ಮನೆ ರಾಜ್ಯ ಮೈಸೂರು: ಕಲ್ಲು ಹಾಸಿನ ಮೇಲೆ ಕುಳಿತು ಮಗನ ಆಟ ವೀಕ್ಷಿಸಿದ ರಾಹುಲ್ ದ್ರಾವಿಡ್ ದಂಪತಿ

ಮೈಸೂರು: ಕಲ್ಲು ಹಾಸಿನ ಮೇಲೆ ಕುಳಿತು ಮಗನ ಆಟ ವೀಕ್ಷಿಸಿದ ರಾಹುಲ್ ದ್ರಾವಿಡ್ ದಂಪತಿ

0

ಮೈಸೂರು: ನಗರದ ಮಾನಸಗಂಗೋತ್ರಿ ಶ್ರೀಕಂಠ ದತ್ತ ನರಸಿಂಹರಾಜ ಒಡೆಯರ್ ಕ್ರೀಡಾಂಗಣದಲ್ಲಿ ಕರ್ನಾಟಕ ಹಾಗೂ ಉತ್ತರಾಖಂಡ ನಡುವೆ ನಡೆಯುತ್ತಿರುವ 19 ವರ್ಷದೊಳಗಿನ ಕೂಚ್ ಬೆಹರ್ ಟ್ರೋಫಿ ಕ್ರಿಕೆಟ್ ಪಂದ್ಯಾವಳಿಯಲ್ಲಿ ತಮ್ಮ ಮಗನ ಆಟವನ್ನು ನೋಡಲು ಆಗಮಿಸಿದ ರಾಹುಲ್ ದ್ರಾವಿಡ್ ದಂಪತಿ ಮೈದಾನದ ಕಲ್ಲಿನ ಮೆಟ್ಟಿಲುಗಳ ಮೇಲೆ ಕುಳಿತು ಆಟ ವೀಕ್ಷಣೆ ಮಾಡಿದರು.

ಶುಕ್ರವಾರದಿಂದ ಮೈಸೂರಿನ ಮಾನಸಗಂಗೋತ್ರಿಯ ಶ್ರೀಕಂಠ ದತ್ತ ನರಸಿಂಹರಾಜ ಒಡೆಯರ್ ಕ್ರೀಡಾಂಗಣದಲ್ಲಿ ಕೂಚ್ ಬೆಹರ್ ಟ್ರೋಫಿ ಪಂದ್ಯ ಆರಂಭವಾಗಿದೆ. ಕರ್ನಾಟಕ ಹಾಗೂ ಉತ್ತರಾಖಂಡ ನಡುವಿನ ಪಂದ್ಯದಲ್ಲಿ ರಾಹುಲ್ ದ್ರಾವಿಡ್ ಮಗ ಸಮಿತ್ ದ್ರಾವಿಡ್ ಆಟವಾಡುತ್ತಿದ್ದು, ಈ ಪಂದ್ಯವನ್ನು ನೋಡಲು ಟೀಮ್ ಇಂಡಿಯಾದ ಕೋಚ್ ರಾಹುಲ್ ದ್ರಾವಿಡ್ ತಮ್ಮ ಹೆಂಡತಿ ವಿಜೇತ ಅವರೊಂದಿಗೆ ಶುಕ್ರವಾರ ಕ್ರೀಡಾಂಗಣಕ್ಕೆ ಆಗಮಿಸಿ ಕ್ರೀಡಾಂಗಣದ ಮುಂಭಾಗದ ಕಲ್ಲಿನ ಮೆಟ್ಟಿಲುಗಳ ಮೇಲೆ ಸಾಮಾನ್ಯರಂತೆ ಕುಳಿತು ಮಗನ ಆಟವನ್ನು ನೋಡಿದರು.

ತಾವು ಕ್ರೀಡಾಂಗಣಕ್ಕೆ ಬರುವ ಮಾಹಿತಿಯನ್ನು ಯಾರಿಗೂ ನೀಡದೆ ಮೈದಾನಕ್ಕೆ ಬಂದು ಗಣ್ಯರ ಗ್ಯಾಲರಿಯಲ್ಲಿ ಕುಳಿತುಕೊಳ್ಳದೆ ಸಾಮಾನ್ಯರಂತೆ ಕಲ್ಲಿನ ಮೆಟ್ಟಿಲುಗಳ ಮೇಲೆ ಕುಳಿತು ಮಗನ ಆಟ ವೀಕ್ಷಿಸಿದ್ದು, ರಾಹುಲ್ ದ್ರಾವಿಡ್ ಅವರ ಸರಳತೆಗೆ ಸಾಕ್ಷಿಯಾಯಿತು.

ಈ ಸಂದರ್ಭದಲ್ಲಿ ರಾಹುಲ್ ದ್ರಾವಿಡ್ ಅವರನ್ನು ಗಮನಿಸಿದ ಕ್ರಿಕೆಟ್ ಅಭಿಮಾನಿಗಳು ಅವರ ಜೊತೆ ಫೋಟೋ ತೆಗೆಸಿಕೊಂಡು ಸಂಭ್ರಮಪಟ್ಟರು.

ಕರ್ನಾಟಕ ಹಾಗೂ ಉತ್ತರಾಖಂಡ ನಡುವಿನ ನಾಲ್ಕು ದಿನದ 19 ವರ್ಷದ ಒಳಗಿನ ಕೂಚ್ ಬೆಹರ್ ಟ್ರೋಫಿ ಪಂದ್ಯಾವಳಿಯಲ್ಲಿ ಮೊದಲು ಟಾಸ್ಕ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಉತ್ತರಾಖಂಡ ದಿನದ ಅಂತ್ಯಕ್ಕೆ 9 ವಿಕೆಟ್ ನಷ್ಟಕ್ಕೆ 232 ರನ್ ಮಾಡಿದ್ದು, ಎರಡನೇ ದಿನದ ಆಟ ಇಂದು ಮುಂದುವರೆದಿದೆ.

ಹಿಂದಿನ ಲೇಖನಆನೇಕಲ್: ದನದ ಕೊಟ್ಟಿಗೆಗೆ ಬೆಂಕಿ ಬಿದ್ದು 9 ಹಸುಗಳು ಸಾವು
ಮುಂದಿನ ಲೇಖನಅಗತ್ಯಬಿದ್ದರೆ ಮತ್ತಷ್ಟು ಗೋಶಾಲೆ ತೆರೆಯಲು ಸರ್ಕಾರ ಸಿದ್ಧ: ಪಶುಸಂಗೋಪನಾ ಸಚಿವ ಕೆ.ವೆಂಕಟೇಶ್