀರ್ಮಾನಿಸಲಾಗಿದೆ. ಆದರೆ, ಭಾರತೀಯ ರಾಯಭಾರ ಕಚೇರಿಯಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಎಲ್ಲಾ ರೀತಿಯ ಅಗತ್ಯ ನೆರವು ನೀಡಲಾಗುತ್ತಿದೆ ಎಂದು ಶಿವಕುಮಾರ್ ಹೇಳಿದರು.

ಅಂತೆಯೇ ಚಂದನ್ ಪ್ರಕಾಶ್ ಶೆಟ್ಟಿ ಎಂಬ ಕೆ.ಆರ್.ನಗರದ ವಿದ್ಯಾರ್ಥಿಯೋರ್ವ ಭಾರತಕ್ಕೆ ಹಿಂದಿರುಗಲು ಅಣಿಯಾಗಿದ್ದಾರೆ. ಮತ್ತೋರ್ವ ವಿದ್ಯಾರ್ಥಿ ಟಿ.ಕೆ. ಲೇಔಟ್‌ನ ಪುಟ್ಟಮಾದೇಗೌಡ ಮತ್ತು ಪ್ರಮಿಳಾರಾಣಿ ಅವರ ಪುತ್ರ ಪಿ.ಗಣೇಶ್ ಕೂಡ ಉಕ್ರೇನ್‌ನಲ್ಲಿ ಸಿಲುಕಿದ್ದಾರೆ. ಕಳೆದ ರಾತ್ರಿ 11 ಗಂಟೆ ಸುಮಾರಿನಲ್ಲಿ ತನ್ನ ಪೋಷಕರಿಗೆ ಕರೆ ಮಾಡಿದ್ದರು. ಸದ್ಯಕ್ಕೆ ಹಾಸ್ಟೆಲ್‌ನಲ್ಲಿ ಸುರಕ್ಷಿತವಾಗಿದ್ದಾರೆ.

ಉಕ್ರೇನ್‌ನಲ್ಲಿ ಉದ್ವಿಘ್ನ ಪರಿಸ್ಥಿತಿ ನಿರ್ಮಾಣವಾಗಿರುವುದರಿಂದ ಉಕ್ರೇನ್ ದೇಶಕ್ಕೆ ವ್ಯಾಪಾರ, ಶಿಕ್ಷಣ, ಉದ್ಯೋಗ ಹಾಗೂ ಇತರೆ ಉದ್ದೇಶಗಳಿಗೆ ತೆರಳಿ ನೆಲೆಸಿರುವ ಮೈಸೂರು ಜಿಲ್ಲೆಗೆ ಸಂಬಂಧಿಸಿದ ಭಾರತೀಯ ನಾಗರೀಕರುಗಳ ಮಾಹಿತಿ ಕಲೆಹಾಕಲಾಗುತ್ತಿದೆ. ಅಂತಹವರುಗಳ ಮಾಹಿತಿಯನ್ನು ಸಮಬಂಧಿಸಿದವರು ಜಿಲ್ಲಾ ವಿಪತ್ತು ನಿಯಂತ್ರಣ ಕೊಠಡಿ ದೂರವಾಣಿ ಸಂಖ್ಯೆ 0821-2423800, 1077 ಹಾಗೂ ಸುಧೀರ್ ಜಿಲ್ಲಾ ವಿಪತ್ತು ತಜ್ಞರು 9845852481 ಈ ಸಂಖ್ಯೆಯನ್ನು ಸಂಪರ್ಕಿಸಲು ಮೈಸೂರು ಜಿಲ್ಲಾಧಿಕಾರಿ ಕಚೇರಿ ತಿಳಿಸಿದೆ.

ಹಿಂದಿನ ಲೇಖನಇಂದಿನ ನಿಮ್ಮ ರಾಶಿ ಭವಿಷ್ಯ
ಮುಂದಿನ ಲೇಖನನೋಟು ಅಮಾನ್ಯೀಕರಣಗೊಂಡ 6 ವರ್ಷಗಳ ಬಳಿಕ ವ್ಯಕ್ತಿಯೊಬ್ಬರಿಗೆ ನೋಟುಗಳ ಬದಲಾವಣೆಗೆ ಅವಕಾಶ