ಮನೆ ರಾಜ್ಯ ಎನ್‌ಡಿಎ ಒಕ್ಕೂಟ ಅಧಿಕಾರಕ್ಕೆ ಬೇಡ: ಬಡಗಲಪುರ ನಾಗೇಂದ್ರ

ಎನ್‌ಡಿಎ ಒಕ್ಕೂಟ ಅಧಿಕಾರಕ್ಕೆ ಬೇಡ: ಬಡಗಲಪುರ ನಾಗೇಂದ್ರ

0

ಮಂಡ್ಯ: ದೇಶದಲ್ಲಿ ಎನ್‌ಡಿಎ ಒಕ್ಕೂಟ ಅಧಿಕಾರಕ್ಕೆ ಬರುವುದನ್ನು ತಡೆಯಬೇಕಿದೆ ಎಂದು ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಹೇಳಿದರು.


ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,ಬಿಜೆಪಿ ಮತ್ತು ಮಿತ್ರ ಪಕ್ಷಗಳನ್ನು ಸೋಲಿಸಿ- ರೈತ ಸಮುದಾಯವನ್ನು ಉಳಿಸಿ ಎಂಬ ಘೋಷಣೆಯಡಿ ಈಚೆಗೆ ದೆಹಲಿಯ ರಾಮಲೀಲಾ ಮೈದಾನದಲ್ಲಿ ಬೃಹತ್ ರೈತ-ಕಾರ್ಮಿಕ ಮಹಾಪಂಚಾಯತ್‌ನಲ್ಲಿ ದೇಶದ ರೈತರು ನಿರ್ಣಯ ಕೈಗೊಂಡಿದ್ದಾರೆ ಎಂದು ತಿಳಿಸಿದರು.
ಎನ್ ಡಿಎ ಒಕ್ಕೂಟದಲ್ಲಿರುವ ಜಾತ್ಯಾತೀತ ಜನತಾದಳವು ಕೂಡ ರೈತಪರ ಪಕ್ಷವಾಗಿ ಉಳಿದಿಲ್ಲ.ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ರೈತ ಸಮುದಾಯಕ್ಕೆ ಮರಣ ಶಾಸನವಾದ ಭೂಸ್ಮಧಾರಣೆ ತಿದ್ದುಪಡಿ ಕಾಯಿದೆಗೆ ಮತ್ತು ಎಪಿಎಂಸಿ ತಿದ್ದುಪಡಿ ಕಾಯಿದೆಗೆ ಬೆಂಬಲ ವ್ಯಕ್ತಪಡಿಸಿ ತನ್ನ ರೈತ ವಿರೋಧಿ ನೀತಿಯನ್ನು ಬಹಿರಂಗವಾಗಿ ಪ್ರದರ್ಶಿಸಿದೆ ಎಂದರು.
ಕಳೆದ ಬಾರಿ ರಾಜ್ಯದಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ರೈತ ಸಂಘಟನೆಗಳು, ದಲಿತ,ಕಾರ್ಮಿಕ, ಮಹಿಳಾ, ಯುವಜನ, ವಿದ್ಯಾರ್ಥಿ ಮತ್ತು ಪ್ರಗತಿಪರ ಸಂಘಟನೆಗಳ ಸತತ ಪ್ರಯತ್ನದಿಂದ ರಾಜ್ಯದಲ್ಲಿ ಬಿಜೆಪಿಯನ್ನು ವಿಧಾನಸೌಧದಿಂದ ತೊಲಗಿಸಲಾಯಿತು.ಈ ಲೋಕಸಭಾ ಚುನಾವಣೆಯಲ್ಲೂ ಇದೇ ಪ್ರಯತ್ನ ಮತ್ತಷ್ಟು ವಿಸ್ತಾರವಾಗಿ ಮಾಡಲಾಗುತ್ತಿದೆ ಎಂದರು.
ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದ ಸರ್ಕಾರ 10 ವರ್ಷಗಳ ಕಾಲ ರೈತರು ಮತ್ತು ಕಾರ್ಮಿಕ ವಿರೋಧಿ ನೀತಿಗಳನ್ನು ಹೊರತಂದಿದೆ ಎಂದು ಆರೋಪಿಸಿದ್ದಾರೆ. ಮುಂಬರುವ ಲೋಕಸಭಾ ಚುನಾವಣೆಯು ಕಾರ್ಮಿಕ ವರ್ಗ ಮತ್ತು ರೈತರಿಗೆ ಮಹತ್ವದ್ದಾಗಿದೆ. ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಆಡಳಿತದಲ್ಲಿ ರೈತರ ಆತ್ಮಹತ್ಯೆ ಹೆಚ್ಚಿದೆ.ಕಳೆದ 10 ವರ್ಷಗಳಲ್ಲಿ 1 ಲಕ್ಷಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರಾಜ್ಯ ರೈತ ಸಂಘ ಮಂಡ್ಯ ಲೋಕಸಭಾ ಕ್ಷೇತ್ರದ ಪ್ರತಿ ಹಳ್ಳಿಗೂ ಪ್ರತಿ ಕುಟುಂಬಕ್ಕೂ ತಲುಪಿಸಿ ಸರ್ಕಾರದ ರೈತ ವಿರೋಧಿ ನೀತಿಗಳನ್ನು ತೋರಿಸುವ ಕರಪತ್ರಗಳು ಮತ್ತು ಭಿತ್ತಿಪತ್ರಗಳನ್ನು ಹಂಚಲಿದೆ ಎಂದು ಮಾಹಿತಿ ನೀಡಿದರು.
ವಿದ್ಯುತ್‌ ಚ್ಛಕ್ತಿ ತಿದ್ದುಪಡಿ ಕಾಯಿದೆಯನ್ನು ರೈತ ಮುಖಂಡರ ಒಪ್ಪಿಗೆ ಇಲ್ಲದೆ ಸಂಸತ್ ನಲ್ಲಿ ಮಂಡಿಸುವುದಿಲ್ಲ ಎಂದು ಲಿಖಿತ ಭರವಸೆ ನೀಡಿದ ಮೋದಿ ಸರ್ಕಾರ ಸಂಸತ್ ನಲ್ಲಿ ಮಂಡಿಸಿ ಮಾತಿಗೆ ತಪ್ಪಿದೆ.ಅಗತ್ಯ ವಸ್ತುಗಳ ಬೆಲೆ ಏರಿಕೆ, ಪೆಟ್ರೋಲ್‌,ಡೀಸೆಲ್ ಬೆಲೆ ದುಬಾರಿ ಮಾಡಿ ಸಾಮಾನ್ಯ ಜನರ ಜೇಬಿಗೆ ಕತ್ತರಿ ಹಾಕಿದ್ದಾರೆ.ಸಂವಿಧಾನ ಪ್ರಜಾ ಪ್ರಭುತ್ವ ವ್ಯವಸ್ಥೆಯನ್ನು ನಾಶ ಮಾಡಲು ಹೊರಟಿದ್ದಾರೆ.ಒಂದೇ ದೇಶ- ಒಂದೇ ಚುನಾವಣೆ, ಒಂದೇ ದೇಶ-ಒಂದೇ ನೊಂದಣಿ ಕೋಮುವಾದಿ ದೃವೀಕರಣ ಮುಂತಾದ ಸಂವಿಧಾನ ವಿರೋಧಿ ನೀತಿಗಳಿಗೆ ಒತ್ತು ಕೊಟ್ಟು ವೈವಿಧ್ಯಮಯದಿಂದ ಕೂಡಿದ ಏಕತೆಯ ಉದ್ದೇಶಕ್ಕೆ ಭಂಗತರುತ್ತಿದ್ದಾರೆ. ಇವುಗಳಲ್ಲದೆ ಇನ್ನು ಹತ್ತಾರು ಜನ ವಿರೋಧಿ ನೀತಿಗಳಿಂದ ಅಸಮಾನತೆ ಸೃಷ್ಠಿಯಾಗಿದೆ.ಮೋದಿ ಆಡಳಿತದ ದುರಾಡಳಿತ ವಿರುದ್ಧ ಕರ್ನಾಟಕ ರಾಜ್ಯ ರೈತ ಸಂಘ, ದಲಿತ, ಕಾರ್ಮಿಕ ಇತರೆ ಪ್ರಗತಿ ಪರ ಸಂಘಟನೆಗಳೊಡಗೂಡಿ ಎನ್ ಡಿ ಎ ವಿರುದ್ಧ ಮತ ಚಲಾಯಿಸಲು ಮತದಾರರದಲ್ಲಿ ಜಾಗೃತಿ ಮೂಡಿಸಲು ನಿರ್ಣಯ ಕೈಗೊಂಡಿದ್ದೇವೆ ಎಂದರು.
ಗೋಷ್ಠಿಯಲ್ಲಿ ರೈತಸಂಘದ ಮಂಡ್ಯ ಜಿಲ್ಲಾಧ್ಯಕ್ಷ ಎ.ಎಲ್.ಕೆಂಪೂಗೌಡ, ಮುಖಂಡರಾದ ತಗ್ಗಹಳ್ಳಿ ಪ್ರಸನ್ನ, ಪ್ರಶಾಂತ್, ಲಿಂಗಪ್ಪಾಜಿ, ನಾಗರಾಜು, ಹೊಸೂರು ಕುಮಾರ್, ಎಸ್.ಬಿ.ಶೇಖರ್, ರಂಗೇಗೌಡ ಹಾಗೂ ಮಲ್ಲೇಶ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.