ಮೈಸೂರು: ಚಿನ್ನ ಕದ್ದು ಗಿರವಿಯಿಟ್ಟು ಅದ್ಧೂರಿಯಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದ ಯುವಕನನ್ನು ಬರ್ಬರವಾಗಿ ಹತ್ಯೆ ಮಾಡಿ, ನಂತರ ಶವವನ್ನು ಸುಟ್ಟಿರುವ ದಾರುಣ ಘಟನೆ ಮೈಸೂರಿನಲ್ಲಿ ನಡೆದಿದೆ.
ಮೃತ ಯುವಕನನ್ನು ಚಾಮರಾಜನಗರ ಜಿಲ್ಲೆಯ ಬ್ಯಾಡರಪುರದ ಮೋಹನ್ ಕುಮಾರ್ (31) ಎಂದು ಗುರುತಿಸಲಾಗಿದೆ. ಅವರು ಮೈಸೂರಿನ ಬೋಗಾದಿ ಬಳಿ ಇರುವ ಲಾಡ್ಜ್ನಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದರು. ಅದೇ ಲಾಡ್ಜ್ಗೆ ನಿಯಮಿತವಾಗಿ ಬರುತ್ತಿದ್ದ ಶ್ರೀನಿವಾಸ್ ಎಂಬಾತ ಇಸ್ಪೀಟ್ ಆಟದ ಚಟಕ್ಕೆ ಬಳಲಿದ್ದ. ಅವನು ಜೂಜಿನಲ್ಲಿ ಹಣ ಕಳೆದುಕೊಂಡು, ತನ್ನ ಪತ್ನಿಯ 60 ಗ್ರಾಂ ಚಿನ್ನದ ಸರವನ್ನು ತಂದಿದ್ದ. ಆದರೆ ಹುಣ್ಣಿಮೆಯ ದಿನದ ಕಾರಣ, ಅಂಗಡಿಯಲ್ಲಿ ಚಿನ್ನವನ್ನು ಗಿರವಿಗೆ ಹಾಕಲಾಗಲಿಲ್ಲ. ಈ ಹಿನ್ನೆಲೆಯಲ್ಲಿ ಶ್ರೀನಿವಾಸ್ ಚಿನ್ನದ ಸರವನ್ನು ಲಾಡ್ಜ್ನ ರೂಂನಲ್ಲಿ ಹಾಸಿಗೆ ದಿಂಬಿನ ಕೆಳಗೆ ಇಟ್ಟುಬಿಟ್ಟಿದ್ದ.
ಅದೇ ಸಮಯದಲ್ಲಿ ಮೋಹನ್ ಕುಮಾರ್ ಅದನ್ನು ಕಳವು ಮಾಡಿ, ತನ್ನ ಊರಾದ ಬ್ಯಾಡರಪುರಕ್ಕೆ ಹಿಂತಿರುಗಿ ಚಿನ್ನವನ್ನು ಗಿರವಿಗೆ ಹಾಕಿ ಅದ್ಧೂರಿಯಾಗಿ ನಿಶ್ಚಿತಾರ್ಥ ನೆರವೇರಿಸಿದ್ದರು. ಈ ಬಗ್ಗೆ ಮೊದಲು ಸರಸ್ವತೀಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆದರೆ ವಿಷಯ ತಿಳಿದ ಶ್ರೀನಿವಾಸ್ ತಕ್ಷಣವೇ ತನ್ನ ಗೆಳೆಯರೊಂದಿಗೆ ಪ್ಲಾನ್ ರೂಪಿಸಿ, ಮೋಹನ್ ಕುಮಾರ್ ನನ್ನು ಮನೆ ಇಂದ ಕರೆಸಿ ಕಾರಿನಲ್ಲಿ ಕರೆದುಕೊಂಡು ಹೋಗಿ ಮಾರಕವಾಗಿ ಹಲ್ಲೆ ನಡೆಸಿ ಕೊಂದಿದ್ದಾರೆ.
ಹತ್ಯೆ ಮಾಡಿದ ಬಳಿಕ ಆರೋಪಿಗಳು ಶವವನ್ನು ಮೈಸೂರು ತಾಲ್ಲೂಕಿನ ಗುಮಚನಹಳ್ಳಿ ಬಳಿಯ ನಿರ್ಜನ ಪ್ರದೇಶಕ್ಕೆ ಕೊಂಡೊಯ್ದು ಅಲ್ಲಿ ಶವವನ್ನು ಸುಟ್ಟು ಸಾಕ್ಷ್ಯ ನಾಶ ಮಾಡಲು ಯತ್ನಿಸಿದ್ದರು. ಈ ಪ್ರಕರಣವನ್ನು ಜಯಪುರ ಪೊಲೀಸ್ ಠಾಣೆಯು ಪ್ರಥಮವಾಗಿ ಅಪರಿಚಿತ ಶವ ಪ್ರಕರಣವಾಗಿ ದಾಖಲಿಸಿಕೊಂಡಿತ್ತು. ತನಿಖೆ ಮುಂದುವರೆದಂತೆ, ಕೊಲೆ ಹಿಂದಿನ ಬೃಹತ್ ನಾಟಕೀಯ ಕುತಂತ್ರಗಳು ಬಹಿರಂಗಗೊಂಡಿವೆ.
ಈ ಪ್ರಕರಣದಲ್ಲಿ ಈಗಾಗಲೇ ನಾಲ್ವರು ಆರೋಪಿಗಳಾದ ಪ್ರಜ್ವಲ್, ಚಂದು, ಕಬೀರ್ ಕಾಳಯ್ಯ ಮತ್ತು ದರ್ಶನ್ ಬಂಧನಕ್ಕೊಳಗಾಗಿದ್ದಾರೆ. ಆದರೆ ಪ್ರಮುಖ ಆರೋಪಿ ಶ್ರೀನಿವಾಸ್ ಮಾತ್ರ ಇನ್ನೂ ಪೋಲಿಸರ ಕೈಗೆ ಸಿಕ್ಕಿಲ್ಲ.














