ಬೀದರ್(Beedar): ಅಂಗಡಿಗೆ ನುಗ್ಗಿ ಯುವಕನನ್ನು ಚಾಕುವಿನಿಂದ ಚುಚ್ಚಿ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಸಿಂಗಾರ್ ಬಾಗ್ನಲ್ಲಿ ನಡೆದಿದೆ.
ಸಿಂಗಾರಬಾಗ್ ನಿವಾಸಿ 20 ವರ್ಷದ ಅಮೀರ್ ಖಾನ್ ಕೊಲೆಯಾದ ಯುವಕ ಎಂದು ಗುರುತಿಸಲಾಗಿದೆ. ನೂರ್ ಖಾನ್ ತಾಲಿಬ್ ನಿವಾಸಿ ಜೀಷನ್ ಎಂಬಾತ ಕೊಲೆ ಮಾಡಿದ ಆರೋಪಿ.
ನೂರ್ ಖಾನ್ ತಾಲಿಬ್ ನಿವಾಸಿ ಜೀಷನ್ ಸಹೋದರಿಯನ್ನು ಅಮೀರ್ ಖಾನ್ ಪ್ರೀತಿಸುತ್ತಿದ್ದ ಎಂದು ತಿಳಿದು ಬಂದಿದೆ. ಮಂಗಳವಾರ ಬೆಳಗ್ಗೆ ಅಮೀರ್ ಖಾನ್ ಕೆಲಸ ಮಾಡುತ್ತಿದ್ದ ಅಂಗಡಿಗೆ ತೆರಳಿ ಮನಸೋಇಚ್ಛೆ ಚಾಕುವಿನಿಂದ ದಾಳಿ ನಡೆಸಿದ್ದಾನೆ. ಗಂಭೀರವಾಗಿ ಗಾಯಗೊಂಡಿದ್ದ ಅಮೀರ್ ಖಾನ್ ಸಾವನ್ನಪ್ಪಿದ್ದಾನೆ.
ಯುವಕನ ಕೊಲೆ ಮಾಡುತ್ತಿರುವ ದೃಶ್ಯಗಳು ಅಂಗಡಿ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಈಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗ್ತಿದೆ.
ಈ ಘಟನೆ ಸಂಬಂಧ ಮೃತ ಅಮೀರ್ ಖಾನ್ ಪೋಷಕರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿ ಜೀಷನ್ನನ್ನು ಬಂಧಿಸಿ ಹೆಚ್ಚಿನ ವಿಚಾರಣೆ ಕೈಗೊಂಡಿದ್ದಾರೆ.