ಮೈಸೂರು(Mysuru): ಶಾಸಕ ಜಿ.ಟಿ.ದೇವೇಗೌಡ ಮೈಸೂರು ಭಾಗದ ಕ್ಷೇತ್ರಗಳ ಜೆಡಿಎಸ್ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಚಾಮುಂಡಿ ಬೆಟ್ಟದಲ್ಲಿ ಶುಕ್ರವಾರ ಪ್ರಕಟಿಸಿದರು.
ಪಕ್ಷದ ವರಿಷ್ಠ ಎಚ್.ಡಿ.ದೇವೇಗೌಡ ಅವರೊಂದಿಗೆ ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ನಾನು ಚಾಮುಂಡೇಶ್ವರಿಯಲ್ಲಿ, ಮಗ, ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಜಿ.ಡಿ.ಹರೀಶ್‌ಗೌಡ ಹುಣಸೂರಿನಲ್ಲಿ ಸ್ಪರ್ಧಿಸಲಿದ್ದೇವೆ. ಕೆ.ಆರ್.ನಗರಕ್ಕೆ ಸಾ.ರಾ.ಮಹೇಶ್, ಪಿರಿಯಾಪಟ್ಟಣಕ್ಕೆ ಕೆ.ಮಹದೇವ್, ತಿ.ನರಸೀಪುರಕ್ಕೆ ಅಶ್ವಿನ್‌ಕುಮಾರ್, ಎಚ್.ಡಿ.ಕೋಟೆಯಲ್ಲಿ ಮಾಜಿ ಶಾಸಕ ಚಿಕ್ಕಣ್ಣ ಪುತ್ರ ಜಯಪ್ರಕಾಶ್‌ಗೆ ಟಿಕೆಟ್ ಬಹುತೇಕ ಅಂತಿಮವಾಗಿದೆ ಎಂದು ಮಾಹಿತಿ ನೀಡಿದರು.
ನಾನು, ದೇವೇಗೌಡರು ಮನೆಗೆ ಬಂದ ದಿನವಾದ ಗುರುವಾರದಿಂದಲೇ ಪಕ್ಷ ಸಂಘಟನೆಯಲ್ಲಿ ತೊಡಗಿದ್ದೇನೆ. 3 ವರ್ಷಗಳ ನಂತರ ಮನಸ್ಸು ಸಮಾಧಾನದಲ್ಲಿದೆ. ನಾನು ಮತ್ತು ಕುಟುಂಬದವರು ಹೆಚ್ಚು ಖುಷಿಯಲ್ಲಿದ್ದೇವೆ. ಇನ್ನು ಯಾವ ಗೊಂದಲಗಳೂ ಉಳಿದಿಲ್ಲ ಎಂದು ಹೇಳಿದರು.
ಚಾಮುಂಡಿ ತಾಯಿಗೆ ದೇವೇಗೌಡರು ವಿಶೇಷ ಪೂಜೆ ಸಲ್ಲಿಸಿದ್ದಾರೆ. ಇನ್ನೊಂದು ತಿಂಗಳಿನಲ್ಲಿ, ನಾನು ಚೆನ್ನಾಗಿ ನಡೆಯುವಂತೆ ಶಕ್ತಿ ಕೊಡು ಎಂದು ಬೇಡಿಕೊಂಡಿದ್ದಾರೆ. ಜನವರಿಯಲ್ಲಿ ಚಂಡಿಕಾ ಹೋಮ ನಡೆಸಲಿದ್ದಾರೆ. ಅವರ ಉತ್ಸಾಹ ಕಂಡು ನಾವೇ ಅಚ್ಚರಿಗೆ ಒಳಗಾಗಿದ್ದೇವೆ. ಅವರೇ ನಮಗೆ ಪ್ರೇರಣೆ. ಅವರನ್ನು ಸಂತೋಷವಾಗಿಡುವುದೇ ನಮ್ಮ ಸಂತೋಷ ಎಂದು ಪ್ರತಿಕ್ರಿಯಿಸಿದರು.
ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಮಾತನಾಡಿ, ಜಿ.ಟಿ.ದೇವೇಗೌಡ ನಾಯಕತ್ವದ ಬಗ್ಗೆ ಪಕ್ಷದ ಮಟ್ಟದಲ್ಲಿ ಒಂದೇ ಒಂದು ಅಪಸ್ವರ ಕೇಳಿಬರುವುದನ್ನೂ ನಾನು ಸಹಿಸುವುದಿಲ್ಲ. ಅಪಸ್ವರ ಎತ್ತುವವರು ಹೊರ ಹೋಗಬಹುದು. ಜಿಲ್ಲೆಯ ಎಲ್ಲ ಉಸ್ತುವಾರಿವನ್ನೂ ಜಿಟಿಡಿಗೆ ವಹಿಸಿದ್ದೇವೆ. ಇಲ್ಲಿ ಅವರ ನಾಯಕತ್ವದಲ್ಲೇ ಎಲ್ಲವೂ ನಡೆಯುತ್ತದೆ. ಅವರ ತೀರ್ಮಾನವೇ ಅಂತಿಮ. ಈ ಬಗ್ಗೆ ಕೊಂಕು ಮಾತನಾಡಿದರೆ ನಾನು ಸಹಿಸುವುದಿಲ್ಲ ಎಂದು ಖಡಕ್ ಎಚ್ಚರಿಕೆ ನೀಡಿದರು.