ಮನೆ ರಾಜ್ಯ ಜಿಲ್ಲಾಧಿಕಾರಿ ಸಂಧಾನ ಸಭೆ ಯಶಸ್ವಿ, ಸಮಾನ ಮನಸ್ಕರ ವೇದಿಕೆ ಕರೆ ನೀಡಿದ್ದ ‘ಮಂಡ್ಯ ಬಂದ್’ ವಾಪಸ್’

ಜಿಲ್ಲಾಧಿಕಾರಿ ಸಂಧಾನ ಸಭೆ ಯಶಸ್ವಿ, ಸಮಾನ ಮನಸ್ಕರ ವೇದಿಕೆ ಕರೆ ನೀಡಿದ್ದ ‘ಮಂಡ್ಯ ಬಂದ್’ ವಾಪಸ್’

0

ಮಂಡ್ಯ: ಲೋಕಸಭಾ ಚುನಾವಣೆ ಹೊತ್ತಿನಲ್ಲಿ ಹೊತ್ತಿಕೊಂಡ ಕೆರೆಗೋಡು ಹನುಮ ಧ್ವಜ ತೆರವು ವಿವಾದ ಸದ್ಯಕ್ಕೆ ತಣ್ಣಗಾದಂತೆ ಕಾಣುತ್ತಿದೆ. ವಿವಾದ ಸಂಬಂಧ ಜಿಲ್ಲಾಧಿಕಾರಿಗಳು ನಡೆಸಿದ ಸಂಧಾನ ಸಭೆ ಯಶಸ್ವಿಯಾಗಿದ್ದು, ನಾಳೆ ನಡೆಯಬೇಕಿದ್ದ ಮಂಡ್ಯ ಬಂದ್​​’ನ್ನು ತಾತ್ಕಾಲಿಕವಾಗಿ ಹಿಂಪಡೆಯಲಾಗಿದೆ.

ಕೆರಗೋಡು ಹನುಮ ಧ್ವಜ ತೆರವು ವಿರೋಧಿಸಿ ಫೆ.9ಕ್ಕೆ ಭಜರಂಗದಳ ಬಂದ್ ಗೆ ಕರೆ ಕೊಟ್ಟಿದೆ. ಮತ್ತೊಂದೆಡೆ ಭಜರಂಗದಳ ಬಂದ್ ಕರೆ ವಿರೋಧಿಸಿ ಫೆ.7 ಕ್ಕೆ ಸಮಾನ ಮನಸ್ಕರ ವೇದಿಕೆ ಬಂದ್​ಗೆ ಕರೆ ಕೊಟ್ಟಿತ್ತು.

ಸಮಾನ ಮನಸ್ಕರ ವೇದಿಕೆಗೆ ದಲಿತ ಪರ ಸಂಘಟನೆ, ಪ್ರಗತಿಪರರು, ಸಿಐಟಿಯು ಸೇರಿ ಹಲವು ಸಂಘಟನೆಗಳು ಬೆಂಬಲ ನೀಡಿದ್ದರು. ಆದರೆ, ಇದೀಗ ಜಿಲ್ಲಾಡಳಿತ ಮನವಿ ಮೇರೆಗೆ ಸಮಾನ ಮನಸ್ಕರ ವೇದಿಕೆ ಬಂದ್ ಹಿಂಪಡೆದಿದೆ.

ಮಂಡ್ಯ ಡಿಸಿ ಡಾ.ಕುಮಾರ್, ಎಸ್ಪಿ ಎನ್.ಯತೀಶ್ ನೇತೃತ್ವದಲ್ಲಿ ಸಭೆ ನಡೆಸಿ, ಬಂದ್ ನಿಂದ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಸಮಸ್ಯೆ ಆಗುತ್ತೆ. ಅಂಗಡಿ ಮುಂಗಟ್ಟುಗಳ ವ್ಯಾಪಾರಕ್ಕೂ, ಜನ ಸಾಮಾನ್ಯರಿಗೆ ತೊಂದರೆಯಾಗುತ್ತೆ. ಹೀಗಾಗಿ ಸಂಘಟನೆಗಳು ಬಂದ್ ಹಿಂಪಡೆಯಬೇಕು ಎಂದು ಜಿಲ್ಲಾಡಳಿತ ಮನವಿ ಮಾಡಿದೆ.

ಜಿಲ್ಲಾಡಳಿತದ ಮನವಿಗೆ ಸಮಾನ ಮನಸ್ಕರ ವೇದಿಕೆ ಸ್ಪಂದಿಸಿದ್ದು ಬಂದ್ ಹಿಂಪಡೆದಿದೆ. ಫೆ.7ರಂದು ಕರೆಕೊಟ್ಟಿದ್ದ ಬಂದ್ ತಾತ್ಕಾಲಿಕ ವಾಪಸ್ಸು ಪಡೆದಿದೆ. ಫೆ.9 ರಂದು ಮಂಡ್ಯ ನಗರ ಬಂದ್​ಗೂ ಅವಕಾಶ ಕೊಡಬೇಡಿ. ಫೆ.9 ರಂದು ಮಂಡ್ಯ ನಗರವನ್ನ ಭಜರಂಗದಳ ಬಂದ್ ಮಾಡಿದರೆ, ಅದನ್ನ ವಿರೋಧಿಸಿ ಮತ್ತೆ ಬಂದ್ ಗೆ ಕರೆಕೊಡುತ್ತೇವೆ ಎಂದು ಸಮಾನ ಮನಸ್ಕರ ವೇದಿಕೆ ಎಚ್ಚರಿಕೆ ನೀಡಿದೆ. ಆದರೆ ಫೆ.9 ರಂದು ಮಂಡ್ಯನಗರ ಬಂದ್ ಮಾಡದ ಬಗ್ಗೆ ಇನ್ನೂ ಭಜರಂಗದಳ ನಿಲುವು ತಿಳಿಸಿಲ್ಲ.

ಏನಿದು ವಿವಾದ?

ಮಂಡ್ಯ ಜಿಲ್ಲೆ ಕೆರಗೋಡು ಎಂಬಲ್ಲಿ ಗ್ರಾಮಸ್ಥರು ಮತ್ತು ಹಿಂದೂ ಸಂಘಟನೆ ಕಾರ್ಯಕರ್ತರು 108 ಅಡಿ ಎತ್ತರದ ಧ್ವಜ ಸ್ತಂಭದಲ್ಲಿ ಹನುಮ ಧ್ವಜ ವನ್ನು ಹಾರಿಸಿದ್ದರು. ಈ ಧ್ವಜವನ್ನು ತೆರವುಗೊಳಿಸಿದ ಪೊಲೀಸರ ಕ್ರಮ ಈಗ ಟೀಕೆಗೆ ಒಳಗಾಗಿದ್ದು, ಪ್ರತಿಭಟನೆಯೂ ವ್ಯಕ್ತವಾಗಿದೆ.

ಹಿಂದಿನ ಲೇಖನಮಡಿಕೇರಿ: ಕ್ಷುಲ್ಲಕ ಕಾರಣಕ್ಕೆ ಯುವಕನ ಬರ್ಬರ ಹತ್ಯೆ
ಮುಂದಿನ ಲೇಖನದೆಹಲಿಯಲ್ಲಿ ನಡೆಯುವ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಿ: ರಾಜ್ಯದ ಎಲ್ಲ ಸಂಸದರಿಗೆ, ಕೇಂದ್ರ ಸಚಿವರಿಗೆ ಖುದ್ದು ಪತ್ರ ಬರೆದ ಸಿಎಂ ಸಿದ್ದರಾಮಯ್ಯ