ಮೈಸೂರು(Mysuru): ವಿಶ್ವವಿಖ್ಯಾತ ದಸರಾ ಮಹೋತ್ಸವಕ್ಕೆ ದಿನಗಣನೆ ಆರಂಭವಾಗಿದೆ. ಈಗಾಗಲೇ ದಸರಾ ಜಂಬೂ ಸವಾರಿಯಲ್ಲಿ ಭಾಗವಹಿಸುವ ಗಜಪಡೆಗಳಿಗೆ ತಾಲೀಮು ನಡೆಯುತ್ತಿದೆ. ಇಂದು ಫಿರಂಗಿ ಮೂಲಕ ಎರಡನೇ ಬಾರಿಗೆ ಸಿಡಿಮದ್ದು ಸಿಡಿಸುವ ತಾಲೀಮು ನಡೆಸಲಾಗಿದ್ದು, ಗಜಪಡೆ, ಅಶ್ವಗಳು ಯಾವುದೂ ವಿಚಲಿತವಾಗದೇ, ತಾಲೀಮು ಯಶಸ್ವಿಯಾಗಿದೆ.
ಅಕ್ಟೋಬರ್ 5ರಂದು ನಡೆಯಲಿರುವ ವಿಶ್ವವಿಖ್ಯಾತ ಜಂಬೂ ಸವಾರಿಯಲ್ಲಿ ಪಾಲ್ಗೊಳ್ಳಲಿರುವ ಗಜಪಡೆ ಮತ್ತು ಅಶ್ವಾರೋಹಿದಳದ ಕುದುರೆಗಳು ಭಾರೀ ಶಬ್ದಗಳಿಗೆ ಬೆಚ್ಚದಂತೆ ಅವು ಶಬ್ದಗಳಿಗೆ ಹೊಂದಿಕೊಳ್ಳಲು ಅನುಕೂಲವಾಗಲೆಂದು ತಾಲೀಮು ನಡೆಸಲಾಗುತ್ತಿದ್ದು, ಇಂದು ವಸ್ತು ಪ್ರದರ್ಶನ ಮೈದಾನದ ವಾಹನ ನಿಲುಗಡೆ ಸ್ಥಳದಲ್ಲಿ ಮೂರು ಸುತ್ತಿನ ಫಿರಂಗಿ ಮೂಲಕ ಸಿಡಿಮದ್ದು ಸಿಡಿಸುವ ತಾಲೀಮು ನಡೆದಿದ್ದು, ಇದಕ್ಕೆ ತಕ್ಕ ಸಿದ್ಧತೆಯನ್ನು ಮೊದಲೇ ಮಾಡಿಕೊಳ್ಳಲಾಗಿತ್ತು.
ಸೆ.12ರಂದು ಮೊದಲ ಸಿಡಿಮದ್ದು ಸಿಡಿಸುವ ತಾಲೀಮು ನಡೆದಿತ್ತು. ಆ ವೇಳೆ ಕುದುರೆಗಳು, ಮೂರು ಆನೆಗಳು ಬೆಚ್ಚಿದ್ದವು. ಆದರೆ ಈ ಬಾರಿ ಶಬ್ದಗಳಿಗೆ ಯಾವುದೂ ವಿಚಲಿತವಾಗದೆ ಸುಮ್ಮನೆ ನಿಂತಿದ್ದವು.
ಡಿಸಿಪಿ ಶಿವರಾಜ್ ಮಾತನಾಡಿ ವಸ್ತು ಪ್ರದರ್ಶನ ಮೈದಾನದ ವಾಹನ ನಿಲುಗಡೆ ಜಾಗದಲ್ಲಿ ಇಂದು ಫಿರಂಗಿ ಮೂಲಕ ಎರಡನೇ ಸಿಡಿಮದ್ದು ಸಿಡಿಸುವ ತಾಲೀಮು ನಡೆದಿದೆ. ಪ್ರತಿಬಾರಿ ಅರಮನೆ ಬಳಿ ಮಾಡುತ್ತಿದ್ದೆವು. ಅರಮನೆಯ ಗೋಡೆಗಳಿಗೆ ತೊಂದರೆಯಾಗಲಿವೆ ಎನ್ನುವ ಕಾರಣಕ್ಕೆ ಇಲ್ಲಿ ಮಾಡಿದ್ದೇವೆ. ಈ ಬಾರಿ ಶಬ್ದಕ್ಕೆ ಯಾವ ಪ್ರಾಣಿಯೂ ಬೆದರಲಿಲ್ಲ. ತಾಲೀಮಿನಲ್ಲಿ 41 ಕುದುರೆಗಳು ಭಾಗಿಯಾಗಿತ್ತು. 12 ಆನೆಗಳು ಭಾಗಿಯಾಗಿತ್ತು. ಸಿಡಿಮದ್ದು ಒಟ್ಟಾರೆ 92.2ಡೆಸಿಬಲ್ ಎವರೇಜ್ ಇದೆ ಎಂದು ತಿಳಿಸಿದರು.
ಸೆ.23ರಂದು ಮೂರನೆ ಬಾರಿಗೆ ಸಿಡಿಮದ್ದು ಸಿಡಿಸುವ ತಾಲೀಮು ನಡೆಯಲಿದೆ.