ಮೈಸೂರು : ಮೈಸೂರು ಜಿಲ್ಲೆಯು ಅಭಿವೃದ್ಧಿ ಹೊಂದಿರುವ ಜಿಲ್ಲೆಗಳಲ್ಲೊಂದಾಗಿದ್ದು, ಸಿ.ಎಂ.ತವರು ಜಿಲ್ಲೆಯೂ ಆಗಿದ್ದು ಇಲ್ಲಿನ ಆರೋಗ್ಯ ವ್ಯವಸ್ಥೆಯು ರಾಜ್ಯ ಮಟ್ಟದಲ್ಲಿ ಅಗ್ರಗಣ್ಯ ಸ್ಥಾನಕ್ಕೆ ಸೇರುವಂತೆ ಕಾರ್ಯ ನಿರ್ವಹಿಸಬೇಕು , ಮೂಲ ಸೌಲಭ್ಯವನ್ನು ನೀಡಬೇಕು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಚಿವರಾದ ದಿನೇಶ್ ಗುಂಡೂರಾವ್ ತಿಳಿಸಿದರು.
ನಗರದ ಜಿಲ್ಲಾ ಪಂಚಾಯತ್ನ ಡಿ ದೇವರಾಜ್ ಅರಸು ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಆರೋಗ್ಯ ಕ್ಷೇತ್ರಕ್ಕೆ ಸಂಬಂಧಿಸಿದ ಕುಂದು ಕೊರತೆಯನ್ನು ಪರಿಶೀಲಿಸಿ ನಿವಾರಿಸಿಕೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ತಮಿಳುನಾಡು, ಕೇರಳ ರಾಜ್ಯ ಆರೋಗ್ಯ ಕ್ಷೇತ್ರದಲ್ಲಿ ಉತ್ತಮ ವ್ಯವಸ್ಥೆಯನ್ನು ಹೊಂದಿವೆ ಅದರಂತೆ ಮೈಸೂರಿನಲ್ಲಿಯು ಆರೋಗ್ಯಕ್ಕೆ ಸಂಬಂಧಿಸಿದ ಸವಲತ್ತುಗಳು ಸಾರ್ವಜನಿಕರಿಗೆ ಸಿಗುವಂತೆ ಕರ್ತವ್ಯ ನಿರ್ವಹಿಸಿ ಎಂದರು.
ಅಭಿವೃದ್ಧಿ ಹೊಂದಿದ ಜಿಲ್ಲೆಗಳ ಪೈಕಿ ಮೈಸೂರು ಅಗ್ರಸ್ಥಾನದಲ್ಲಿದ್ದು, ಸಾರ್ವಜನಿಕರಿಗೆ ಗುಣಮಟ್ಟದ ಆರೋಗ್ಯ ಸೇವೆಗಳು ಲಭ್ಯವಾಗುವಂತೆ ನೋಡಿಕೊಳ್ಳುವುದು ಎಲ್ಲಾ ವೈದ್ಯಾಧಿಕಾರಿಗಳ ಜವಾಬ್ದಾರಿ ತಾಲೂಕು ಆಸ್ಪತ್ರೆಗಳಿಗೆ ಸುಸಜ್ಜಿತ ಕಟ್ಟಡ, ವೈದ್ಯಕೀಯ ಉಪಕರಗಳ ಜತೆಗೆ ಅಗತ್ಯ ಸಿಬ್ಬಂದಿ ಇದ್ದರೂ, ಹೊರ ರೋಗಿಗಳ ಪ್ರಮಾಣ ಕುಸಿದಿರುವುದಕ್ಕೆ ಕಾರಣ ಏನು. ಆಸ್ಪತ್ರೆಗಳಲ್ಲಿ ಉತ್ತಮ ಸೇವೆ ಲಭ್ಯವಿದ್ದರೆ ಜನರು ಏಕೆ ಬೇರೆಡೆಗೆ ಹೋಗುತ್ತಾರೆ ಎಂದು ಪ್ರಶ್ನಿಸಿದರು.
ಪಿರಿಯಾಪಟ್ಟಣ ತಾಲೂಕು ಆಸ್ಪತ್ರೆಯಲ್ಲಿ ಹೊರ ರೋಗಿಗಳ ದಾಖಲಾತಿ ಕಡಿಮೆ ಇರುವುದು ಸ್ತ್ರೀ ರೋಗ ತಜ್ಞರು ಮತ್ತು ಅರವಳಿಕೆ ತಜ್ಞರು ಇಲ್ಲದೇ ಇರುವುದೇ ಇದಕ್ಕೆ ಕಾರಣ. ಬಹುಪಾಲು ಮಂದಿ ಕೆ.ಆರ್.ನಗರ ಮತ್ತು ಮಡಿಕೇರಿ ಆಸ್ಪತ್ರೆಗೆ ಹೋಗುತ್ತಾರೆ ಎಂದು ತಾಲೂಕು ವೈದ್ಯಾಧಿಕಾರಿ ಮಾಹಿತಿ ನೀಡಿದರು. ಸಚಿವರು ಕೂಡಲೇ ಅಗತ್ಯ ವೈದ್ಯರನ್ನು ನೇಮಿಸುವಂತೆ ವೈದ್ಯಾಧಿಕಾರಿಗಳಿಗೆ ಸೂಚಿಸಿದರು.
ಪಿರಿಯಾಪಟ್ಟಣ ಮಾತ್ರವಲ್ಲದೇ ಹುಣಸೂರು ಮತ್ತು ತಿ. ನರಸೀಪುರದಲ್ಲೂ ಆಸ್ಪತ್ರೆಗಳಿಗೆ ರೋಗಿಗಳು ಬರುವ ಪ್ರಮಾಣ ತಗ್ಗಿದೆ. ಗುಣಮಟ್ಟದ ಚಿಕಿತ್ಸೆ ಇಲ್ಲಿಯೇ ಲಭ್ಯವಾದರೆ ಜನರು ಬೇರೆಡೆ ಹೋಗುವುದಿಲ್ಲ. ವೈದ್ಯಾಧಿಕಾರಿಗಳು ಈ ಬಗ್ಗೆ ಹೆಚ್ಚಿನ ಗಮನ ಹರಿಸಬೇಕು ಎಂದರು.
3 ತಾಯಿ, 60 ಮಕ್ಕಳು ಸಾವು: ಜಿಲ್ಲೆಯಲ್ಲಿ ಕಳೆದ ಒಂದು ವರ್ಷದಲ್ಲಿ ಹೆರಿಗೆ ಸಂದರ್ಭ ಮೂವರು ತಾಯಂದಿರು ಮತ್ತು 60 ಮಕ್ಕಳು ನಿಧನರಾಗಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು. ಇದರಿಂದ ಕೋಪಗೊಂಡ ಸಚಿವರು, ಎಲ್ಲಾ ಆಸ್ಪತ್ರೆಗಳಿಗೂ ಅಗತ್ಯ ಸೌಲಭ್ಯ ನೀಡಿದ್ದರೂ ತಾಯಿ ಮತ್ತು ಶಿಶುಗಳ ಮರಣವನ್ನು ನಿಯಂತ್ರಿಸಲು ಏಕೆ ಸಾಧ್ಯವಾಗಿಲ್ಲ ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಜಿಲ್ಲೆಯಲ್ಲಿ 2 ತಿಂಗಳಲ್ಲಿ 6101 ಗರ್ಭಿಣಿಯರ ತಪಾಸಣೆ ಮಾಡಿದ್ದು, ವರ್ಷಕ್ಕೆ 36 ಸಾವಿರ ಹೆರಿಗೆಯಾಗುತ್ತಿದೆ. ಮನೆಯಲ್ಲಿ ಹೆರಿಗೆಯಾದ ಒಂದೂ ಪ್ರಕರಣ ಇಲ್ಲ. ತಾಲೂಕು ಆಸ್ಪತ್ರೆಗಳಲ್ಲಿಯೇ ಸುಸಜ್ಜಿತ ಹೆರಿಗೆ ವಾರ್ಡ್ಗಳಿವೆ ಎಂದು ಸಚಿವರಿಗೆ ವಿವರಿಸಿದರು.
ಹೆರಿಗೆಗೂ ಮುನ್ನ ಹೆರಿಗೆಯ ನಂತರ ರಕ್ತ ಹೀನತೆಯಿಂದ ಬಳಲುತ್ತಿರುವವರ ಬಗ್ಗೆ ಮಾಹಿತಿ ಇರಬೇಕು. ಪ್ರತಿ ಗರ್ಭೀಣಿಯರ ಮನೆಗೆ ಆಶಾ ಕಾರ್ಯಕರ್ತೆಯರು ಭೇಟಿ ನೀಡಿ ಮಾಹಿತಿ ಸಂಗ್ರಹಿಸಬೇಕು ಎಂದು ಸೂಚಿಸಿದರು.
215 ಅಪೌಷ್ಟಿಕ ಮಕ್ಕಳು: ಜಿಲ್ಲೆಯಲ್ಲಿ 149386 ಮಕ್ಕಳು ಅಂಗನವಾಡಿಯಲ್ಲಿ ದಾಖಲಾಗಿದ್ದು, ಇವರಲ್ಲಿ 4919ಮಕ್ಕಳು ಕಡಿಮೆ ತೂಕ ಹೊಂದಿದ್ದರೆ 215 ಮಕ್ಕಳು ಅಪೌಷ್ಠಿಕತೆಯಿಂದ ಬಳಲುತ್ತಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ಅಪೌಷ್ಟಿಕತೆಯಿರುವ ಮಕ್ಕಳಿಗೆ ಸೂಕ್ತ ಚಿಕಿತ್ಸೆ ಜತೆಗೆ ಗುಣಮಟ್ಟದ ಪೌಷ್ಟಿಕ ಆಹಾರ ಕೊಡಬೇಕು. ಅಧಿಕಾರಿಗಳು ನೀಡುತ್ತಿರುವ ಮಾಹಿತಿ ಸಮರ್ಪಕವಾಗಿಲ್ಲ ಎಂದು ಅಸಮಾಧಾನ ಹೊರಹಾಕಿದ ಅವರು, ಜಿಪಂ ಸಿಇಒ, ಮಹಿಳಾ ಮಕ್ಕಳು ಕಲ್ಯಾಣ ಇಲಾಖೆ ಅಧಿಕಾರಿಗಳು ಸಭೆ ಮಾಡಿ ಅಪೌಷ್ಠಿಕತೆ ನಿವಾರಣೆಗೆ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.
ಹುಣಸೂರು ಆಸ್ಪತ್ರೆಗೆ ಭೇಟಿ: ಹುಣಸೂರು ಪಟ್ಟಣದಲ್ಲಿ 25 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಬೇಕಿದ್ದ ಆಸ್ಪತ್ರೆ ನಿರ್ಮಾಣ ಕಾಮಗಾರಿ ಅಪೂರ್ಣವಾಗಿರುವುದಕ್ಕೆ ಬೇಸರ ವ್ಯಕ್ತಪಡಿಸಿದ ಅವರು, 2018ರಿಂದ ಕಾಮಗಾರಿ ಆರಂಭವಾಗಿ ಇನ್ನೂ ಮುಗಿಯದಿರುವುದಕ್ಕೆ ಕಾರಣ ಕೇಳಿದರು.
ಸಭೆಯಲ್ಲಿ ಶಾಸಕರಾದ ತನ್ವೀರ್ ಸೇಠ್, ಕೆ.ಹರೀಶ್ಗೌಡ, ಆರೋಗ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ ಟಿ.ಕೆ.ಅನಿಲ್ಕುಮಾರ್, ಆಯುಕ್ತ ಡಿ.ರಂದೀಪ್, ಸಚಿವರ ಆಪ್ತ ಕಾರ್ಯದರ್ಶಿ ಕೆ.ಎ.ಇದಾಯತುಲ್ಲಾ, ಜಿಪಂ ಸಿಇಒ ಕೆ.ಎಂ. ಗಾಯತ್ರಿ, ಡಿಎಚ್ಒ ಡಾ.ಕೆ.ಎಚ್.ಪ್ರಸಾದ್ ಸೇರಿದಂತೆ ಹಲವರು ಇದ್ದರು.














