ಬೆಂಗಳೂರು(Bengaluru): ಮದ್ಯಮಾರಾಟಗಾರರ ಸಮಸ್ಯೆಗಳ ನಿವಾರಣೆಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಅಬಕಾರಿ ಸಚಿವ ಕೆ.ಗೋಪಾಲಯ್ಯ ಹೇಳಿದರು.
ಅಬಕಾರಿ ಆಯುಕ್ತರ ಕಚೇರಿಯಲ್ಲಿಂದು ಫೆಡರೇಷನ್ ಆಪ್ ವೈನ್ ಮರ್ಚಂಟ್ಸ್ ಕೋರಿಕೆ ಹಿನ್ನೆಲೆಯಲ್ಲಿ ನಡೆದ ಇ-ಇಂಡೆಂಟಿಂಗ್ ನಿಂದ ಉಂಟಾಗಿರುವ ಸಮಸ್ಯೆ ಕುರಿತ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಮದ್ಯ ಮಾರಾಟಗಾರರು ಕಳೆದ ಒಂದೆರಡು ತಿಂಗಳಿನಿAದ ಎದುರಿಸುತ್ತಿರುವ ಇ-ಇಂಡೆಂಟಿಂಗ್ ಸಮಸ್ಯೆ ನಿವಾರಣೆಗೆ ಇಲಾಖೆ ಅಧಿಕಾರಿಗಳಿಗೆ ಈಗಾಗಲೇ ಸೂಚನೆ ನೀಡಲಾಗಿದೆ ಎಂದರು.
ಇ-ಇಂಡೆಂಟಿಂಗ್ ಸಮಸ್ಯೆ ಕುರಿತು ಮದ್ಯ ಮಾರಾಟಗಾರರು ನನ್ನ ಗಮನಕ್ಕೆ ತಂದಾಗ ತಕ್ಷಣವೇ ಸಮಸ್ಯೆಗೆ ಸ್ಪಂದಿಸುವ ಕೆಲಸ ಮಾಡಲಾಗಿದೆ. ಇಲಾಖಾ ಸಚಿವನಾಗಿ ಸಮಸ್ಯೆಯ ಗಂಭೀರತೆಯನ್ನು ಅರಿತಿದ್ದೇನೆ. ಇದಾದ ನಂತರ ನಡೆದ ಎಲ್ಲ ಬೆಳವಣಿಗೆಗಳನ್ನು ಗಮನಿಸಿದ್ದು, ಈ ಹಿನ್ನೆಲೆಯಲ್ಲಿ ಸೂಕ್ತವಾಗಿ ಪರಿಹರಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಸಭೆಯಲ್ಲಿ ಉಪಸ್ಥಿತರಿದ್ದ ಫೆಡರೇಷನ್ ಆಪ್ ವೈನ್ ಮರ್ಚಂಟ್ಸ್ ಅಧ್ಯಕ್ಷ ಗೋವಿಂದರಾಜ್ ಹೆಗಡೆ ಮಾತನಾಡಿ, ಸಚಿವರು ಸಮಸ್ಯೆ ಬಗೆಹರಿಸುವ ಭರವಸೆ ನೀಡಿರುವ ಹಿನ್ನೆಲೆಯಲ್ಲಿ ಮುಷ್ಕರವನ್ನು ಹಿಂಪಡೆಯಲಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ರಾಜ್ಯ ಪಾನೀಯ ನಿಗಮದ ವ್ಯವಸ್ಥಾಪಕ ನಿರ್ದೇಶಕ ಜಾಫರ್,ಇಡಿಒ ರಾಜೇಂದ್ರ ಪ್ರಸಾದ್,ಡಾ.ರವಿಶಂಕರ್ ಉಪಸ್ಥಿತರಿದ್ದರು.