ಮೈಸೂರು : ಗ್ರಾಮೀಣ ಶಿಕ್ಷಣ ಮತ್ತು ಆರೋಗ್ಯ ಸಂಸ್ಥೆ (ಆರ್.ಎಲ್.ಎಚ್.ಪಿ.), ಮೈಸೂರು ಹಾಗೂ ವಿದ್ಯಾ ವಿಕಾಸ ಬಿ.ಇಡಿ ಕಾಲೇಜು, ಮೈಸೂರು ಇವರ ಸಹಯೋಗದಲ್ಲಿ ದಿನಾಂಕ 30.1.2026 ರಂದು ರಾಷ್ಟ್ರೀಯ ಯುವ ದಿನಾಚರಣೆ ಕಾರ್ಯಕ್ರಮವನ್ನು ಯಶಸ್ವಿಯಾಗಿ ಆಯೋಜಿಸಲಾಯಿತು. ಕಾರ್ಯಕ್ರಮವನ್ನು ಗಿಡಕ್ಕೆ ನೀರೆರೆಯುವ ಮೂಲಕ ಉದ್ಘಾಟಿಸಲಾಯಿತು. ಈ ಸಂದರ್ಭದಲ್ಲಿ “ಹವಾಮಾನ ಬದಲಾವಣೆ ತಡೆಗಟ್ಟೋಣ : ಪರಿಸರ ಸಂರಕ್ಷಣೆ ಮಾಡೋಣ” ಎಂಬ ಬಿತ್ತಿಪತ್ರವನ್ನು ಬಿಡುಗಡೆಗೊಳಿಸಲಾಯಿತು.
ಈ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಶ್ರೀ ಎಂ.ಎನ್. ನಟರಾಜ್, ನಿವೃತ್ತ ಪ್ರಾದೇಶಿಕ ನಿರ್ದೇಶಕರು, ಯುವಜನ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯ, ಭಾರತ ಸರ್ಕಾರ, 2026ರ ರಾಷ್ಟ್ರೀಯ ಯುವ ದಿನಾಚರಣೆಯ ವಿಷಯವಾಗಿರುವ “ಸ್ವಯಂ ಪ್ರೇರಣೆಯನ್ನು ಬೆಳಗಿಸಿ, ವಿಶ್ವದ ಮೇಲೆ ಪರಿಣಾಮ ಬೀರಿರಿ” ಎಂಬುದು ಯುವಜನರಿಗೆ ತಮ್ಮೊಳಗಿನ ಶಕ್ತಿ ಮತ್ತು ಸಾಮರ್ಥ್ಯವನ್ನು ಅರಿತುಕೊಂಡು ಸಮಾಜ ಹಾಗೂ ರಾಷ್ಟ್ರದ ಅಭಿವೃದ್ಧಿಗೆ ಬಳಸುವಂತೆ ಪ್ರೇರೇಪಿಸುತ್ತದೆ ಎಂದರು.
ಸ್ವಯಂ ಪ್ರೇರಣೆ ಎಂಬುದು ಹೊರಗಿನ ಒತ್ತಡವಿಲ್ಲದೆ ತಮ್ಮ ಗುರಿಯನ್ನು ಗುರುತಿಸಿ ಸಾಧಿಸುವ ಮನೋಭಾವವಾಗಿದ್ದು, ಇದು ಯುವಜನರಲ್ಲಿ ಬೆಳೆಯುವ ಮೂಲಕ ಅವರು ಸವಾಲುಗಳ ನಡುವೆಯೂ ಧೈರ್ಯದಿಂದ ಮುಂದೆ ಸಾಗಲು ಸಹಕಾರಿಯಾಗುತ್ತದೆ ಎಂದು ತಿಳಿಸಿದರು.

ಭಾರತದಲ್ಲಿ 15 ರಿಂದ 29 ವರ್ಷದೊಳಗಿನವರನ್ನು ಯುವಕರು ಎಂದು ಪರಿಗಣಿಸಲಾಗುತ್ತಿದ್ದು, ದೇಶದಲ್ಲಿ ಸುಮಾರು 45 ಕೋಟಿ ಯುವಜನರು ಇದ್ದಾರೆ. ಇದರಿಂದ ಭಾರತವು ವಿಶ್ವದಲ್ಲೇ ಅತಿ ಹೆಚ್ಚು ಯುವಜನಸಂಖ್ಯೆ ಹೊಂದಿರುವ ದೇಶವಾಗಿದೆ. ಯುವಜನರ ಶಕ್ತಿಯನ್ನು ಅಣುಶಕ್ತಿಗೆ ಹೋಲಿಸಬಹುದಾಗಿದ್ದು, ಅದನ್ನು ಸಕಾರಾತ್ಮಕ ದಿಕ್ಕಿನಲ್ಲಿ ಬಳಸಿದರೆ ದೇಶದ ಅಭಿವೃದ್ಧಿಗೆ ಮಹತ್ವದ ಕೊಡುಗೆ ನೀಡಬಹುದು ಎಂದು ಹೇಳಿದರು.
ದೇಶದ ಅಭಿವೃದ್ಧಿ ಎಂದರೆ ಗ್ರಾಮಗಳ ಅಭಿವೃದ್ಧಿಯಾಗಿದ್ದು, ಇತ್ತೀಚಿನ ದಿನಗಳಲ್ಲಿ ಉದ್ಯೋಗದ ಕೊರತೆಯಿಂದ ಗ್ರಾಮೀಣ ಯುವಜನರು ನಗರಗಳ ಕಡೆ ವಲಸೆ ಹೋಗುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ ಎಂದರು.
ಕಾರ್ಯಕ್ರಮದ ಪ್ರಾಸ್ತಾವಿಕ ಭಾಷಣ ಮಾಡಿದ ಸಂಸ್ಥೆಯ ನಿರ್ದೇಶಕಿ ಶ್ರೀಮತಿ ಸರಸ್ವತಿ ಅವರು, ಗ್ರಾಮೀಣ ಶಿಕ್ಷಣ ಮತ್ತು ಆರೋಗ್ಯ ಸಂಸ್ಥೆ ಕಳೆದ 40 ವರ್ಷಗಳಿಂದ ಮೈಸೂರು, ಮಂಡ್ಯ, ಚಾಮರಾಜನಗರ ಹಾಗೂ ಉತ್ತರ ಕರ್ನಾಟಕದ ಚಿತ್ರದುರ್ಗ, ದಾವಣಗೆರೆ, ರಾಯಚೂರು, ಕಲಬುರ್ಗಿ ಮತ್ತು ಬೀದರ್ ಜಿಲ್ಲೆಗಳಲ್ಲಿ ಮಕ್ಕಳ ಅಭಿವೃದ್ಧಿ, ಯುವಕರ ಸಬಲೀಕರಣ, ಮಹಿಳಾ ಅಭಿವೃದ್ಧಿ, ಸಮುದಾಯ ಆರೋಗ್ಯ ಹಾಗೂ ಪರಿಸರ ಸಂರಕ್ಷಣಾ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿದೆ ಎಂದು ವಿವರಿಸಿದರು.

ರಾಜ್ಯ ಮಟ್ಟದಲ್ಲಿ ಕರ್ನಾಟಕ ರಾಜ್ಯ ಯೂತ್ ನೆಟ್ವರ್ಕ್ ರಚನೆಯ ಮೂಲಕ ಯುವಜನರ ಸಾಮರ್ಥ್ಯ ವೃದ್ಧಿಗೆ ನಿರಂತರವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ತಿಳಿಸಿದರು. ಕಾರ್ಯಕ್ರಮದ ಅಂಗವಾಗಿ ಯುವಜನರಿಗೆ “ಹವಾಮಾನ ಬದಲಾವಣೆ ಮತ್ತು ಯುವಜನರು, ಒಂದು ಸಾಮೂಹಿಕ ಜವಾಬ್ದಾರಿ” ವಿಷಯದ ಕುರಿತು ಪ್ರಬಂಧ ಸ್ಪರ್ಧೆ ಏರ್ಪಡಿಸಲಾಗಿದ್ದು, ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಪ್ರೊ. ಜೋಸ್ ವಿ.ಕೆ. (ಕಾರ್ಯದರ್ಶಿ, ಆರ್.ಎಲ್.ಎಚ್.ಪಿ), ಶ್ರೀ ದಿನೇಶ್ ಎಂ.ಎನ್. (ಪ್ರಭಾರಿ ಪ್ರಾಂಶುಪಾಲರು), ಶ್ರೀಮತಿ ಶಿಲ್ಪ ಕೆ.ಎಸ್. (ಸಹಾಯಕ ಪ್ರಾಧ್ಯಾಪಕರು), ಕರ್ನಾಟಕ ಸ್ಟೇಟ್ ಯೂತ್ ನೆಟ್ವರ್ಕ್ ಸದಸ್ಯರಾದ ಶ್ರೀ ಮಹೇಶ್, ಕು. ಮೆರಿಟೀನಾ ಹಾಗೂ ವಿವಿಧ ಕಾಲೇಜುಗಳ ಸಹಾಯಕ ಪ್ರಾಧ್ಯಾಪಕರುಗಳು ಮತ್ತು 120ಕ್ಕೂ ಹೆಚ್ಚು ಯುವಜನರು ಭಾಗವಹಿಸಿದ್ದರು.















