ಮನೆ ಕ್ರೀಡೆ ರಾಯಲ್ ಚಾಲೆಂಜರ್ಸ್ ಗೆ ಮುಂಬೈ ಇಂಡಿಯನ್ಸ್ ಸವಾಲು

ರಾಯಲ್ ಚಾಲೆಂಜರ್ಸ್ ಗೆ ಮುಂಬೈ ಇಂಡಿಯನ್ಸ್ ಸವಾಲು

0

ಪುಣೆ(Pune): ಮಹಾರಾಷ್ಟ್ರ ಕ್ರಿಕೆಟ್ ಸಂಸ್ಥೆಯ ಕ್ರೀಡಾಂಗಣದಲ್ಲಿ ಶನಿವಾರ ನಡೆಯಲಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು(Royal Challengers Bengaluru) ಮತ್ತು ಮುಂಬೈ ಇಂಡಿಯನ್ಸ್(Mumbai Indians) ನಡುವಣ ಪಂದ್ಯವು ಇಬ್ಬರು ವಿಕೆಟ್‌ ಕೀಪರ್‌ಗಳ ನಡುವಣ ಜಿದ್ದಾಜಿದ್ದಿಗೆ ವೇದಿಕೆಯಾಗುವ ನಿರೀಕ್ಷೆಯಿದೆ.

ಆರ್‌ಸಿಬಿಯು ಆಡಿರುವ ಮೂರು ಪಂದ್ಯಗಳಲ್ಲಿ ಎರಡರಲ್ಲಿ ಜಯಿಸಲು ದಿನೇಶ್ ಆಟವೇ ಕಾರಣವಾಗಿತ್ತು. ಇನ್ನೊಂದೆಡೆ ಇಶಾನ್ ನಿರಂತರವಾಗಿ ಉತ್ತಮ ಸಾಧನೆ ಮಾಡುತ್ತಿದ್ದರೂ ಮುಂಬೈ ತಂಡವು ಒಂದೂ ಪಂದ್ಯದಲ್ಲಿ ಜಯಿಸಿಲ್ಲ. ಆರ್‌ಸಿಬಿಯು ಆಡಿದ ಕಳೆದೆರಡೂ ಪಂದ್ಯಗಳಲ್ಲಿ ಅಗ್ರಕ್ರಮಾಂಕದ ಬ್ಯಾಟರ್‌ಗಳು ನಿರೀಕ್ಷೆ ಹುಸಿಗೊಳಿಸಿದ್ದರು.ಆ ಸಂದರ್ಭದಲ್ಲಿ ದಿನೇಶ್ ‘ಫಿನಿಷರ್’ ಆಗಿ ತಂಡವನ್ನು ಗೆಲುವಿನ ಗೆರೆ ಮುಟ್ಟಿಸಿದ್ದರು.

ಏಳನೇ ಕ್ರಮಾಂಕದಲ್ಲಿ ಕ್ರೀಸ್‌ಗಿಳಿಯುತ್ತಿರುವ ದಿನೇಶ್ ಅವರನ್ನು ಕಟ್ಟಿಹಾಕಲು ಮುಂಬೈ ಬೌಲರ್‌ಗಳು ವಿಶೇಷ ತಂತ್ರಗಾರಿಕೆ ರೂಪಿಸಲೇಬೇಕು. ಇಲ್ಲದಿದ್ದರೆ ಇನಿಂಗ್ಸ್‌ ಕೊನೆಯ ಹಂತದ ಓವರ್‌ಗಳಲ್ಲಿ ರನ್‌ಗಳ ಹೊಳೆ ಹರಿಯುವುದನ್ನು ತಡೆಯುವುದು ಕಷ್ಟ. ರಾಜಸ್ಥಾನ್ ರಾಯಲ್ಸ್ ಎದುರಿನ ಪಂದ್ಯದಲ್ಲಿ ಆರನೇ ಕ್ರಮಾಂಕದಲ್ಲಿ ಶಾಬಾಜ್ ನದೀಂ ಕೂಡ ಮಿಂಚಿದ್ದರು. ಆರಂಭಿಕ ಜೋಡಿ ಫಫ್ ಡುಪ್ಲೆಸಿ, ಅನುಜ್ ರಾವತ್ ಮತ್ತು ವಿರಾಟ್ ಕೊಹ್ಲಿಯವರು ತಮ್ಮ ಎಂದಿನ ಲಯಕ್ಕೆ ಮರಳಿದರೆ ಮುಂಬೈ ತಂಡದ ಮೇಲಿನ ಒತ್ತಡ ಹೆಚ್ಚುವುದರಲ್ಲಿ ಸಂದೇಹವಿಲ್ಲ.

ಸತತ ಮೂರು ಪಂದ್ಯಗಳಲ್ಲಿ ಸೋತಿರುವ ರೋಹಿತ್ ಶರ್ಮಾ ಬಳಗವು ಟೂರ್ನಿಯಲ್ಲಿ ಮೊದಲ ಗೆಲುವಿಗಾಗಿ ಪರಿತಪಿಸುತ್ತಿದೆ. ರೋಹಿತ್, ಸೂರ್ಯಕುಮಾರ್ ಯಾದವ್, ಪೊವೆಲ್, ತಿಲಕ್ ವರ್ಮಾ ಅವರಿರುವ ಬ್ಯಾಟಿಂಗ್ ಪಡೆ ಬಲಿಷ್ಠವಾಗಿದೆ. ಇಶಾನ್ ಒಟ್ಟು 149 ರನ್‌ಗಳಿಸಿದ್ದಾರೆ. ಅದರಲ್ಲಿ ಎರಡು ಅರ್ಧಶತಕಗಳು ಸೇರಿವೆ. ಜಸ್‌ಪ್ರೀತ್ ಬೂಮ್ರಾ, ಬಾಸಿಲ್ ಥಂಪಿ, ಸ್ಪಿನ್ನರ್ ಮುರುಗನ್ ಅಶ್ವಿನ್ ಅವರಿರುವ ಬೌಲಿಂಗ್ ವಿಭಾಗವೂ ಸಮರ್ಥವಾಗಿದೆ. ಆದರೂ ತಂಡವು ಸತತ ಸೋಲಿನ ಸುಳಿಯಲ್ಲಿ ಸಿಲುಕಿದೆ. ನಾಯಕ ರೋಹಿತ್ ತಂತ್ರಗಾರಿಕೆಗೆ ತಕ್ಕ ಫಲ ಸಿಗುತ್ತಿಲ್ಲ. ಅದರಿಂದಾಗಿ ತೀವ್ರ ಒತ್ತಡದಲ್ಲಿರುವ ಮುಂಬೈ ಬಳಗವನ್ನು ಸುಲಭವಾಗಿ ಮಣಿಸುವ ಲೆಕ್ಕಾಚಾರದಲ್ಲಿ ಆರ್‌ಸಿಬಿ ಇದೆ.