ನವದೆಹಲಿ(New Delhi): ನ್ಯಾಷನಲ್ ಹೆರಾಲ್ಡ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ಸೋಮವಾರ ಜಾರಿ ನಿರ್ದೇಶನಾಲಯದ ಕಚೇರಿ ತಲುಪಿದ್ದು, ವಿಚಾರಣೆ ಆರಂಭವಾಗಿದೆ.
ಪ್ರಕರಣ ಸಂಬಂಧ ಜಾರಿ ನಿರ್ದೇಶನಾಲಯ ರಾಹುಲ್ ಗಾಂಧಿಯವರಿಗೆ ಸಮನ್ಸ್ ಜಾರಿ ಮಾಡಿದ್ದನ್ನು ವಿರೋಧಿಸಿ, ಕಾಂಗ್ರೆಸ್ ಪಾದಯಾತ್ರೆಯನ್ನು ಆರಂಭಿಸಿದ್ದು, ಆರಂಭದಲ್ಲಿ ಕಾರ್ಯಕರ್ತರ ಜೊತೆಗೆಯೇ ಪಾದಯಾತ್ರೆ ಮೂಲಕ ರಾಹುಲ್ ಗಾಂಧಿ ಜಾರಿ ನಿರ್ದೇಶನಾಲಯ ಕಚೇರಿ ತಲುಪಲು ಮುಂದಾಗಿದ್ದರು.
ಇದರಂತೆ 1 ಕಿಮೀ ವರೆಗೂ ಪಾದಯಾತ್ರೆ ನಡೆಸಿದ ಸಂದರ್ಭದಲ್ಲಿ ಸ್ಥಳಕ್ಕೆ ಸಾಕಷ್ಟು ಕಾರ್ಯಕರ್ತರು ಸೇರಿದ್ದರು. ಪರಿಣಾಮ ಸ್ಥಳದಲ್ಲಿ ಭಾರೀ ಸಂಚಾರ ದಟ್ಟಣೆ ಎದುರಾಗಿತ್ತು. ಈ ಹಿನ್ನೆಲೆಯಲ್ಲಿ ಪೊಲೀಸರು ಕಾರಿನಲ್ಲಿ ಸಂಚರಿಸುವಂತೆ ಮಾಡಿಕೊಂಡಿದ್ದಾರೆ. ಬಳಿಕ ಕಾಲ್ನಡಿಗೆ ಬಿಟ್ಟ ರಾಹುಲ್ ಅವರು ಕಾರಿನ ಮೂಲಕ ಇಡಿ ಕಚೇರಿ ತಲುಪಿದ್ದಾರೆಂದು ತಿಳಿದುಬಂದಿದೆ.
ನ್ಯಾಷನಲ್ ಹೆರಾಲ್ಡ್ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ಇಡಿ) ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಈ ಮೊದಲು ಜೂ. 8ರಂದು ಹಾಗೂ ಅವರ ಪುತ್ರ ಸಂಸದ ರಾಹುಲ್ ಗಾಂಧಿಗೆ ಜೂ. 13ರಂದು ಫೆಡರಲ್ ಏಜೆನ್ಸಿಯ ಎದುರು ವಿಚಾರಣೆಗೆ ಬರುವಂತೆ ಸಮನ್ಸ್ ನೀಡಿತ್ತು.
ಇದಕ್ಕೆ ಕಾಂಗ್ರೆಸ್ ವಿರೋಧ ವ್ಯಕ್ತಪಡಿಸಿದ್ದು, ಕೇಂದ್ರ ಸರ್ಕಾರ ಜಾರಿ ನಿರ್ದೇಶನಾಲಯ, ಕೇಂದ್ರ ತನಿಖಾ ಸಂಸ್ಥೆ ಮತ್ತಿತರ ಸಂಸ್ಥೆಗಳನ್ನು ದುರುಪಯೋಗ ಮಾಡಿಕೊಳ್ಳುತ್ತಿದೆ ಎಂದು ಆರೋಪಿಸಿದೆ. ಅಲ್ಲದೆ, ಎಐಸಿಸಿ ಕಚೇರಿಯಿಂದ ಇಡಿ ಕಚೇರಿವರೆಗೆ ಪಾದಯಾತ್ರೆ ನಡೆಸುವುದಾಗಿ ತಿಳಿಸಿದೆ.