ಮನೆ ಕಾನೂನು ಲೈಂಗಿಕ ಕಾರ್ಯಕರ್ತೆ ಹತ್ಯೆ: ಮಂಡ್ಯದ ವ್ಯಕ್ತಿಗೆ ಜೀವಾವಧಿ ಶಿಕ್ಷೆ

ಲೈಂಗಿಕ ಕಾರ್ಯಕರ್ತೆ ಹತ್ಯೆ: ಮಂಡ್ಯದ ವ್ಯಕ್ತಿಗೆ ಜೀವಾವಧಿ ಶಿಕ್ಷೆ

0

ಬೆಂಗಳೂರು: ದಶಕದ ಹಿಂದೆ ಮೈಸೂರಿನಲ್ಲಿ ಲೈಂಗಿಕ ಕಾರ್ಯಕರ್ತೆಯೊಬ್ಬರನ್ನು ಹತ್ಯೆಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಡ್ಯ ಜಿಲ್ಲೆಯ ಕೊಮ್ಮೇರಹಳ್ಳಿಯ ವ್ಯಕ್ತಿಯೊಬ್ಬನಿಗೆ ಹೈಕೋರ್ಟ್ ಜೀವಾವಧಿ ಶಿಕ್ಷೆ ಮತ್ತು 30,000 ರೂಪಾಯಿ ದಂಡ ವಿಧಿಸಿದೆ.

ಅಲ್ಲದೇ ಕೊಲೆ ಮಾಡುವ ಮೊದಲು ಆಕೆಯನ್ನು ದರೋಡೆ ಮಾಡಿದ್ದಕ್ಕಾಗಿ ಏಳು ವರ್ಷಗಳ ಕಠಿಣ ಜೈಲು ಶಿಕ್ಷೆ ಮತ್ತು 10,000 ರೂ. ದಂಡ ವಿಧಿಸಿದೆ.

ಎಲ್ಲಾ ಶಿಕ್ಷೆಗಳು ಏಕಕಾಲದಲ್ಲಿ ನಡೆಯುತ್ತವೆ ಎಂದು ನ್ಯಾಯಾಲಯ ಹೇಳಿದೆ. 45 ದಿನಗಳೊಳಗೆ ಸೆಷನ್ಸ್ ನ್ಯಾಯಾಲಯಕ್ಕೆ ಶರಣಾಗುವಂತೆ ಕೆ ಸಿ ಗಿರೀಶ  ನಿಗೆ ಸೂಚಿಸಿರುವ ನ್ಯಾಯಾಲಯ, ಒಟ್ಟು ದಂಡದ ಮೊತ್ತದಲ್ಲಿ ಮೃತ ಮಹಿಳೆಯ ಮಗುವಿಗೆ ರೂ 35,000 ಮತ್ತು ಉಳಿದ ರೂ 5,000 ರಾಜ್ಯ ಸರ್ಕಾರಕ್ಕೆ ಪಾವತಿಸಬೇಕು ಎಂದು ನಿರ್ದೇಶಿಸಿದೆ.

ಅತ್ಯಾಚಾರ, ದರೋಡೆ ಮತ್ತು ಕೊಲೆ ಆರೋಪಗಳಿಂದ ಆರೋಪಿಯನ್ನು ಖುಲಾಸೆಗೊಳಿಸಿದ ಮೈಸೂರಿನ ಸೆಷನ್ಸ್ ನ್ಯಾಯಾಲಯ ವಿರುದ್ಧ ರಾಜ್ಯ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿಯನ್ನು ಭಾಗಶಃ ಪುರಸ್ಕರಿಸಿದ ನ್ಯಾಯಮೂರ್ತಿ ಎಚ್‌ಬಿ ಪ್ರಭಾಕರ ಶಾಸ್ತ್ರಿ ಮತ್ತು ನ್ಯಾಯಮೂರ್ತಿ ಅನಿಲ್ ಬಿ ಕತ್ತಿ ಅವರಿದ್ದ ವಿಭಾಗೀಯ ಪೀಠ, ಅತ್ಯಾಚಾರದ ಆರೋಪದಿಂದ ಮುಕ್ತಗೊಳಿಸಿದ ಆದೇಶವನ್ನು ದೃಢಪಡಿಸಿತು.ಆದರೆ ಕೊಲೆಗೆ ಜೀವಾವಧಿ ಶಿಕ್ಷೆ ಮತ್ತು ದರೋಡೆಗಾಗಿ ಕಠಿಣ ಜೈಲು ಶಿಕ್ಷೆ ವಿಧಿಸಲಾಯಿತು.

ಪ್ರಾಸಿಕ್ಯೂಷನ್ ಪ್ರಕಾರ, ಆರೋಪಿ ಗ್ರಾಹಕರಂತೆ ಮೃತ ಲೈಂಗಿಕ ಕಾರ್ಯಕರ್ತೆಯನ್ನು ಲಾಡ್ಜ್‌ಗೆ ಕರೆದೊಯಿದ್ದು, ಆಕೆಯೂ ಕೂಡಾ ಆತನನ್ನು ಗ್ರಾಹಕ ನಂತೆ ಪರಿಗಣಿಸಿದಳು. ಆಕೆ ಸಾವಿಗೂ ಮುನ್ನಾ ಎಷ್ಟು ಬಾರಿ ಬಲವಂತದಿಂದ ಲೈಂಗಿಕತೆಗೆ ಒಳಗಾಗಿದ್ದಳು ಎಂಬುದನ್ನು ಪುರಾವೆಗಳು ಹೇಳುವುದಿಲ್ಲ. ಸತ್ತವಳು ಲೈಂಗಿಕ ಕಾರ್ಯಕರ್ತೆ ಎಂಬ ಕಾರಣಕ್ಕಾಗಿ, ಆರೋಪಿ ಅವಳನ್ನು ಕೊಲೆ ಮಾಡುವ ಮೊದಲು ಅತ್ಯಾಚಾರ ಮಾಡಿದ್ದಾನೆ ಎಂದು ತೀರ್ಮಾನಿಸುವುದು ಸುರಕ್ಷಿತವಲ್ಲ. ಐಪಿಸಿಯ ಸೆಕ್ಷನ್ 302 ಮತ್ತು 397 ರ ಅಡಿಯಲ್ಲಿ ಶಿಕ್ಷಾರ್ಹ ಅಪರಾಧಕ್ಕೆ ಗುರಿಪಡಿಸಲು ಪ್ರಾಸಿಕ್ಯೂಷನ್ ಸಮರ್ಥವಾಗಿದ್ದರೂ, ಐಪಿಸಿ ಸೆಕ್ಷನ್ 376  ಅಡಿ ಶಿಕ್ಷಾರ್ಹ ಅಪರಾಧವನ್ನು ಸಾಬೀತುಪಡಿಸಲು ವಿಫಲವಾಗಿದೆ ಎಂಬುದನ್ನು ನ್ಯಾಯಾಲಯ ಗಮನಿಸಿದೆ.

ಸೆಪ್ಟೆಂಬರ್ 18, 2010 ರಂದು, ಸಂತ್ರಸ್ತೆ ಮೈಸೂರಿನ ಎಸ್‌ಆರ್ ರಸ್ತೆಯಲ್ಲಿ ಗ್ರಾಹಕರೊಂದಿಗೆ ವ್ಯವಹರಿಸುತ್ತಿರುವಾಗ  ಗಿರೀಶ ಆಕೆಯನ್ನು ಆಟೊರಿಕ್ಷಾದಲ್ಲಿ ಸಬ್ ಅರ್ಬನ್ ಬಸ್ ನಿಲ್ದಾಣದ ಪಕ್ಕದಲ್ಲಿರುವ ಲಾಡ್ಜ್‌ಗೆ ಕರೆದೊಯ್ದಿದ್ದ. ದೇವಸ್ಥಾನಕ್ಕೆ ಬಂದಿದ್ದ ಪತಿ-ಪತ್ನಿ ಎಂದು ಪರಿಚಯಿಸಿಕೊಂಡು ಲಾಡ್ಜ್ ರಿಜಿಸ್ಟರ್‌ನಲ್ಲಿ ನಮೂದು ಮಾಡಿ ಕೊಠಡಿ ತೆಗೆದುಕೊಂಡಿದ್ದರು. ಆ ರಾತ್ರಿ  ಕೊಠಡಿಗೆ ಆಹಾರ ಮತ್ತು ಪಾನೀಯಗಳನ್ನು ಲಾಡ್ಜ್ ನವರು ಪೂರೈಸಿದ್ದರು.

ಸಂಭೋಗದ ನಂತರ, ಗಿರೀಶ ಮಹಿಳೆಯ ಸೀರೆಯಿಂದ ಕತ್ತು ಹಿಸುಕಿ ಆಕೆಯ ಚಿನ್ನದ ಇಯರ್ ಸ್ಟಡ್‌ ಗಳು, ಮೊಬೈಲ್ ಫೋನ್ ಮತ್ತು ಸ್ವಲ್ಪ ಹಣವನ್ನು ತೆಗೆದುಕೊಂಡು ಸದ್ದಿಲ್ಲದೆ ಲಾಡ್ಜ್‌ ನಿಂದ ಪರಾರಿಯಾಗಿದ್ದ.  ಕೊಲೆ ಪ್ರಕರಣ ಬೆಳಕಿಗೆ ಬಂದ ನಂತರ ಪೊಲೀಸರು ತನಿಖೆ ನಡೆಸಿ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಮೈಸೂರಿನ VII ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶರು ಏಪ್ರಿಲ್ 25, 2016 ರಂದು ಆರೋಪಿಗಳನ್ನು ಖುಲಾಸೆಗೊಳಿಸಿದರು.