ಮನೆ ರಾಜ್ಯ ಜಿ-20 ಸಭೆಯ ನಾಮಫಲಕದಲ್ಲಿ ಇಂಡಿಯಾ ಬದಲು ಭಾರತ ಹೆಸರು ಪ್ರದರ್ಶನ

ಜಿ-20 ಸಭೆಯ ನಾಮಫಲಕದಲ್ಲಿ ಇಂಡಿಯಾ ಬದಲು ಭಾರತ ಹೆಸರು ಪ್ರದರ್ಶನ

0

ನವದೆಹಲಿ: ದೇಶದ ಹೆಸರನ್ನು ಇಂಡಿಯಾದಿಂದ ಭಾರತ ಎಂದು ಬದಲಿಸುವ ಚರ್ಚೆ ಮತ್ತೆ ಮುನ್ನಲೆ ಬಂದಿದ್ದು, ಇದರ ಬೆನ್ನಲ್ಲೇ ಜಿ-20 ಶೃಂಗಸಭೆಯ ನಾಮಫಲಕದಲ್ಲೂ ಭಾರತ ಎಂದು ಬರೆದಿರುವುದು ಚರ್ಚೆಗೆ ಕಾರಣವಾಗಿದೆ.

ಪ್ರಧಾನಿ ಮೋದಿ ಅವರು ಜಿ20 ಸಭೆಯನ್ನು ಉದ್ದೇಶಿಸಿ ಮಾತನಾಡುವ ವೇಳೆ ಅವರ ಮುಂದಿದ್ದ ದೇಶದ ನಾಮಫಲಕದಲ್ಲಿ ಇಂಡಿಯಾ ಬದಲು ಭಾರತ ಎಂದು ಬರೆಯಲಾಗಿದೆ. ಇದುವರೆಗೂ ಇಂಡಿಯಾ ಎಂದು ಬರೆಯಲಾಗುತ್ತಿತ್ತು. ಆದರೆ, ಭಾರತ ಎಂಬ ಹೆಸರನ್ನು ಮುಂಚೂಣಿಗೆ ತರಲಾಗುತ್ತಿದ್ದು, ಶೀಘ್ರದಲ್ಲೇ ಇಂಡಿಯಾ ಹೆಸರು ಭಾರತ ಎಂದು ಅಧಿಕೃತಗೊಳ್ಳಲಿದೆ.

ಜಿ-20 ದೇಶದ ನಾಯಕರುಗಳಿಗೆ ಪ್ರೆಸಿಡೆಂಟ್​ ಆಫ್​ ಇಂಡಿಯಾ ಎಂಬ ಹೆಸರಿನ ಬದಲು ಪ್ರೆಸಿಡೆಂಟ್​ ಆಫ್​ ಭಾರತ್ ಹೆಸರಿನಲ್ಲಿ ಕೆಲ ದಿನಗಳ ಹಿಂದೆ ರಾಷ್ಟ್ರಪತಿ ಭವನ ಆಹ್ವಾನ ಪತ್ರಿಕೆಯನ್ನು ಕಳುಹಿಸಿತ್ತು. ಇದರ ಬೆನ್ನಲ್ಲೇ ದೇಶದ ಹೆಸರು ಬದಲಾವಣೆಯ ಚರ್ಚೆ ಆರಂಭವಾಯಿತು. ಈ ಹಿಂದೆ ಯುಪಿಎ ಅಂತಿದ್ದ ವಿಪಕ್ಷಗಳ ಮೈತ್ರಿಕೂಟದ ಹೆಸರನ್ನು ಇಂಡಿಯಾ ಎಂದು ಮರುನಾಮಕರಣ ಮಾಡಿರುವ ಬೆನ್ನಲ್ಲೇ ಕೇಂದ್ರ ಸರ್ಕಾರ, ಭಾರತದ ಹೆಸರನ್ನು ಬದಲಾಯಿಸಲು ಮುಂದಾಗಿದೆ. ಅದಕ್ಕೆ ಪುಷ್ಠಿ ನೀಡುವಂತಹ ಕೆಲವು ಬೆಳವಣಿಗೆಗಳು ಸಹ ಇದೀಗ ನಡೆಯುತ್ತಿವೆ.

ವಿಶೇಷ ಅಧಿವೇಶನದಲ್ಲಿ ಪ್ರಸ್ತಾವ ಸ್ವೀಕಾರ ಸಾಧ್ಯತೆ

ಸೆ.18ರಿಂದ 5 ದಿನ ನಡೆಯಲಿರುವ ಸಂಸತ್ತಿನ ವಿಶೇಷ ಅಧಿವೇಶನದಲ್ಲಿ ರಿಪಬ್ಲಿಕ್​ ಆಫ್​ ಭಾರತ್​ ಎಂಬ ಪ್ರಸ್ತಾವ ಸ್ವೀಕಾರ ಸಾಧ್ಯತೆ ಇದೆ. ದಿ ಪ್ರೆಸಿಡೆಂಟ್ ಆಫ್ ಭಾರತ್ ಎಂದು ಆಹ್ವಾನ ಪತ್ರಿಕೆ ಮುದ್ರಣವಾಗಿರುವುದು ಇದಕ್ಕೆ ಪುಷ್ಠಿ ನೀಡಿದೆ. ಈ ಹೊಸ ಚರ್ಚೆಯ ಬಗ್ಗೆ ಈಗಾಗಲೇ ವಿಪಕ್ಷಗಳು ಆಕ್ಷೇಪ ವ್ಯಕ್ತಪಡಿಸಿವೆ. ಆದರೆ, ದೇಶದ ಹೆಸರನ್ನು ‘ಇಂಡಿಯಾ’ ಬದಲು ಭಾರತ ಎನ್ನಲು ಬಿಜೆಪಿ ಸೇರಿದಂತೆ ಹಲವು ಪಕ್ಷಗಳ ಮುಖಂಡರು ಬೇಡಿಕೆ ಇಟ್ಟಿದ್ದಾರೆ.

ಇದೇ ಮೊದಲ ಬಾರಿಗೆ ಭಾರತದಲ್ಲಿ ನಡೆಯುತ್ತಿರುವ ಜಿ-20 ಶೃಂಗಸಭೆಯು ಭಾರತದ ಪಾಲಿಗೆ ಪ್ರತಿಷ್ಠಿತ ಕಾರ್ಯಕ್ರಮವಾಗಿದೆ. ಅಮೆರಿಕ ಅಧ್ಯಕ್ಷ ಜೋ ಬೈಡೆನ್​, ಬ್ರಿಟನ್​ ಪ್ರಧಾನಿ ರಿಷಿ ಸುನಕ್​, ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸಿನಾ, ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರೋನ್, ಜಪಾನ್, ಜರ್ಮನಿ, ಇಟಲಿ, ಕೊಮೊರೊಸ್, ಟರ್ಕಿ, ಯುಎಇ, ದಕ್ಷಿಣ ಕೊರಿಯಾ, ಐರೋಪ್ಯ ಒಕ್ಕೂಟ, ಬ್ರೆಜಿಲ್ ಮತ್ತು ನೈಜೀರಿಯಾ ಸೇರಿದಂತೆ ವಿಶ್ವದ ನಾಯಕರು ಪ್ರಧಾನಿ ಮೋದಿ ಅವರೊಂದಿಗೆ ವೇದಿಕೆ ಹಂಚಿಕೊಂಡಿದ್ದಾರೆ. ಎಲ್ಲ ಗಣ್ಯರಿಗೆ ಸ್ವತಃ ಪ್ರಧಾನಿ ಮೋದಿ ಅವರು ಕೆಂಪು ಹಾಸಿನ ಸ್ವಾಗತ ಕೋರಿದರು.

ಹಿಂದಿನ ಲೇಖನಮಂಗಳೂರು: ಡಾ.ಶಂಸುಲ್ ಇಸ್ಲಾಂ ಉಪನ್ಯಾಸ ಕಾರ್ಯಕ್ರಮ ವಿರೋಧಿಸಿ ಎಬಿವಿಪಿ ಪ್ರತಿಭಟನೆ
ಮುಂದಿನ ಲೇಖನಜಿ 20 ಒಕ್ಕೂಟಕ್ಕೆ ಆಫ್ರಿಕನ್​ ಒಕ್ಕೂಟ ಸೇರ್ಪಡೆ: ಪ್ರಧಾನಿ ಮೋದಿ ಘೋಷಣೆ