ಮೈಸೂರು(Mysuru): ನವ ಮೈಸೂರಿನ ಹರಿಕಾರ ರಾಜರ್ಷಿ ಬಿರುದಾಂಕಿತ ನಾಲ್ವಡಿ ಕೃಷ್ಣರಾಜ ಒಡೆಯರ್ ಜಯಂತಿಯನ್ನು ಇಂದು ನಗರದೆಲ್ಲೆಡೆ ಆಚರಿಸಲಾಯಿತು.
ಕೆ.ಆರ್.ವೃತ್ತದ ನಾಲ್ವಡಿ ಪ್ರತಿಮೆಗೆ ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ಮಾಲಾರ್ಪಣೆ ಮಾಡಿದರು. ಈ ಸಂದರ್ಭ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಎಚ್. ಚೆನ್ನಪ್ಪ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ.ಆರ್.ಪೂರ್ಣಿಮಾ ಇದ್ದರು.
ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಪ್ರತಿಮೆಗೆ ಪುಷ್ಪನಮನ ಸಲ್ಲಿಸಿ ಮಾತನಾಡಿ, ರಾಜ್ಯದ ಪ್ರತಿಯೊಬ್ಬರು ನೆನೆಸಿಕೊಳ್ಳಬಹುದಾದ ವ್ಯಕ್ತಿತ್ವ ನಾಲ್ವಡಿಯವರದ್ದಾಗಿದೆ. ಎಲ್ಲ ಕ್ಷೇತ್ರದಲ್ಲೂ ನಾಡನ್ನು ಅಭಿವೃದ್ಧಿಯತ್ತ ಕೊಂಡೊಯ್ದರು. ಶೈಕ್ಷಣಿಕ, ಸಾಮಾಜಿಕ, ಆರ್ಥಿಕ ಸುಧಾರಣಾ ಕ್ರಮಗಳಿಂದಲೇ ದೇಶದ ಮಾದರಿ ರಾಜ್ಯವನ್ನಾಗಿಸಿತು ಎಂದರು.
ಸಂಸದ ಪ್ರತಾಪ ಸಿಂಹ, ಶಾಸಕರಾದ ತನ್ವೀರ್ ಸೇಠ್, ರಾಮದಾಸ್, ಎಲ್.ನಾಗೇಂದ್ರ, ಮೇಯರ್ ಸುನಂದಾ ಫಾಲನೇತ್ರ, ನಗರ ಬಿಜೆಪಿ ಅಧ್ಯಕ್ಷ ಟಿ.ಎಸ್.ಶ್ರೀವತ್ಸ, ಮುಡಾ ಅಧ್ಯಕ್ಷ ಎಚ್.ವಿ.ರಾಜೀವ್ ಇದ್ದರು.
ಅರಸು ಮಂಡಳಿ: ಅಗ್ರಹಾರದಲ್ಲಿರುವ ಅರಸು ಮಂಡಳಿಯಲ್ಲಿ ಆಯೋಜಿಸಿದ್ದ ನಡೆದ ಕಾರ್ಯಕ್ರಮದಲ್ಲಿ ಶಾಸಕ ರಾಮದಾಸ್ ಮಾತನಾಡಿ, ‘ನಾಡನ್ನು ಕಟ್ಟಿದ ಮಹನೀಯರಲ್ಲಿ ನಾಲ್ವಡಿ ಅಗ್ರಗಣ್ಯರು. ದೂರದೃಷ್ಟಿಯ,ಮಾನವೀಯ ಕಾರ್ಯಗಳು ಜನರ ಸ್ಮೃತಿಯಲ್ಲಿದೆ’ ಎಂದರು.
‘ಮೀಸಲಾತಿ ಜಾರಿಗೆ ತಂದು ಎಲ್ಲ ಸಮುದಾಯಗಳು ಅಭಿವೃದ್ಧಿಗೊಳ್ಳಲು ಕಾರಣರಾದರು. ಅವರ ಆದರ್ಶವನ್ನು ಎಲ್ಲರೂ ಪಾಲಿಸಬೇಕು’ ಎಂದು ಸಲಹೆ ನೀಡಿದರು.
‘ಮಂಡಕಳ್ಳಿ ವಿಮಾನ ನಿಲ್ದಾಣಕ್ಕೆ ನಾಲ್ವಡಿ ಹೆಸರನ್ನು ಇಡಬೇಕೆಂಬ ಬೇಡಿಕೆಯು ಪ್ರಧಾನಿ ಮೋದಿ ಅವರನ್ನೂ ತಲುಪಿಸಿದೆ. ಜೂನ್ 21ರಂದು ನಡೆಯುವ ಯೋಗ ದಿನಾಚರಣೆಗೆ ಮೈಸೂರಿಗೆ ಆಗಮಿಸಲಿದ್ದು, ಅಂದೇ ಘೋಷಣೆಯಾಗುವ ಸಾಧ್ಯತೆಯಿದೆ ಎಂದು ತಿಳಿಸಿದರು.
ಸಾರ್ವತ್ರಿಕ ರಜೆ ಘೋಷಿಸಿ: ನಾಲ್ವಡಿಯ ಜನ್ಮ ದಿನವನ್ನು ಸಾರ್ವತ್ರಿಕ ರಜೆಯೆಂದು ಸರ್ಕಾರ ಘೋಷಿಸಬೇಕು. ಸರ್ಕಾರವೇ ರಾಜ್ಯದಾದ್ಯಂತ ಜಯಂತಿ ಆಚರಿಸಬೇಕು. ಎಲ್ಲರೂ ಮನವಿ ಸಲ್ಲಿಸಬೇಕಿದೆ’ ಎಂದು ವಿಧಾನಪರಿಷತ್ ಸದಸ್ಯ ಡಾ.ಡಿ.ತಿಮ್ಮಯ್ಯ ಹೇಳಿದರು.
ನಾಲ್ವಡಿ ಭಾವಚಿತ್ರ ಮೆರವಣಿಗೆ: ನಾಲ್ವಡಿ ಭಾವಚಿತ್ರವನ್ನು ಹೊತ್ತ ರಥವು ಅಗ್ರಹಾರದಿಂದ ಕೆ.ಆರ್.ವೃತ್ತದವರೆಗೂ ಸಂಚರಿಸಿತು. ನಾಗರಿಕರು ಮೆರವಣಿಗೆಯಲ್ಲಿ ಪಾಲ್ಗೊಂಡರು. ವಿವಿಧ ಕಲಾತಂಡಗಳು ಮೆರಗು ನೀಡಿದವು.
ಮೈಸೂರು ವಿಶ್ವವಿದ್ಯಾಲಯ: ಮಾನಸ ಗಂಗೋತ್ರಿಯ ಇತಿಹಾಸ ವಿಭಾಗವು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ‘ರಾಜಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಸಾಮಾಜಿಕ ಅಭಿವೃದ್ಧಿ ಅಧ್ಯಯನ ಕೇಂದ್ರ’ದ ಸದಸ್ಯ ಡಾ.ಎಸ್.ನರೇಂದ್ರ ಕುಮಾರ್ ಮಾತನಾಡಿ, ಸ್ವಾತಂತ್ರ್ಯ ಪೂರ್ವದಲ್ಲಿ ಪ್ರಜಾಪ್ರಭುತ್ವದ ಮಾದರಿಯನ್ನು ಸಂಸ್ಥಾನದಲ್ಲಿ ಯಶಸ್ವಿಯಾಗಿ ಜಾರಿಗೊಳಿಸಿದರು. ಎಲ್ಲ ವರ್ಗಗಳ ಅಭ್ಯುದಯಕ್ಕೆ ಶೈಕ್ಷಣಿಕ ಕ್ರಾಂತಿ ನಡೆಸಿದರು ಎಂದರು.
ಹಿಂದುಳಿದ ವರ್ಗ ಮಾತ್ರವಲ್ಲದೆ, ದಲಿತ, ಶೋಷಿತರು, ಅಲ್ಪಸಂಖ್ಯಾತರೂ ಶಾಲೆಗಳಲ್ಲಿ ಪ್ರವೇಶ ಪಡೆಯುವುದಕ್ಕೆ ಉತ್ತೇಜಿಸಿದರು. ದತ್ತಿ ನಿಧಿ, ವಿದ್ಯಾನಿಧಿಗಳನ್ನು ಸ್ಥಾಪಿಸಿ ಪ್ರೋತ್ಸಾಹಿಸಿದರು. ಶೈಕ್ಷಣಿಕ ಕ್ರಾಂತಿಯು ಸಾಮಾಜಿಕ, ಆರ್ಥಿಕ ಕ್ರಾಂತಿಗೆ ದಾರಿ ಮಾಡಿಕೊಟ್ಟಿತು ಎಂದು ಹೇಳಿದರು.
ವಿಭಾಗದ ಮುಖ್ಯಸ್ಥ ಡಾ.ಕೆ.ಸದಾಶಿವ, ಪ್ರೊ.ವೈ.ಎಚ್.ನಾಯಕವಾಡಿ ಇದ್ದರು.