ಬೆಂಗಳೂರು: ಅಪ್ರಾಪ್ತ ಬಾಲಕಿಯರ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿತ್ರದುರ್ಗದ ಮುರುಘರಾಜೇಂದ್ರ ಬೃಹನ್ಮಠದ ಮಠಾಧೀಶ ಡಾ.ಶಿವಮೂರ್ತಿ ಮುರುಘಾ ಶರಣರ ವಿರುದ್ಧದ ಅತ್ಯಾಚಾರ ಆರೋಪವನ್ನು ರದ್ದುಗೊಳಿಸಲು ಕರ್ನಾಟಕ ಹೈಕೋರ್ಟ್ ನಿರಾಕರಿಸಿದೆ.
ಪೋಕ್ಸೋ ಪ್ರಕರಣಗಳ ವಿಶೇಷ ನ್ಯಾಯಾಲಯ ಪ್ರಾಸಿಕ್ಯೂಷನ್‌ನ ‘ಪೋಸ್ಟ್ ಆಫೀಸ್’ ಆಗಿ ಕಾರ್ಯನಿರ್ವಹಿಸಬಾರದು ಎಂದ ಹೈಕೋರ್ಟ್, ಧಾರ್ಮಿಕ ಸಂಸ್ಥೆಗಳ(ದುರುಪಯೋಗ ತಡೆ) ಕಾಯ್ದೆಯ ನಿಬಂಧನೆಗಳಿಗೆ ಸಂಬಂಧಿಸಿದಂತೆ ಶ್ರೀಗಳ ವಿರುದ್ಧದ ಆರೋಪಗಳನ್ನು ಮರುಪರಿಶೀಲಿಸುವಂತೆ ವಿಶೇಷ ನ್ಯಾಯಾಲಯಕ್ಕೆ ಸೂಚಿಸಿದೆ. ಅಲ್ಲದೆ ಶ್ರೀಗಳ ವಿರುದ್ಧದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ(ದೌರ್ಜನ್ಯ ತಡೆ) ಕಾಯ್ದೆಗೆ ಸಂಬಂಧಿಸಿದಂತೆ ಕಾನೂನಿನ ಪ್ರಕಾರ ಮುಂದುವರಿಯುವಂತೆ ಆದೇಶಿಸಿದೆ.
ತಮ್ಮ ವಿರುದ್ಧ ಪೋಕ್ಸೋ ಕಾಯ್ದೆ, ಬಾಲನ್ಯಾಯ(ಮಕ್ಕಳ ಆರೈಕೆ ಮತ್ತು ರಕ್ಷಣೆ) ಕಾಯಿದೆ, ಐಪಿಸಿ, ಧಾರ್ಮಿಕ ಸಂಸ್ಥೆಗಳ(ದುರುಪಯೋಗ ತಡೆ) ಕಾಯ್ದೆಯಡಿ ಬಾಕಿ ಉಳಿದಿರುವ ಪ್ರಕ್ರಿಯೆಗಳನ್ನು ಪ್ರಶ್ನಿಸಿ ಡಾ.ಶಿವಮೂರ್ತಿ ಮುರುಘಾ ಶರಣರು ಸಲ್ಲಿಸಿದ್ದ ನಾಲ್ಕು ಪ್ರತ್ಯೇಕ ಅರ್ಜಿಗಳನ್ನು ಭಾಗಶಃ ಪುರಸ್ಕರಿಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರು ಈ ತೀರ್ಪು ನೀಡಿದ್ದಾರೆ.