ಮೈಸೂರು(Mysuru): ಮೈಸೂರು ಮಹಾನಗರಪಾಲಿಕೆ ಹಾಗೂ ಅಮೆರಿಕದ ಸಿನ್ಸಿನ್ನಾಟಿ ನಗರದ ದಿ ಇಂಡಿಯಾ (ಮೈಸೂರು) ಸಿಸ್ಟರ್ ಸಿಟಿ ಅಸೋಸಿಯೇಷನ್‌ನೊಂದಿಗೆ ಸಾಂಸ್ಕೃತಿಕ ವಿನಿಮಯ ಕಾರ್ಯಕ್ರಮಗಳನ್ನು ಮುಂದುವರಿಸಲು ನಿರ್ಧರಿಸಲಾಯಿತು.
ಈ ವಿಷಯವಾಗಿ ಮೇಯರ್ ಶಿವಕುಮಾರ್ ಅಧ್ಯಕ್ಷತೆಯಲ್ಲಿ ಶುಕ್ರವಾರ ನಡೆದ ಸಭೆಯಲ್ಲಿ ಚರ್ಚಿಸಲಾಯಿತು.
ಮೂಲತಃ ಕೊಡಗಿನವರಾದ ದಿ ಇಂಡಿಯಾ (ಮೈಸೂರು) ಸಿಸ್ಟರ್ ಸಿಟಿ ಅಸೋಸಿಯೇಷನ್‌ನ ಸಂಸ್ಥಾಪಕ ಅಧ್ಯಕ್ಷೆ ಡಾ.ರತಿ ಅಪ್ಪಣ್ಣ ಮಾತನಾಡಿ, ಸಂಘವು ವಿವಿಧ ನಗರಗಳೊಂದಿಗೆ ಸಂಬಂಧ ಹೊಂದಿದೆ. ಸಾಂಸ್ಕೃತಿಕ, ಶೈಕ್ಷಣಿಕ, ಕಾನೂನು ಹಾಗೂ ಕ್ರೀಡಾ ವಿನಿಮಯ ಚಟುವಟಿಕೆಗಳಲ್ಲೂ ತೊಡಗಿದೆ. ಇದನ್ನು ಮೈಸೂರಿಗೂ ವಿಸ್ತರಿಸಲಾಗಿದೆ. ಜೆಎಸ್ಎಸ್ ಸಂಸ್ಥೆಯೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಮೈಸೂರು ಪಾಲಿಕೆಯೂ ಸಹಯೋಗ ಪಡೆದುಕೊಳ್ಳಬಹುದಾಗಿದೆ ಎಂದು ಹೇಳಿದರು.
ಮೇಯರ್ ಶಿವಕುಮಾರ್ ಮಾತನಾಡಿ, ಸಿಸ್ಟರ್ ಸಿಟಿ ಸಂಘದೊಂದಿಗೆ 2013ರಲ್ಲಿ ಒಪ್ಪಂದ ಮಾಡಿಕೊಳ್ಳಲಾಗಿತ್ತು. ಅದು ಕಾರಣಾಂತರದಿಂದಾಗಿ ಮುಂದುವರಿದಿರಲಿಲ್ಲ. ಇದೀಗ, ಎರಡೂ ನಗರಗಳ ಬಾಂಧವ್ಯ ಬೆಸೆಯಲು ಆಸಕ್ತಿ ವಹಿಸಲಾಗಿದೆ. ನಮ್ಮ ಆಚಾರ–ವಿಚಾರ, ಸಾಂಸ್ಕೃತಿಕ ಚಟುವಟಿಕೆಗಳ ವಿನಿಮಯಕ್ಕೆ ಅವಕಾಶವಿದೆ. ನಾವೂ ಅಲ್ಲಿಗೆ ಭೇಟಿ ನೀಡಿ ಅಲ್ಲಿನ ವಿಚಾರಗಳನ್ನು ತಿಳಿದುಕೊಳ್ಳುತ್ತೇವೆ ಎಂದು ತಿಳಿಸಿದರು.
ವಾಯುಮಾಲಿನ್ಯದ ವಿಷಯದಲ್ಲಿ ಮೈಸೂರನ್ನು ದೆಹಲಿ ಹಾಗೂ ಬೆಂಗಳೂರು ನಗರದಂತೆ ಆಗದಂತೆ ನೋಡಿಕೊಳ್ಳಬೇಕಾಗಿದೆ. ಈ ನಿಟ್ಟಿನಲ್ಲಿ ತಾಂತ್ರಿಕ ಸಹಯೋಗವನ್ನೂ ಪಡೆಯಬಹುದಾಗಿದೆ. ಇದಕ್ಕೆ ಪೂರಕವಾಗಿ ಕೆಲಸ ಮಾಡೋಣ ಎಂದರು.
ವಿಧಾನಪರಿಷತ್ ಸದಸ್ಯ ಎ.ಎಚ್.ವಿಶ್ವನಾಥ್ ಮಾತನಾಡಿ, ಸಿನ್ಸಿನ್ನಾಟಿಯಲ್ಲಿರುವ ಸಿಸ್ಟರ್ ಸಿಸ್ಟರ್ ಅಸೋಸಿಯೇಷನ್‌ನ ಉದ್ಯಾನದಲ್ಲಿರುವಂತೆ ಮೈಸೂರಲ್ಲೂ ಸಿಸ್ಟರ್ ಸಿಟಿ ಪಾರ್ಕ್ ಮಾಡಬೇಕು. ಅಲ್ಲಿ ಸಂಬಂಧಿಸಿದ ದೇಶದ ಬಾವುಟಗಳನ್ನು ಹಾರಿಸಬೇಕು. ಇದರಿಂದ ಬಾಂಧವ್ಯ ವೃದ್ಧಿಯಾಗುತ್ತದೆ ಎಂದು ಸಲಹೆ ನೀಡಿದರು.
ಕಾರ್ಯನಿರ್ವಾಹಕ ಎಂಜಿನಿಯರ್ ರಂಜಿತ್‌ಕುಮಾರ್ ಮಾತನಾಡಿ, ಬೆಂಗಳೂರು–ಮೈಸೂರು ದಶಪಥ ಸಿದ್ಧಗೊಂಡರೆ ಮೈಸೂರಿಗೆ ವಾಹನಗಳ ಸಂಚಾರ ಹೆಚ್ಚಲಿದೆ. ಇದರಿಂದ ವಾಯುಮಾಲಿನ್ಯವೂ ಹೆಚ್ಚಾಗಬಹುದು. ಅದಕ್ಕೆ ಅವಕಾಶವಾಗದಂತೆ ನೋಡಿಕೊಳ್ಳಲು ತಾಂತ್ರಿಕ ಸಹಕಾರವನ್ನು ಸಿಸ್ಟರ್ ಸಿಟಿ ಅಸೋಸಿಯೇಷನ್‌ನವರು ನೀಡಿದರೆ ಅನುಕೂಲವಾಗುತ್ತದೆ ಎಂದರು.
ಉಪ ಮೇಯರ್ ಡಾ.ಜಿ.ರೂಪಾ ಯೋಗೇಶ್, ಆರೋಗ್ಯಾಧಿಕಾರಿ ಡಾ.ನಾಗರಾಜ್ ಇದ್ದರು.