ಮನೆ ಕಾನೂನು ಸಬ್ಸಿಡಿ ದರದ ಸಮುದಾಯ ಅಡುಗೆ ಮನೆ ಸ್ಥಾಪನೆಗೆ ರಾಷ್ಟ್ರೀಯ ನೀತಿ: ನಿರ್ದೇಶನ ನೀಡಲು ಸುಪ್ರೀಂ ನಕಾರ

ಸಬ್ಸಿಡಿ ದರದ ಸಮುದಾಯ ಅಡುಗೆ ಮನೆ ಸ್ಥಾಪನೆಗೆ ರಾಷ್ಟ್ರೀಯ ನೀತಿ: ನಿರ್ದೇಶನ ನೀಡಲು ಸುಪ್ರೀಂ ನಕಾರ

0

ದೇಶದೆಲ್ಲೆಡೆ ಸಬ್ಸಿಡಿ ಕ್ಯಾಂಟೀನ್‌ ಅಥವಾ ಸಮುದಾಯ ಅಡುಗೆಮನೆ ಸ್ಥಾಪಿಸಲು ರಾಷ್ಟ್ರೀಯ ನೀತಿ ರೂಪಿಸುವಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಲು ಸುಪ್ರೀಂ ಕೋರ್ಟ್ ಗುರುವಾರ ನಿರಾಕರಿಸಿದೆ.

ಅಗತ್ಯವಿರುವವರಿಗೆ ಸಾಕಷ್ಟು ಪ್ರಮಾಣದ ಸಬ್ಸಿಡಿ ಆಹಾರ ಒದಗಿಸುವ ನಿಟ್ಟಿನಲ್ಲಿ ಈಗಾಗಲೇ ರಾಷ್ಟ್ರೀಯ ಆಹಾರ ಭದ್ರತಾ ಕಾಯಿದೆ ಮತ್ತಿತರ ಕಲ್ಯಾಣ ಯೋಜನೆಗಳು ಜಾರಿಯಲ್ಲಿವೆ ಎಂದು ನ್ಯಾಯಮೂರ್ತಿಗಳಾದ ಬೇಲಾ ಎಂ ತ್ರಿವೇದಿ ಮತ್ತು ಪಂಕಜ್ ಮಿತ್ತಲ್‌ ಅವರಿದ್ದ ಪೀಠ ಹೇಳಿದೆ.

“ಹೆಚ್ಚಿನ ನಿರ್ದೇಶನಗಳನ್ನು ನೀಡುವ ಅಗತ್ಯವಿಲ್ಲ ಎಂದು ನಾವು ಭಾವಿಸುತ್ತೇವೆ. ಸಮುದಾಯ ಅಡುಗೆಮನೆಗಳ ಅಗತ್ಯದ ಬಗ್ಗೆ ನಾವು ಏನನ್ನೂ ಹೇಳುವುದಿಲ್ಲ. ಕಲ್ಯಾಣ ಕಾಯಿದೆ ಮತ್ತು ಯೋಜನೆಗಳ ಜಾರಿ ಮಾಡುವುದನ್ನು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಮುಕ್ತವಾಗಿ ಬಿಡುತ್ತೇವೆ. ರಿಟ್ ಅರ್ಜಿಯನ್ನು ವಿಲೇವಾರಿ ಮಾಡಲಾಗಿದೆ” ಎಂದು ಪೀಠ ತಿಳಿಸಿದೆ.

ಕೋವಿಡ್ -19 ಸಾಂಕ್ರಾಮಿಕ ರೋಗದಿಂದ ಉಂಟಾದ ಹಾನಿಯ ಹಿನ್ನೆಲೆಯಲ್ಲಿ ಆಹಾರ ಭದ್ರತೆಗಾಗಿ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಸಬ್ಸಿಡಿ ಕ್ಯಾಂಟೀನ್‌ಗಳನ್ನು (ಅಥವಾ ಸಮುದಾಯ ಅಡುಗೆಮನೆಗಳು) ಸ್ಥಾಪಿಸಬೇಕು. ಈ ನಿಟ್ಟಿನಲ್ಲಿ ರಾಷ್ಟ್ರಮಟ್ಟದ ನೀತಿ ರೂಪಿಸಲು ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಬೇಕು ಎಂದು ಕೋರಿ ಅರ್ಜಿ ಸಲ್ಲಿಸಲಾಗಿತ್ತು.

ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಸಲ್ಲಿಸಿದ್ದ ಅಫಿಡವಿಟ್‌ ಬಗ್ಗೆ 2021ರ ನವೆಂಬರ್‌ನಲ್ಲಿ ಸುಪ್ರೀಂ ಕೋರ್ಟ್‌ ಅಸಮಾಧಾನ ವ್ಯಕ್ತಪಡಿಸಿತ್ತು.

ಸಮಗ್ರ ಯೋಜನೆಯ ಮೂಲಕ ಇಂತಹ ಅಡುಗೆಮನೆಗಳನ್ನು ಸ್ಥಾಪಿಸುವ ಜವಾಬ್ದಾರಿ ರಾಜ್ಯ ಸರ್ಕಾರಗಳಿಗೆ ಇದೆ ಎಂದು ಅಂದಿನ ಮುಖ್ಯ ನ್ಯಾಯಮೂರ್ತಿ ಎನ್ ವಿ ರಮಣ, ನ್ಯಾಯಮೂರ್ತಿಗಳಾದ ಎ ಎಸ್ ಬೋಪಣ್ಣ ಹಾಗೂ ಹಿಮಾ ಕೊಹ್ಲಿ ಅವರಿದ್ದ ಪೀಠ ಹೇಳಿತ್ತು.

“ನೀವು ಹಸಿವಿನ ಬಗ್ಗೆ ಕಾಳಜಿ ವಹಿಸಲು ಮತ್ತು ಜನರನ್ನು ಸಾಯದಂತೆ ಉಳಿಸಲು ಬಯಸುವುದಾದರೆ, ಯಾವುದೇ ಪ್ರಭುತ್ವ ಇಲ್ಲ ಎನ್ನುವುದಿಲ್ಲ. ಇದನ್ನು ಪರಿಶೀಲಿಸುವುದು ಪ್ರತಿಯೊಂದು ಕಲ್ಯಾಣ ರಾಜ್ಯದ ಜವಾಬ್ದಾರಿಯಾಗಿದೆ… ನಾವು ಜನರನ್ನು ಮೂಲೆಗುಂಪು ಮಾಡಲು ಸಾಧ್ಯವಿಲ್ಲ ಮತ್ತು ಎಲ್ಲವೂ ಸರಿಯಾಗಿದೆ ಎನ್ನಲಾಗದು” ಎಂದು ಪೀಠ ಆ ಸಮಯದಲ್ಲಿ ತಿಳಿಸಿತ್ತು.

ಹಿಂದಿನ ಲೇಖನಅಪ್ರಾಪ್ತೆಯ ಕತ್ತು ಕೊಯ್ದ ಯುವಕರು‌: ಆಸ್ಪತ್ರೆಗೆ ದಾಖಲು
ಮುಂದಿನ ಲೇಖನ ‘ಕುಟೀರ’ ಸಿನಿಮಾದಲ್ಲಿ ನಟ ಕೋಮಲ್, ಪ್ರಿಯಾಂಕಾ ತಿಮ್ಮೇಶ್‌ ನಟನೆ