ಮನೆ ಕಾನೂನು ಮುರುಘಾ ಶ್ರೀ ಪ್ರಕರಣ: ಸಿಡಬ್ಲ್ಯುಸಿ ವರದಿ, ಬಸವರಾಜನ್, ಸೌಭಾಗ್ಯ ಕರೆ ದಾಖಲೆಗಳ ಕೋರಿಕೆ; ಆಕ್ಷೇಪಣೆ ಸಲ್ಲಿಸಲು...

ಮುರುಘಾ ಶ್ರೀ ಪ್ರಕರಣ: ಸಿಡಬ್ಲ್ಯುಸಿ ವರದಿ, ಬಸವರಾಜನ್, ಸೌಭಾಗ್ಯ ಕರೆ ದಾಖಲೆಗಳ ಕೋರಿಕೆ; ಆಕ್ಷೇಪಣೆ ಸಲ್ಲಿಸಲು ಆದೇಶ

0

ಚಿತ್ರದುರ್ಗದ ಮುರುಘಾ ಮಠದ ಪೀಠಾಧಿಪತಿ ಡಾ. ಶಿವಮೂರ್ತಿ ಮುರುಘಾ ಶರಣರು ಹಾಗೂ ಇತರೆ ನಾಲ್ವರು ಆರೋಪಿಗಳ ವಿರುದ್ಧ ಮೈಸೂರಿನ ನಜರಾಬಾದ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣವನ್ನು ಚಿತ್ರದುರ್ಗದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಸಲ್ಲಿಸಿರುವುದಕ್ಕೆ ಸಂಬಂಧಿಸಿದ ಪ್ರಮುಖ ದಾಖಲೆಗಳನ್ನು ಒದಗಿಸುವಂತೆ ಕೋರಿ ಆರೋಪಿಗಳ ಪರ ವಕೀಲರು ಸಲ್ಲಿಸಿರುವ ಅರ್ಜಿಗೆ ಆಕ್ಷೇಪಣೆ ಸಲ್ಲಿಸುವಂತೆ ಚಿತ್ರದುರ್ಗದ ವಿಶೇಷ ನ್ಯಾಯಾಲಯವು ಸೋಮವಾರ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿದೆ.

ನಿರೀಕ್ಷಣಾ ಜಾಮೀನು ಕೋರಿರುವ ಪ್ರಕರಣದಲ್ಲಿ ನಾಲ್ಕು ಮತ್ತು ಐದನೇ ಆರೋಪಿಗಳಾಗಿರುವ ಪರಮಶಿವಯ್ಯ ಮತ್ತು ವಕೀಲ ಎನ್ ಗಂಗಾಧರ್ ಪರವಾಗಿ ಹಾಜರಾಗಿದ್ದ ಹಿರಿಯ ವಕೀಲ ಸಿ ಎಚ್ ಹನುಮಂತರಾಯ ಮತ್ತು ವಕೀಲ ಕೆ ಬಿ ಕೆ ಸ್ವಾಮಿ ಅವರು ಸಿಆರ್ಪಿಸಿ ಸೆಕ್ಷನ್ 91ರ ಅಡಿ ಸಲ್ಲಿಸಿದ್ದ ಅರ್ಜಿಯನ್ನು ವಿಶೇಷ ನ್ಯಾಯಾಲಯದ ನ್ಯಾಯಾಧೀಶೆ ಬಿ ಕೆ ಕೋಮಲಾ ಅವರು ವಿಚಾರಣೆ ನಡೆಸಿದರು.

ಸಂತ್ರಸ್ತ ಮಕ್ಕಳ ಜೊತೆ ಸಮಾಲೋಚನೆ ನಡೆಸಿ ಮೈಸೂರಿನ ಮಕ್ಕಳ ಕಲ್ಯಾಣ ಸಮಿತಿಯು (ಸಿಡಬ್ಲ್ಯುಸಿ) ವರದಿ ಸಿದ್ಧಪಡಿಸಿ, ಅದನ್ನು ಮೈಸೂರು ಪೊಲೀಸರಿಗೆ ಸಲ್ಲಿಸಿದೆ. ಅದು ಚಿತ್ರದುರ್ಗ ಗ್ರಾಮೀಣ ಠಾಣೆಯ ಪೊಲೀಸರನ್ನು ತಲುಪಿದೆ. ಆದರೆ, ಇದನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗಿಲ್ಲ. ಹೀಗಾಗಿ, ಅದನ್ನು ನ್ಯಾಯಾಲಯಕ್ಕೆ ಸಲ್ಲಿಸಲು ಆದೇಶಿಸಬೇಕು ಎಂದು ಆರೋಪಿಗಳ ಪರ ವಕೀಲರು ಕೋರಿರುವುದಾಗಿ ತಿಳಿದು ಬಂದಿದೆ.

ಬೆಂಗಳೂರಿನ ಕಾಟನ್ ಪೇಟೆ ಪೊಲೀಸರ ಕರೆಯ ಹಿನ್ನೆಲೆಯಲ್ಲಿ ಮಠದ ಹಿಂದಿನ ಕಾರ್ಯದರ್ಶಿ ಎಸ್ ಕೆ ಬಸವರಾಜನ್ ಮತ್ತು ಅವರ ಪತ್ನಿ ಸೌಭಾಗ್ಯ ಅವರು ಬೆಂಗಳೂರಿಗೆ ಭೇಟಿ ನೀಡಿದ್ದರು ಎಂದು ಪ್ರಾಸಿಕ್ಯೂಷನ್ ಒಪ್ಪಿದೆ. ಹೀಗಾಗಿ, ಕಾಟನ್ಪೇಟೆಯ ಪೊಲೀಸರು ಯಾವ ದೂರವಾಣಿ ಸಂಖ್ಯೆಯಿಂದ ಬಸವರಾಜನ್ ಅವರಿಗೆ ಕರೆ ಮಾಡಿದ್ದರು ಎಂಬ ಮಾಹಿತಿ ನೀಡಬೇಕು. ಅಲ್ಲದೇ, 2022ರ ಮಾರ್ಚ್ 10ರಿಂದ ಆಗಸ್ಟ್ 28ರವರೆಗೆ ಬಸವರಾಜನ್ ಮತ್ತು ಅವರ ಪತ್ನಿ ಸೌಭಾಗ್ಯ ಅವರ ಕರೆ ದಾಖಲೆ, ಒಡನಾಡಿ ಸಂಸ್ಥೆಯ ಸ್ಟ್ಯಾನ್ಲಿ, ಪರಶುರಾಮ್ ಹಾಗೂ ಮೈಸೂರಿನ ಮಕ್ಕಳ ಕಲ್ಯಾಣ ಸಮಿತಿಯ ಸದಸ್ಯೆ (ದೂರುದಾರರು) ಅವರ ಫೋನ್ ನಂಬರ್ ಒದಗಿಸುವಂತೆ ಕೋರಲಾಗಿದೆ ಎಂದು ತಿಳಿದು ಬಂದಿದೆ.

ಸದರಿ ದಾಖಲೆಗಳು ಸಿಕ್ಕ ಬಳಿಕ ವಾದ ಮಂಡಿಸುವುದಾಗಿ ವಕೀಲರಾದ ಹನುಮಂತರಾಯ ಅವರು ನ್ಯಾಯಾಲಯಕ್ಕೆ ತಿಳಿಸಿದ್ದರಿಂದ ವಿಚಾರಣೆಯನ್ನು ಸೆಪ್ಟೆಂಬರ್ 14ಕ್ಕೆ ಮುಂದೂಡಲಾಗಿದೆ.

ಸಂತ್ರಸ್ತರನ್ನು ಭೇಟಿ ಮಾಡಲು ಅವಕಾಶ

ಸಂತ್ರಸ್ತ ವಿದ್ಯಾರ್ಥಿನಿಯರ ಪರವಾಗಿ ವಕಾಲತ್ತು ಹಾಕಿರುವ ವಕೀಲರಾದ ಶ್ರೀನಿವಾಸ್ ಮತ್ತು ಮುಕುಂದ್ ಅವರು ನಾಳೆ ಮೊದಲ ಆರೋಪಿಯಾಗಿರುವ ಮುರುಘಾ ಶರಣರ ಜಾಮೀನು ಮನವಿಗೆ ಆಕ್ಷೇಪಣೆ ಸಲ್ಲಿಸಬೇಕಿದೆ. ಅಲ್ಲದೇ, ಸಂತ್ರಸ್ತೆಯರನ್ನು ಭೇಟಿ ಮಾಡಲು ವಕೀಲರಾದ ಶ್ರೀನಿವಾಸ್ ಮತ್ತು ಮುಕುಂದ್ ಅವರಿಗೆ ನ್ಯಾಯಾಲಯ ಅನುಮತಿಸಿದೆ.

ಸಹಿ ಹಾಕಲು ಸಂಬಂಧಿತ ದಾಖಲೆ ಸಲ್ಲಿಕೆಗೆ ಆದೇಶ

ಪ್ರಕರಣದಲ್ಲಿ ಒಂದನೇ ಆರೋಪಿಯಾಗಿರುವ ಮುರುಘಾ ಶರಣರು ಮಠದ ಚೆಕ್ ಅಥವಾ ಸಂಬಂಧಿತ ದಾಖಲೆಗಳಿಗೆ ಸಹಿ ಹಾಕಲು ಅನುಮತಿಸುವುದಕ್ಕೆ ಸಂಬಂಧಿಸಿದಂತೆ ಆದೇಶ ಮಾಡಲು ಪೂರಕ ದಾಖಲೆ ಸಲ್ಲಿಸುವಂತೆ ಮಠದ ಪರ ವಕೀಲ ಕೆ ಎನ್ ವಿಶ್ವನಾಥಯ್ಯ ಅವರಿಗೆ ನ್ಯಾಯಾಲಯ ನಿರ್ದೇಶಿಸಿದೆ.

ಆರೋಪಿಯು ಯಾವುದೇ ದಾಖಲೆಗಳಿಗೆ ಸಹಿ ಹಾಕಲು ನ್ಯಾಯಾಲಯವು ಅನುಮತಿಸಲಾಗದು. ಧಾರ್ಮಿಕ ಚಟುವಟಿಕೆ ನಡೆಸಲು ಮತ್ತೊಬ್ಬರು ಸ್ವಾಮೀಜಿ ಹಾಗೂ ಮಠದ ಚಟುವಟಿಕೆಗಳನ್ನು ನಡೆಸಲು ನಿವೃತ್ತ ನ್ಯಾಯಾಧೀಶರಾದ ವಸ್ತ್ರದಮಠ ಅವರನ್ನು ನೇಮಕ ಮಾಡಲಾಗಿದೆ. ಬೈಲಾದ ಪ್ರಕಾರ ಕಾರ್ಯಕಾರಿ ಸಮಿತಿಯು ನಿರ್ಧಾರ ಕೈಗೊಳ್ಳಬಹುದು. ಮಠದ ಆಸ್ತಿಯು ಸಾರ್ವಜನಿಕರಿಗೆ ಸೇರಿದ್ದು, ಸಹಿ ಮಾಡಲು ಅನುಮತಿಸಿದರೆ ಆರೋಪಿಯಾಗಿರುವ ಶಿವಮೂರ್ತಿ ಮುರುಘಾ ಶರಣರು ಅದನ್ನು ದುರ್ಬಳಕೆ ಮಾಡುವ ಸಾಧ್ಯತೆ ಇರುತ್ತದೆ ಎಂದು ಸರ್ಕಾರವು ಆಕ್ಷೇಪ ವ್ಯಕ್ತಪಡಿಸಿದೆ.

ಬಸವಾದಿತ್ಯಗೆ ನಿರೀಕ್ಷಣಾ ಜಾಮೀನು ಕೋರಿಕೆ

ಪ್ರಕರಣದಲ್ಲಿ ಮೂರನೇ ಆರೋಪಿಯಾಗಿರುವ ಬಸವಾದಿತ್ಯ ಅವರ ನಿರೀಕ್ಷಣಾ ಜಾಮೀನಿಗೆ ಸಂಬಂಧಿಸಿದಂತೆ ವಕೀಲ ಕೆ ಎನ್ ವಿಶ್ವನಾಥಯ್ಯ ಅವರು ಸೋಮವಾರ ವಾದ ಮಂಡಿಸಿದರು. ಆರೋಪಿಯು ಅಪ್ರಾಪ್ತರಾಗಿದ್ದು, ಎಫ್ಐಆರ್ನಲ್ಲಿ ಅವರನ್ನು ಪ್ರೌಢ ಎಂದು ಉಲ್ಲೇಖಿಸಲಾಗಿದೆ. ಅವರನ್ನು ಬಂಧಿಸುವ ಸಾಧ್ಯತೆ ಇರುವುದರಿಂದ ನಿರೀಕ್ಷಣಾ ಜಾಮೀನು ಮಂಜೂರು ಮಾಡಬೇಕು ಎಂದು ಕೋರಿದರು ಎನ್ನಲಾಗಿದೆ.

ಆರೋಪಿಯು ಅಪ್ರಾಪ್ತರು ಎಂಬುದಕ್ಕೆ ಸಂಬಂಧಿಸಿದಂತೆ ಅವರ ಎಸ್ಎಸ್ಎಲ್ಸಿ ಅಂಕ ಪಟ್ಟಿಯನ್ನು ಪೀಠಕ್ಕೆ ಸಲ್ಲಿಸಲಾಗಿದೆ ಎಂದು ತಿಳಿದು ಬಂದಿದೆ. ರಾಜ್ಯ ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕರಾದ ನಾಗವೇಣಿ ಅವರು ನಾಳೆ ವಾದ ಮಂಡಿಸಲಿದ್ದಾರೆ.

ಹಿಂದಿನ ಲೇಖನಮುಲಾಜಿಲ್ಲದೇ ಒತ್ತುವರಿ ತೆರವು ಮಾಡುತ್ತೇವೆ: ಆರ್ ಅಶೋಕ್
ಮುಂದಿನ ಲೇಖನರಾಜ ಕಾಲುವೆ ಒತ್ತುವರಿ: 2ನೇ ದಿನವೂ ಮುಂದುವರಿದ ತೆರವು ಕಾರ್ಯಾಚರಣೆ