ಮನೆ ಸ್ಥಳೀಯ ಮೈಸೂರು: ಮನೆ ಮುಂದೆ ಆಟವಾಡುತ್ತಿದ್ದ ಮೂವರು ಬಾಲಕಿಯರು ನಾಪತ್ತೆ!

ಮೈಸೂರು: ಮನೆ ಮುಂದೆ ಆಟವಾಡುತ್ತಿದ್ದ ಮೂವರು ಬಾಲಕಿಯರು ನಾಪತ್ತೆ!

0

ಮೈಸೂರು: ನಂಜನಗೂಡು ಪಟ್ಟಣದ ಅಶೋಕಪುರಂನಲ್ಲಿರುವ ಮನೆ ಮುಂದೆ ಆಟವಾಡುತ್ತಿದ್ದ ಮೂರು ಬಾಲಕಿಯರು ನಾಪತ್ತೆಯಾಗಿರುವ ಘಟನೆ ಪ್ರಕಟವಾಗಿದ್ದು, ಸ್ಥಳೀಯರಲ್ಲಿ ಮತ್ತು ಮಕ್ಕಳ ಪೋಷಕರಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ನಾಪತ್ತೆಯಾಗಿರುವ ಮಕ್ಕಳು ಸುಮಾರು 10–11 ವರ್ಷ ವಯಸ್ಸಿನವರಾಗಿದ್ದು, ಪ್ರಕರಣ ಈಗಾಗಲೇ ನಂಜನಗೂಡು ನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

ಅಶೋಕಪುರಂ ನಿವಾಸಿಗಳಾದ ಸಿದ್ದರಾಜು ಅವರ ಮಗಳು ಲಾವಣ್ಯ (11), ಮುದ್ದೇಶ್ ಅವರ ಮಗಳು ಅಮೂಲ್ಯ (10), ಮತ್ತು ಯಶು (10) ನಾಪತ್ತೆಯಾದ ಮಕ್ಕಳು. ನಿನ್ನೆ ಮಧ್ಯಾಹ್ನದ ವೇಳೆ ಇವರು ತಾವು ಮನೆ ಮುಂದೆ ಆಟವಾಡುತ್ತಿದ್ದರು. ಆದರೆ ಸಂಜೆಯಾದರೂ ಅವರು ಮನೆಗೆ ವಾಪಸ್ ಆಗದೇ ಹೋದ ಕಾರಣ ಪೋಷಕರು ಅಂಜಿಕೆಗೊಂಡು ತಕ್ಷಣವೇ ಹುಡುಕಾಟ ಆರಂಭಿಸಿದರು.

ಪೋಷಕರು ಹತ್ತಿರದ ಕಡೆಗಳಲ್ಲಿ ಎಲ್ಲೆಡೆ ಹುಡುಕಿದರೂ ಕೂಡ ಮಕ್ಕಳ ಯಾವುದೇ ಸುಳಿವು ಸಿಗದೆ ಇದ್ದ ಕಾರಣ, ಅವರು ನಂಜನಗೂಡು ನಗರ ಪೊಲೀಸ್ ಠಾಣೆಗೆ ದೂರು ನೀಡಿದರು. ಪ್ರಕರಣದ ಗಂಭೀರತೆಯನ್ನು ಮನಗಂಡ ಪೊಲೀಸರು ಇನ್ಸ್ ಪೆಕ್ಟರ್ ರವೀಂದ್ರ ಅವರ ನೇತೃತ್ವದಲ್ಲಿ ವಿಶೇಷ ತನಿಖಾ ತಂಡ ರಚಿಸಿದ್ದು, ತ್ವರಿತ ಹುಡುಕಾಟ ಆರಂಭಿಸಲಾಗಿದೆ.

ಪೊಲೀಸರು ಸಂಗ್ರಹಿಸಿದ ಮಾಹಿತಿ ಪ್ರಕಾರ, ನಾಪತ್ತೆಯಾದ ಮಕ್ಕಳು ಮೊದಲಿಗೆ ಮೈಸೂರಿನಿಂದ ಹಾಸನಕ್ಕೆ ಪ್ರಯಾಣಿಸಿದ್ದು, ಅಲ್ಲಿಂದ ಸುಬ್ರಮಣ್ಯಕ್ಕೆ ಬಸ್ ಹತ್ತಿದ್ದಾರೆ ಎಂಬ ಪ್ರಾಥಮಿಕ ಮಾಹಿತಿ ಲಭ್ಯವಾಗಿದೆ. ಈ ಕುರಿತಂತೆ ಪೊಲೀಸರು ಸುಬ್ರಮಣ್ಯಕ್ಕೆ ಕೂಡಲೇ ತಂಡವನ್ನು ಕಳಿಸಿ ಹುಡುಕಾಟ ಮುಂದುವರೆಸಿದ್ದಾರೆ.