ಮೈಸೂರು(Mysuru): ನಗರದ ಜಯನಗರದಲ್ಲಿರುವ ಮಳಲವಾಡಿ ನ್ಯಾಯಾಲಯಗಳ ಸಂಕೀರ್ಣದಲ್ಲಿ ನೂತನವಾಗಿ ಆರಂಭವಾಗುತ್ತಿರುವ “ಕಾನೂನು ನೆರವು ಅಭಿರಕ್ಷಕರ ಕಛೇರಿ” ಯನ್ನು ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷ ಎಂ.ಎಲ್.ರಘುನಾಥ ಉದ್ಘಾಟಿಸಿದರು.
ನಂತರ ನ್ಯಾಯಾಲಯದ ಆವರಣದಲ್ಲಿ ಲೋಕ ಅದಾಲತ್ ಕುರಿತು ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದರು.
ಫೆಬ್ರವರಿ ೧೧ರಂದು ಮೈಸೂರು ಜಿಲ್ಲೆಯನ್ನೊಳಗೊಂಡಂತೆ ರಾಜ್ಯಾದ್ಯಂತ ಎಲ್ಲಾ ನ್ಯಾಯಾಲಯಗಳಲ್ಲಿ ಬಾಕಿಯಿರುವ ಪ್ರಕರಣಗಳಲ್ಲಿ ಕಾನೂನಿನ ಪ್ರಕಾರ ರಾಜಿಯಾಗಬಹುದಾದ ಪ್ರಕರಣಗಳನ್ನು ಮತ್ತು ವ್ಯಾಜ್ಯ ಪೂರ್ವ ಪ್ರಕರಣಗಳನ್ನು ರಾಜೀ ಸಂಧಾನದ ಮೂಲಕ ಇತ್ಯರ್ಥಪಡಿಸುವ ಉದ್ದೇಶದಿಂದ ರಾಷ್ಟ್ರೀಯ ಲೋಕ ಅದಾಲತ್ ನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಮೈಸೂರು ನಗರ ಮತ್ತು ತಾಲೂಕುಗಳಲ್ಲಿನ ನ್ಯಾಯಾಲಯಗಳಲ್ಲಿ ಒಟ್ಟು ೧,೧೨,೧೧೩ ಪ್ರಕರಣಗಳು ವಿಚಾರಣೆಗೆ ಬಾಕಿ ಇದ್ದು ಅವುಗಳ ಪೈಕಿ ೫೯,೫೦೭ ಸಿವಿಲ್ ಪ್ರಕರಣಗಳು ಹಾಗೂ ೬೧,೬೦೬ಕ್ರಿಮಿನಲ್ ಪ್ರಕರಣಗಳಿದ್ದು ಈ ಪ್ರಕರಣಗಳಲ್ಲಿ ೩೪,೯೨೭ ಇತ್ಯರ್ಥವಾಗುವ ಸಂಭವವಿದೆ. ಈಗಾಗಲೇ ೧೬,೫೪೯ ಪ್ರಕರಣಗಳು ರಾಜೀ ಆಗುವ ಸಾಧ್ಯತೆ ಇರುವ ಪ್ರಕರಣಗಳು ಎಂದು ಗುರುತಿಸಲಾಗಿದೆ ಎಂದು ತಿಳಿಸಿದರು.
ಮೋಟಾರು ವಾಹನ ಅಪಘಾತ ಪ್ರಕರಣಗಳು ೩,೯೪೯, ರಾಜಿಯಾಗಬಹುದಾದ ಕ್ರಿಮಿನಲ್ ಪ್ರಕರಣಗಳು ೨,೩೦೬, ೧೩೮ ಎನ್ ಐ ಆಯಕ್ಟ್ (ಚೆಕ್ ಬೌನ್ಸ್) ಒಟ್ಟು ೨೨,೬೪೯ ಪ್ರಕರಣಗಳಿದ್ದು ಅವುಗಳ ಪೈಕಿ ಅಂದಾಜು ೪,೪೧೩, ನ್ಯಾಯಾಲಯಗಳಲ್ಲಿ ದಾಖಲಾಗದೇ ಇರುವಂತಹ ಪ್ರಕರಣ, ವ್ಯಾಜ್ಯ ಪೂರ್ವ ಪ್ರಕರಣಗಳು ೨೨೨, ಒಟ್ಟು ೧೦,೮೯೦ ಪ್ರಕರಣಗಳಿವೆ.
ರಾಜಿಯಾಗುವಂತಹ ಯಾವುದೇ ಪ್ರಕರಣಗಳನ್ನು ಕಕ್ಷಿಗಾರರ ವಿನಂತಿಯ ಮೇರೆಗೆ ಸಂಬಂಧಪಟ್ಟ ನ್ಯಾಯಾಲಯಗಳಲ್ಲಾಗಲಿ ಅಥವಾ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಅಥವಾ ಸಂಬಂಧಪಟ್ಟ ತಾಲೂಕು ಕಾನೂನು ಸೇವಾ ಸಮಿತಿಗಳನ್ನು ಸಂಪರ್ಕಿಸಿ ಅರ್ಜಿ ಸಲ್ಲಿಸಿದಲ್ಲಿ ಅಂತಹ ಪ್ರಕರಣಗಳನ್ನು ರಾಜಿ ಸಂಧಾನಕ್ಕಾಗಿ ತೆಗೆದುಕೊಳ್ಳಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಇವುಗಳಿಗೆ ಯಾವುದೇ ಕೋರ್ಟ್ ಫೀಸ್ ಕೊಡಬೇಕಿಲ್ಲ, ಪಕ್ಷಗಾರರು ನೇರವಾಗಿ ಭಾಗವಹಿಸಬಹುದು, ಪ್ರಕರಣಗಳು ರಾಜಿಯಾದಲ್ಲಿ ಶೇಖಡ ೧೦೦ರಷ್ಟು ನ್ಯಾಯಾಲಯ ಶುಲ್ಕವನ್ನು ಹಿಂದಿರುಗಿಸಲಾಗುವುದು. ಲೋಕ ಅದಾಲತ್ ಅವಾರ್ಡ್ ವಿರುದ್ಧ ಮೇಲ್ಮನವಿಗೆ ಅವಕಾಶವಿರುವುದಿಲ್ಲ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ದೇವರಾಜ ಭೂತೆ, ವಕೀಲರ ಸಂಘದ ಅಧ್ಯಕ್ಷ ಎಂ.ಮಹದೇವಸ್ವಾಮಿ, ವಕೀಲರ ಸಂಘದ ಕಾರ್ಯದರ್ಶಿ ಉಮೇಶ್ ಉಪಸ್ಥಿತರಿದ್ದರು.