ಮನೆ ತಂತ್ರಜ್ಞಾನ ಮೈಸೂರು: ಅ.19 ಹಾಗೂ 20ರಂದು ‘ದಿ ಬಿಗ್‌ ಟೆಕ್ ಷೋ’

ಮೈಸೂರು: ಅ.19 ಹಾಗೂ 20ರಂದು ‘ದಿ ಬಿಗ್‌ ಟೆಕ್ ಷೋ’

0

ಮೈಸೂರು(Mysuru): ಕರ್ನಾಟಕ ಡಿಜಿಟಲ್‌ ಎಕಾನಮಿ ಮಿಷನ್‌ (ಕೆಡಿಇಎಂ) ‘ಬಿಯಾಂಡ್‌ ಬೆಂಗಳೂರು’ ಅಭಿಯಾನದಡಿಯಲ್ಲಿ ನಗರದ ರ್ಯಾಡಿಸನ್‌ ಬ್ಲೂ ಹೋಟೆಲ್‌ನಲ್ಲಿ ಅ.19 ಹಾಗೂ 20ರಂದು ಆಯೋಜಿಸಿರುವ ‘ದಿ ಬಿಗ್‌ ಟೆಕ್ ಷೋ’ ಎಂದು ಕರ್ನಾಟಕ ಡಿಜಿಟಲ್‌ ಎಕಾನಮಿ ಮಿಷನ್‌ ಸಿಇಒ ಸಂಜೀವ್‌ ಗುಪ್ತಾ ಹೇಳಿದರು.

ಮಂಗಳವಾರ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಬೆಂಗಳೂರಿನ ನಂತರ ಸಾಫ್ಟ್‌ವೇರ್‌ ರಫ್ತಿನಲ್ಲಿ ಮೈಸೂರು ಎರಡನೇ ಸ್ಥಾನದಲ್ಲಿದ್ದು, 2026ರ ವೇಳೆಗೆ ರಫ್ತು ಪ್ರಮಾಣವನ್ನು ₹ 5 ಸಾವಿರ ಕೋಟಿಯಿಂದ ₹ 10 ಸಾವಿರ ಕೋಟಿಗೆ ಹೆಚ್ಚಿಸುವ ಗುರಿ ಹಾಕಿಕೊಳ್ಳಲಾಗಿದೆ ಎಂದು ಹೇಳಿದರು

ನಗರದಲ್ಲಿನ ಮಾಹಿತಿ ತಂತ್ರಜ್ಞಾನ ಆಧಾರಿತ ಉದ್ದಿಮೆಗಳಲ್ಲಿ ಸುಮಾರು 80 ಸಾವಿರ ತಂತ್ರಜ್ಞರು ಕೆಲಸ ನಿರ್ವಹಿಸುತ್ತಿದ್ದು, ಸರ್ಕಾರದ ನೂತನ ಕ್ರಮಗಳಿಂದ ಬರುವ ನಾಲ್ಕು ವರ್ಷಗಳಲ್ಲಿ ಇವರ ಪ್ರಮಾಣ ದ್ವಿಗುಣಗೊಳ್ಳಲಿದೆ ಎಂದು ಪ್ರತಿ‍ಪಾದಿಸಿದರು.

ಡಿಜಿಟಲ್‌ ಆರ್ಥಿಕತೆಯಲ್ಲಿ ರಾಜ್ಯವು ಮೊದಲ ಸ್ಥಾನದಲ್ಲಿದೆ. ಕಳೆದ ವರ್ಷದ ಬಿಗ್‌ಟೆಕ್‌ ಷೋ ಫಲ‍ಪ್ರದವಾಗಿದ್ದು, ಹಲವು ಉದ್ಯಮಗಳು ಮೈಸೂರಿನಲ್ಲಿ ಹೂಡಿಕೆ ಮಾಡಲು ಮುಂದಾಗಿವೆ. ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಲ್ಲದೆ, ನವೋದ್ಯಮ ಸ್ಥಾಪನೆಗೊಳ್ಳಲು ಅಗತ್ಯ ಸೌಕರ್ಯ ಒದಗಿಸುವ ವೇದಿಕೆ ಕಲ್ಪಿಸಲಾಗುತ್ತಿದೆ. ಹೂಡಿಕೆದಾರರು– ನವೋದ್ಯಮಿಗಳ ಸಂವಹನಕ್ಕೆ ಅಭಿಯಾನವು ಪೂರಕವಾಗಿ ಕೆಲಸ ಮಾಡುತ್ತಿದೆ ಎಂದು ಹೇಳಿದರು.

ಬಿಯಾಂಡ್‌ ಬೆಂಗಳೂರು ಅಭಿಯಾನದಿಂದ ಪ್ರಯೋಜನ ಪಡೆದಿರುವ ನವೋದ್ಯಮಿಗಳಲ್ಲಿ ಶೇ 30 ರಷ್ಟು ಮಹಿಳೆಯರಾಗಿದ್ದಾರೆ. 1,200 ಮಹಿಳಾ ಉದ್ಯಮಿಗಳು ಹೊರಹೊಮ್ಮಿದ್ದಾರೆ ಎಂದರು.

ಎಕೋಸಾಫ್ಟ್‌ ಟೆಕ್ನಾಲಜಿ ಸಿಇಒ ಸುಧನ್ವಾ ಧನಂಜಯ ಮಾತನಾಡಿ, ಐ.ಟಿ, ಎಲೆಕ್ಟ್ರಾನಿಕ್ಸ್‌ ಉದ್ಯಮಿಗಳು ಬೆಂಗಳೂರು, ಪುಣೆಯಲ್ಲೇ ಉದ್ಯಮ ಸ್ಥಾಪನೆಗೆ ಒಲವು ತೋರುತ್ತಿದ್ದರು. ಇದೀಗ ತಂತ್ರಜ್ಞಾನ ಉದ್ಯಮಗಳ ಸ್ಥಾಪನೆಗೆ ಮೈಸೂರು ಪ್ರಶಸ್ತ ಸ್ಥಳವಾಗಿದೆ. ಲಹರಿ, ಫ್ಯಾಬ್‌, ಸೆಮಿಕಂಡಕ್ಟರ್‌ ಸ್ಥಾಪನೆಯಾಗುತ್ತಿದ್ದು, ಉದ್ಯೋಗ ಸೃಷ್ಟಿಯ ನಗರವಾಗಲಿದೆ ಎಂದರು.

ಕಿರು ಬಂಡವಾಳದಲ್ಲಿ ಮತ್ತೆ ಉದ್ಯಮಗಳನ್ನು ಸ್ಥಾಪಿಸಲು ಮೈಸೂರಿಗರು ಮುಂದಾಗುತ್ತಿದ್ದು, ಹೂಡಿಕೆದಾರರು ಹೆಚ್ಚಿನ ಆಸಕ್ತಿ ವಹಿಸಿರುವುದು ಉತ್ತಮ ಬೆಳವಣಿಗೆಯಾಗಿದೆ ಎಂದರು.

ಉದ್ಯಮಿ ಮಹೇಶ್‌ ರಾವ್‌ ಮಾತನಾಡಿ, ಎಲೆಕ್ಟ್ರಾನಿಕ್ಸ್‌ ವಿನ್ಯಾಸ ಮಾಡುವ ಉದ್ಯಮಗಳು ಮೈಸೂರಿನಿಂದ ರಫ್ತು ಮಾಡುತ್ತಿದ್ದವು. ವಿನ್ಯಾಸ್‌, ಕೇನ್ಸ್, ರಾಮ್ಸನ್ಸ್‌ ರಫ್ತು ಸಾವಿರ ಕೋಟಿ ದಾಟುತ್ತದೆ. ವಿದೇಶದಲ್ಲಿನ ಭಾರತೀಯ ಪ್ರತಿಭೆಗಳು ಮಧ್ಯಮ ಪ್ರಮಾಣದ ಉದ್ಯಮಗಳ ಸ್ಥಾಪಿಸಲು ವಾಪಸಾಗುತ್ತಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು.

ಮಾಹಿತಿ ಹಂಚಿಕೆ ಹಾಗೂ ವಿಶ್ಲೇಷಣಾ ಕೇಂದ್ರದ (ಐಎಸ್‌ಎಸಿ) ಪ್ರಭಾರ ನಿರ್ದೇಶಕ ಆನಂದ ನಾಯ್ಡು, ಪ್ರೊಕ್ಸಿಲೆರಾ ಲಿಮಿಟೆಡ್‌ನ ರವಿಶಂಕರ್‌, ಕೆಡಿಇಎಂ ಮೈಸೂರು ವಿಭಾಗದ ಪ್ರಧಾನ ವ್ಯವಸ್ಥಾಪಕ ಕೆ.ಎಸ್‌.ಸುಧೀರ್‌ ಇದ್ದರು.