ಮೈಸೂರು(Mysuru): ಮೈಸೂರು ವಿಶ್ವವಿದ್ಯಾಲಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಅತಿಥಿ ಉಪನ್ಯಾಸಕರ ಸಂಭಾವನೆ ಪರಿಷ್ಕರಿಸಲು ಮೈಸೂರು ವಿವಿ ಸಿಂಡಿಕೇಟ್ ಸಭೆ ಅನುಮೋದನೆ ನೀಡಿದ್ದು, ಅಕ್ಟೋಬರ್ ನಿಂದ ಈ ಪರಿಷ್ಕೃತ ವೇತನ ದೊರೆಯಲಿದೆ.
ಮೈಸೂರು ವಿವಿ ಕಾಫರ್ಡ್ ಭವನದಲ್ಲಿ ಆಗಸ್ಟ್ 22ರಂದು ಕುಲಪತಿ ಪ್ರೊ. ಹೇಮಂತ್ ಕುಮಾರ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಿಂಡಿಕೇಟ್ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದ್ದು, ಮೈಸೂರು ವಿವಿ ವ್ಯಾಪ್ತಿಯ ಅಧ್ಯಯನ ವಿಭಾಗ, ಕೇಂದ್ರ, ಘಟಕ ಕಾಲೇಜುಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅತಿಥಿ ಉಪನ್ಯಾಸಕರ ಸಂಭಾವನೆ ಹೆಚ್ಚಳವಾಗಲಿದೆ.
ಯುಜಿಸಿ ನಿಯಮದ ಪ್ರಕಾರ ಅತಿಥಿ ಉಪನ್ಯಾಸಕರುಗಳಿಗೆ ಒಂದು ಗಂಟೆಗೆ 1500, ತಿಂಗಳಿಗೆ ಗರಿಷ್ಠ 50,000 ರೂ. ವೇತನ ನಿಗದಿಪಡಿಸಿರುತ್ತದೆ. ಈ ನಿಯಮದನ್ವಯ ವೇತನ ನೀಡುವಂತೆ ಮೈಸೂರು ವಿವಿ ವ್ಯಾಪ್ತಿಯಲ್ಲಿ ಕೆಲಸ ಮಾಡುತ್ತಿರುವ 861 ಅತಿಥಿ ಉಪನ್ಯಾಸಕರು ಮನವಿ ಮಾಡಿದ್ದರು. ಏ. 20ರಂದು ನಡೆದ ಸಿಂಡಿಕೇಟ್ ಸಭೆಯಲ್ಲಿ ಕುಲಪತಿಗಳ ಅಧ್ಯಕ್ಷತೆಯಲ್ಲಿ ಪರಿಷ್ಕೃತ ವೇತನ ಸಮಿತಿಯನ್ನು ರಚಿಸಲು ತೀರ್ಮಾನಿಸಲಾಯಿತು.
ರಚನೆಯಾದ ಸಮಿತಿಯು ಆಗಸ್ಟ್ 16ರಂದು ಸಭೆ ನಡೆಸಿ ಅಕ್ಟೋಬರ್ ನಿಂದಲೇ ಪರಿಷ್ಕೃತ ವೇತನ ಜಾರಿಗೊಳಿಸುವಂತೆ ಶಿಫಾರಸ್ಸು ಮಾಡಿತ್ತು. ಆಗಸ್ಟ್. 22ರಂದು ಕುಲಪತಿಗಳ ಸಮ್ಮುಖದಲ್ಲಿ ನಡೆದ ಸಿಂಡಿಕೇಟ್ ಸಭೆಯಲ್ಲಿ ಈ ಶಿಫಾರಸ್ಸಿಗೆ ಅನುಮೋದನೆ ಪಡೆಯಲಾಯಿತು.
ಅಂತೆಯೆ 861 ಅತಿಥಿ ಉಪನ್ಯಾಸಕರಲ್ಲಿ 773 ಉಪನ್ಯಾಸಕರಿಗೆ ಅಕ್ಟೋಬರ್ ನಿಂದಲೇ ಪರಿಷ್ಕೃತ ವೇತನ ದೊರೆಯುತ್ತಿದೆ. ಇನ್ನುಳಿದ 88 ಅತಿಥಿ ಉಪನ್ಯಾಸಕರು ಸೇವೆ ಕಾಯಂಗೊಳಿಸುವಂತೆ ನ್ಯಾಯಾಲಯದ ಮೆಟ್ಟಿಲು ಏರಿರುವುದರಿಂದ ಸರಕಾರದ ಅನುಮತಿ ಪಡೆದು ಅವರಿಗೂ ಇದೇ ನಿಯಮಾನುಸಾರ ಪರಿಷ್ಕೃತ ವೇತನ ನೀಡಲಾಗುತ್ತದೆ.