ಮನೆ ಅಪರಾಧ ಮೈಸೂರು: ಆ್ಯಕ್ಸಿಡೆಂಟ್ ನೆಪದಲ್ಲಿ ಕಾರು ಚಾಲಕರನ್ನು ಸುಲಿಗೆ ಮಾಡುತ್ತಿದ್ದ ಖದೀಮನ ಬಂಧನ

ಮೈಸೂರು: ಆ್ಯಕ್ಸಿಡೆಂಟ್ ನೆಪದಲ್ಲಿ ಕಾರು ಚಾಲಕರನ್ನು ಸುಲಿಗೆ ಮಾಡುತ್ತಿದ್ದ ಖದೀಮನ ಬಂಧನ

0

ಮೈಸೂರು: ಆಕ್ಸಿಡೆಂಟ್ ನೆಪದಲ್ಲಿ ಕಾರು ಚಾಲಕರನ್ನು ಹೆದರಿಸಿ ಸುಲಿಗೆ ಮಾಡುತ್ತಿದ್ದ ಖದೀಮನನ್ನು ಕುವೆಂಪು ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಮೈಸೂರು ನಗರದ ರಾಜೇಂದ್ರ ನಗರದ ನಿವಾಸಿ ಜಮೀಲ್ ಖಾನ್(೩೨) ಬಂಧಿತನಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಬಂಧಿತನಿಂದ ೪೦ ಸಾವಿರ ರೂ. ನಗದು, ಕೃತ್ಯಕ್ಕೆ ಬಳಸುತ್ತಿದ್ದ ಸ್ಕೂಟರ್ ಹಾಗೂ ಮೊಬೈಲ್ ಫೋನ್ ವಶಪಡಿಸಿಕೊಳ್ಳಲಾಗಿದೆ.

ಕಳೆದ ಸೆ.೨ರಂದು ಕೆಎಸ್‌ ಆರ್‌ ಪಿಯ ನಿವೃತ್ತ ಎಎಸ್‌ ಐ ದೇವಯ್ಯ ಅವರು ಕಾರಿನಲ್ಲಿ ತೆರಳುತ್ತಿದ್ದಾಗ ಈತ ಹಿಂದಿನಿಂದ ಸ್ಕೂಟರ್‌ ನಲ್ಲಿ ಬಂದು ಕಾರನ್ನು ಅಡ್ಡ ಹಾಕಿ ಮಾರ್ಗ ಮಧ್ಯೆ ರಸ್ತೆ ಅಪಘಾತ ಮಾಡಿದ್ದೀರಾ ಇದರಿಂದ ನನ್ನ ಸ್ನೇಹಿತನ ಕಾಲು ಮುರಿದಿದೆ. ಆಸ್ಪತ್ರೆಗೆ ಸೇರಿಸಲು ಹಣ ನೀಡಬೇಕು. ಕೊಡದಿದ್ದರೆ ಜನರಿಂದ ಹೊಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿ ಅವರನ್ನು ಹತ್ತಿರದ ಎಟಿಎಂ ಕೇಂದ್ರಕ್ಕೆ ಕರೆದುಕೊಂಡು ಹೋಗಿ ಅವರಿಂದಲೇ ೪೦ ಸಾವಿರ ಹಣ ಡ್ರಾ ಮಾಡಿಸಿಕೊಂಡು ತೆರಳಿದ್ದ.

ಈ ಸಂಬಂಧ ನಿವೃತ್ತ ಎಎಸ್‌ ಐ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡ ಕುವೆಂಪು ನಗರ ಠಾಣೆ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ. ಈತನ ವಿರುದ್ಧ ೫ ಪ್ರಕರಣಗಳು ದಾಖಲಾಗಿದ್ದು, ಮೂರು ಪ್ರಕರಣಗಳು ಪತ್ತೆಯಾಗಿವೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ನಗರ ಪೊಲೀಸ್ ಆಯುಕ್ತ ಬಿ.ರಮೇಶ್ ಹೇಳಿದರು.

ಕಳೆದ ವರ್ಷ ರಸ್ತೆ ಅಪಘಾತಗಳಲ್ಲಿ ೧೭೦ ಮಂದಿ ಪ್ರಾಣ ತೆತ್ತಿದ್ದಾರೆ. ಈ ವರ್ಷ ೮೦ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ. ಸಂಚಾರಿ ನಿಯಮಗಳಿರುವುದು ಪೊಲೀಸರಿಗಾಗಿ ಅಲ್ಲ. ಸಾರ್ವಜನಿಕರು ತಮ್ಮ ಸುರಕ್ಷತೆಗಾಗಿ ಕಡ್ಡಾಯವಾಗಿ ಹೆಲ್ಮೆಟ್ ಧರಿಸಿ ಚಾಲನೆ ಮಾಡಬೇಕು. ಸಂಚಾರಿ ನಿಯಮಗಳನ್ನು ಪಾಲಿಸಬೇಕು.

-ರಮೇಶ್.ಬಿ, ನಗರ ಪೊಲೀಸ್ ಆಯುಕ್ತ

ಮೈಸೂರು ನಗರದಲ್ಲಿ ಕಳೆದ ಒಂದು ತಿಂಗಳಿಂದ ಆಕ್ಸಿಡೆಂಟ್ ಮಾಡಿದ್ದೀರಾ ಎಂದು ಕಾರು ಚಾಲಕರನ್ನು ಹೆದರಿಸಿ ಹಣ ಸುಲಿಗೆ ಮಾಡುತ್ತಿರುವ ವಿಚಾರ ಪತ್ತೆಯಾದ ಹಿನ್ನಲೆಯಲ್ಲಿ ಸುಲಿಗೆಕೋರರ ಪತ್ತೆಗೆ ವಿಶೇಷ ಕಾರ್ಯಾಚರಣೆ ನಡೆಸಲಾಗುತ್ತಿತ್ತು. ವಯಸ್ಸಾದವರು ಕಾರು ಚಾಲನೆ ಮಾಡಿಕೊಂಡು ಹೋಗುತ್ತಿರುವುದನ್ನು ಗಮನಿಸಿ ಅವರ ಕಾರನ್ನು ಬೆನ್ನತ್ತುತ್ತಿದ್ದ ಖದೀಮ, ಕಾರಿನ ಬಳಿ ಹೋಗಿ ಜೋರಾಗಿ ಸದ್ದು ಮಾಡಿ ಬಳಿಕ ಕಾರನ್ನು ಅಡ್ಡ ಹಾಕಿ. ನಿಮ್ಮ ಕಾರು ನಮ್ಮ ಸ್ನೇಹಿತನಿಗೆ ಡಿಕ್ಕಿ ಹೊಡೆದಿದೆ. ಇದರಿಂದ ಆತ ಗಾಯಗೊಂಡಿದ್ದಾನೆ. ಆತನಿಗೆ ಚಿಕಿತ್ಸೆ ಕೊಡಿಸಬೇಕು ಎಂದು ಹೇಳಿ ಹಣ ಸುಲಿಗೆ ಮಾಡುತ್ತಿದ್ದ. ಸಾಕಷ್ಟು ಮಂದಿಯಿಂದ ಈ ರೀತಿ ಹಣ ಸುಲಿಗೆ ಮಾಡಿದ್ದು, ಕೆಲವರು ಭಯದಿಂದ ತಾವೇ ಅಪಘಾತ ಮಾಡಿರಬಹುದು ಎಂಬ ಭಯದಿಂದ ದೂರು ನೀಡಲು ಬಂದಿಲ್ಲ. ಈ ರೀತಿಯಲ್ಲಿ ಯಾರಿಗಾದರೂ ಸಮಸ್ಯೆಯಾಗಿದ್ದರೆ ಹತ್ತಿರದ ಪೊಲೀಸ್ ಠಾಣೆಗೆ ದೂರು ನೀಡಿದರೆ ಕ್ರಮ ವಹಿಸಲಾಗುವುದು ಎಂದು ಹೇಳಿದರು.

ಡಿಸಿಪಿ ಎಸ್.ಜಾಹ್ನವಿ ಮಾರ್ಗದರ್ಶನದಲ್ಲಿ ಎಸಿಪಿ ಗಂಗಾಧರ ಸ್ವಾಮಿ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಕುವೆಂಪು ನಗರ ಠಾಣೆ ಇನ್ಸ್‌ಪೆಕ್ಟರ್ ಎಲ್. ಅರುಣ್, ಎಸ್‌ಐಗಳಾದ ಎಸ್.ಪಿ. ಗೋಪಾಲ್, ಎಂ.ರಾಧಾ, ಸಿಬ್ಬಂದಿಗಳಾದ ವಿ.ಆನಂದ್, ಎಂ.ಪಿ.ಮಂಜುನಾಥ್, ಹಜರತ್, ಪುಟ್ಟಪ್ಪ, ಸುರೇಶ್, ನಾಗೇಶ, ಅಮೋಘ್, ಕುಮಾರ್ ಇದ್ದರು. ಗೋಷ್ಠಿಯಲ್ಲಿ ಡಿಸಿಪಿಗಳಾದ ಮುತ್ತುರಾಜ್, ಎಸ್.ಜಾಹ್ನವಿ ಇದ್ದರು.

ಹಿಂದಿನ ಲೇಖನಏಕದಿನ ಕ್ರಿಕೆಟ್ ನಲ್ಲಿ ಹತ್ತು ಸಾವಿರ ರನ್ ಗಡಿ ದಾಟಿದ ರೋಹಿತ್ ಶರ್ಮಾ
ಮುಂದಿನ ಲೇಖನಪಿಓಪಿ ಗಣೇಶ ತಯಾರಕರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಲು ಈಶ್ವರ ಖಂಡ್ರೆ ಸೂಚನೆ