ಮನೆ ರಾಜ್ಯ ಜೀತವಿಮುಕ್ತರಿಗೆ 13 ಸರ್ಕಾರಿ ದಾಖಲೆಗಳನ್ನು ಒದಗಿಸಲು “ನನ್ನ ಗುರುತು” ವಿಶೇಷ ಅಭಿಯಾನ: ಕೆ. ಆರ್ ನಂದಿನಿ

ಜೀತವಿಮುಕ್ತರಿಗೆ 13 ಸರ್ಕಾರಿ ದಾಖಲೆಗಳನ್ನು ಒದಗಿಸಲು “ನನ್ನ ಗುರುತು” ವಿಶೇಷ ಅಭಿಯಾನ: ಕೆ. ಆರ್ ನಂದಿನಿ

0

ಮಂಡ್ಯ: ಸರ್ಕಾರದ ಎಲ್ಲಾ ಸೌಲಭ್ಯಗಳು, ಸವಲತ್ತುಗಳು ಜೀತವಿಮುಕ್ತ ಕುಟುಂಬದವರಿಗೆ ತಲುಪಬೇಕು ಎಂಬ ಸದುದ್ದೇಶದಿಂದ ಮಂಡ್ಯ ಜಿಲ್ಲೆಯಲ್ಲಿ ಪ್ರಥಮ ಭಾರಿಗೆ ಸರ್ಕಾರದ 13 ಸರ್ಕಾರಿ ದಾಖಲೆಗಳನ್ನು ಒದಗಿಸಲು “ನನ್ನ ಗುರುತು” ಎಂಬ ವಿಶೇಷ ಅಭಿಯಾನವನ್ನು ಆಯೋಜಿಸಲಾಗುತ್ತಿದೆ ಎಂದು ಜಿಲ್ಲಾ ಪಂಚಾಯತ್ ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ. ಆರ್ ನಂದಿನಿ ಅವರು ಹೇಳಿದರು.

ಅವರು ಇಂದು ಜಿಲ್ಲಾ ಪಂಚಾಯತ್ ಕಾವೇರಿ ಸಭಾಂಗಣದಲ್ಲಿ ಜೀತ ವಿಮುಕ್ತರನ್ನು ಸಾಮಾಜಿಕವಾಗಿ ಹಾಗೂ ಆರ್ಥಿಕವಾಗಿ ಪುನಶ್ಚೇತನಗೊಳಿಸುವ ನಿಟ್ಟಿನಲ್ಲಿ ಜೀತವಿಮಕ್ತರ ಸಂಘಟನೆಗಳೊAದಿಗೆ ಆಯೋಜಿಸಲಾಗಿದ್ದ ತ್ರೈಮಾಸಿಕ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಅಭಿಯಾನವನ್ನು ಯಶಸ್ವಿಗೊಳಿಸಲು ಜಿಲ್ಲೆಯಲ್ಲಿರುವ ಜೀತವಿಮುಕ್ತಗೊಂಡ ವ್ಯಕ್ತಿಗಳ ಮಾಹಿತಿಯನ್ನು ಸಂಗ್ರಹಿಸಿ ಒಂದು ತಿಂಗಳೊಳಗಾಗಿ ವರದಿ ನೀಡಬೇಕು ಎಂದು ಪಂಚಾಯತ್ ನ ಅಭಿವೃದ್ಧಿ ಅಧಿಕಾರಿಗಳಿಗೆ ತಿಳಿಸಿದರು.

ಮುಂದಿನ ಜುಲೈ ಮಾಹೆಯಲ್ಲಿ ಸಭೆಯನ್ನು ನಡೆಸಿ ವಿಶೇಷ ಅಭಿಯಾನದ ದಿನಾಂಕವನ್ನು ತಿಳಿಸಲಾಗುವುದು. ಜಿಲ್ಲೆಯ ಪ್ರತಿ ತಾಲ್ಲೂಕುಗಳಲ್ಲಿ ಸಮೀಕ್ಷೆ ನಡೆಸಿ ನಿವೇಶನ ಹಾಗೂ ವಸತಿ ರಹಿತರ ಪಟ್ಟಿಯನ್ನು ತಯಾರಿಸಿ ಹಾಗೂ ವಿಶೇಷ ಅಭಿಯಾನ ಕುರಿತು ಜೀತವಿಮುಕ್ತ ಕುಟುಂಬದವರಿಗೆ ಮಾಹಿತಿ ನೀಡಿ ಎಂದು ಹೇಳಿದರು.

ಜೀತವಿಮುಕ್ತರಿಗೆ ಸಾಧ್ಯವಾದಷ್ಟು ಸ್ಥಳೀಯ ಮಟ್ಟದಲ್ಲಿ ಪುನರ್ವಸತಿ ಕಲ್ಪಿಸಿಕೊಡಲು ಪ್ರಯತ್ನಿಸಿ ಮತ್ತು 13 ಸರ್ಕಾರಿ ದಾಖಲೆಗಳೊಂದಿಗೆ ಇ-ಆಸ್ತಿ ಖಾತೆಯನ್ನು ಸಹ ಕಲ್ಪಿಸಿಕೊಡಿ ಎಂದರು.

ವಿವಿಧ ಕೌಶಲ್ಯಗಳನ್ನು ಕೊಡಿಸಿ
ಜೀತ ಮಾಡುವುದು ಕಾನೂನು ಬಾಹಿರವಾಗಿದ್ದು, ವಂಶ ಪಾರಂಪರಿಕವಾಗಿ ಜೀತ ಮಾಡುತ್ತಿರುವುದು ಕಂಡು ಬಂದಲ್ಲಿ ಕ್ರಮಕೈಗೊಳ್ಳಿ ಹಾಗೂ ಜೀತವಿಮುಕ್ತ ಕುಟುಂಬದ ಮಕ್ಕಳು ಜೀವನ ರೂಪಿಸಿಕೊಳ್ಳಲು ವಿವಿಧ ಕೌಶಲ್ಯ ತರಬೇತಿಗಳನ್ನು ಒದಗಿಸಿ ಎಂದು ಅಧಿಕಾರಿಗಳಿಗೆ ತಿಳಿಸಿದರು.

ಜೀತವಿಮುಕ್ತ ಕುಟುಂಬದ ಮಹಿಳೆಯರು ಆರ್ಥಿಕವಾಗಿ ಸದೃಢರಾಗಬೇಕು. ಈ ನಿಟ್ಟಿನಲ್ಲಿ ಕಂಪ್ಯೂಟರ್ ಕೌಶಲ್ಯ, ಸಂವಹನ ಕೌಶಲ್ಯ ಹಾಗೂ ಚಾಲ್ತಿಯಲ್ಲಿರುವ ಇನ್ನಿತರ ಕೌಶಲ್ಯಗಳನ್ನು ಗುರುತಿಸಿ ತರಬೇತಿ ನೀಡಿ ಉದ್ಯೋಗ ಕಲ್ಪಿಸಿ ಎಂದರು.

ನನ್ನ ಗುರುತು ವಿಶೇಷ ಅಭಿಯಾನದಲ್ಲಿ ಒದಗಿಸಲಾಗುವ 13 ಸರ್ಕಾರಿ ದಾಖಲೆಗಳು
1.ಆಧಾರ್ ಕಾರ್ಡ್, 2.ಜನನ ಪ್ರಮಾಣ ಪತ್ರ, 3.ಜಾತಿ-ಆದಾಯ ಪ್ರಮಾಣ ಪತ್ರ, 4 ಇ -ಶ್ರಮ್ ಕಾರ್ಡ್ 5.ಪಡಿತರ ಚೀಟಿ, 6. ಮತದಾರರ ಗುರುತಿನ ಚೀಟಿ, 7.ಬ್ಯಾಂಕ್ ಖಾತೆ, 8.ಸಾಮಾಜಿಕ ಪಿಂಚಣಿ,9. ಪಿ.ಎಂ.ಜೆ.ಜೆ.ಬಿ.ವೈ, 10.ಪಿ. ಎಂ. ಎಸ್. ಬಿ. ವೈ, 11.ಯು.ಡಿ.ಐ.ಡಿ, 12. ನರೇಗಾ ಜಾಬ್ ಕಾರ್ಡ್ 13.ಅಭಾ ಕಾರ್ಡ್,

ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಯೋಜನಾಧಿಕಾರಿ ಧನುಷ್, ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಲಕ್ಷ್ಮಿ, ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ಜೀತವಿಮುಕ್ತ ಸಂಘಟನೆಗಳ ಅಧ್ಯಕ್ಷರು, ಸದಸ್ಯರುಗಳು ಉಪಸ್ಥಿತರಿದ್ದರು.