ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ದಿನ ಕಳೆದಂತೆ ಟ್ರಾಫಿಕ್ ಸಮಸ್ಯೆ ಬೆಳೆಯುತ್ತಲೇ ಇದ್ದು, ನೋ ಪಾರ್ಕಿಂಗ್ ನಲ್ಲಿ ಜೀಪ್ ನಿಲ್ಲಿಸಿ, ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡಿದ ಪೊಲೀಸರಿಗೆ, ಪೊಲೀಸರಿಂದಲೇ ದಂಡ ಬಿದ್ದಿದೆ.
ವಾಹನ ನಿಲುಗಡೆ ನಿಷೇಧ(ನೋ ಪಾರ್ಕಿಂಗ್) ಸ್ಥಳದಲ್ಲಿ ನಿಲ್ಲಿಸಲಾಗಿದ್ದ ಎರಡು ಪೊಲೀಸ್ ಜೀಪ್’ಗಳಿಗೇ ಪೊಲೀಸರೇ ದಂಡ ವಿಧಿಸಿದ್ದಾರೆ.
ಬುಧವಾರ ಜನವರಿ 18 ರಂದು ಮೈಸೂರಿನ ಅರಸು ರಸ್ತೆಯಲ್ಲಿ ಪೊಲೀಸರು ವಾಹನ ನಿಲುಗಡೆ ನಿಷೇಧ ಸ್ಥಳದಲ್ಲಿ ಪೊಲೀಸ್ ಜೀಪ್ ಗಳನ್ನು ನಿಲ್ಲಿಸಿದ್ದರು. ಇದನ್ನು ನೋಡಿದ ಸಾರ್ವಜನಿಕರು ಪೋಟೋ ಕ್ಲಿಕ್ಕಿಸಿ ನಗರ ಪೊಲೀಸ್ ಆಯುಕ್ತರಾದ ಬಿ.ರಮೇಶ್ ಅವರಿಗೆ ಕಳುಹಿಸಿದ್ದರು ಎನ್ನಲಾಗಿದೆ.
ಇದು ದೇವರಾಜ ಸಂಚಾರಿ ಠಾಣೆ ವ್ಯಾಪ್ತಿಗೆ ಸೇರಲಿದೆ. ಯಾವಾಗ ನೋ ಪಾರ್ಕಿಂಗ್ ನಲ್ಲಿ ಪೊಲೀಸ್ ಜೀಪ್ ಫೋಟೋಗಳು ಎಲ್ಲೆಡೆ ಹರಿದಾಡಿತೋ ದೇವರಾಜ ಸಂಚಾರಿ ಪೊಲೀಸ್ ಠಾಣೆ ಸಿಬ್ಬಂದಿ ದಂಡ ವಿಧಿಸಿದ್ದಾರೆ. ಪೊಲೀಸ್ ಜೀಪ್ ನಿಲ್ಲಿಸಿದ ಖಾಕಿ ಸಿಬ್ಬಂದಿಗೆ ಫೈನ್ ಹಾಕುವಂತೆ ಕಮಿಷನರ್ ಸೂಚನೆ ನೀಡಿದ್ದಾರೆ ಎನ್ನಲಾಗಿದೆ.
ಜೀಪ್ ನೋಂದಣಿ ಸಂಖ್ಯೆ ಕೆಎ೫೫ಜಿ೦೩೭೬, ಹಾಗೂ ಕೆಎ೫೫೫೦೩೭೭ ಇದರ ಮಾಲೀಕರಿಗೆ ತಲಾ ಒಂದೊಂದು ಸಾವಿರದಂತೆ ದಂಡ ವಿಧಿಸಲಾಗಿದೆ.