ಹೆತ್ತವರನ್ನು ನೋಡಿಕೊಳ್ಳಲು ನಿರಾಕರಿಸಿದ ಮಗನೊಂದಿಗೆ ಮಾಡಿಕೊಂಡಿದ್ದ ಆಸ್ತಿ ಇತ್ಯರ್ಥ ಕರಾರನ್ನು ರದ್ದುಗೊಳಿಸಲು ವಾಯುಪಡೆಯ ನಿವೃತ್ತ ಪೈಲಟ್ ಮತ್ತು ಅವರ ಪತ್ನಿಗೆ ಮದ್ರಾಸ್ ಹೈಕೋರ್ಟ್ ಇತ್ತೀಚೆಗೆ ಅನುಮತಿಸಿದೆ [ಎನ್ ನಾಗರಾಜನ್ ಮತ್ತು ಶೇಖರ್ ರಾಜ್ ನಡುವಣ ಪ್ರಕರಣ].
ನ್ಯಾಯಮೂರ್ತಿ ಪಿ ಟಿ ಆಶಾ ಅವರಿದ್ದ ಏಕಸದಸ್ಯ ಪೀಠವು ಸೆಪ್ಟೆಂಬರ್ 27ರಂದು ನೀಡಿದ ತೀರ್ಪಿನಲ್ಲಿ, ಮಗ ಮಾಡಬೇಕಾದ ಕರ್ತವ್ಯದ ಬಗ್ಗೆ ತಮಿಳಿನ ದಾರ್ಶನಿಕ ಕವಿ ತಿರುವಳ್ಳುವರ್ ಬರೆದಿರುವ ಸಾಲುಗಳನ್ನು ಪ್ರಸ್ತಾಪಿಸಿದ್ದಾರೆ.
ಅರ್ಜಿದಾರರು ತಮ್ಮ ಅಸಹಾಯಕ ಸ್ಥಿತಿ ಬಗ್ಗೆ ವಿವರಿಸಿ ತಾವು ವೃದ್ಧಾಶ್ರಮಕ್ಕೆ ತೆರಳಬೇಕೆ ಎಂದು ಪ್ರಶ್ನಿಸಿ ಹಿರಿಯ ಮಗನಿಗೆ ಕಳುಹಿಸಿದ್ದ ಇ ಮೇಲ್ ಓದಿ ನ್ಯಾಯಮೂರ್ತಿಗಳು ಭಾವುಕರಾದರು.
ತಮ್ಮ ವೈದ್ಯಕೀಯ ಖರ್ಚು- ವೆಚ್ಚಗಳಿಗಾಗಿ ಮೇಲ್ಮನವಿ ಸಲ್ಲಿಸಿರುವ ತಂದೆ ಎನ್ ನಾಗರಾಜನ್ ಮತ್ತವರ ಪತ್ನಿ ಪಿಂಚಣಿ ಹಣ ಮತ್ತು ಆಭರಣ ಮಾರಿ ದೊರೆತ ಹಣವನ್ನು ವಿನಿಯೋಗಿಸುವಂತಾಗಿದೆ ಎಂಬುದನ್ನು ಗಮನಿಸಿದ ನ್ಯಾಯಾಲಯ ಆಸ್ತಿ ವ್ಯಾಜ್ಯಕ್ಕೆ ಸಂಬಂಧಿಸಿದಂತೆ ಹಿರಿಯ ಮಗನ ಪರವಾಗಿ ಕೆಳ ನ್ಯಾಯಾಲಯವೊಂದು ನೀಡಿದ್ದ ಆದೇಶ ಪ್ರಶ್ನಿಸಿ ಪೋಷಕರು ಸಲ್ಲಿಸಿದ್ದ ಮೇಲ್ಮನವಿಯನ್ನು ಪುರಸ್ಕರಿಸಿತು.
ವಯೋವೃದ್ಧರ ಕುರಿತಂತೆ ಮ್ಯಾಡ್ರಿಡ್ ಅಂತಾರಾಷ್ಟ್ರೀಯ ಕಾರ್ಯತಂತ್ರಕ್ಕೆ ಭಾರತ ಸಹಿ ಹಾಕಿದ ಬಳಿಕ ಪೋಷಕರು ಮತ್ತು ಹಿರಿಯ ನಾಗರಿಕರಿಗೆ ಜೀವನಾಂಶ ಮತ್ತು ಕಲ್ಯಾಣ ಕಾಯಿದೆ- 2007ಅನ್ನು ಜಾರಿಗೆ ತಂದಿದ್ದು ಇದು ಆಸ್ತಿ ವರ್ಗಾವಣೆ ಕಾಯ್ದೆ ಸೇರಿದಂತೆ ಭಾರತದಲ್ಲಿ ಜಾರಿಯಲ್ಲಿರುವ ಎಲ್ಲಾ ಇತರ ಸಾಮಾನ್ಯ ಕಾನೂನುಗಳನ್ನು ಮೀರುತ್ತದೆ ಎಂದು ಪೀಠ ಹೇಳಿದೆ.
ಅಲ್ಲದೆ ಕಾಯಿದೆಯ ಸೆಕ್ಷನ್ 23ರ ಪ್ರಕಾರ ಆಸ್ತಿ ನೀಡುತ್ತಿರುವವರು, ಆಸ್ತಿ ಪಡೆಯುತ್ತಿರುವವರಿಗೆ ಮೂಲಭೂತ ಸೌಕರ್ಯ ಮತ್ತು ಮೂಲಭೂತ ಶಾರೀರಿಕ ಅಗತ್ಯಗಳನ್ನು ಈಡೇರಿಸುವಂತೆ ಕೋರಿ ಆಸ್ತಿ ವರ್ಗಾಯಿಸಿದ್ದರೆ ಮತ್ತು ಆಸ್ತಿ ವರ್ಗಾವಣೆ ಮಾಡಿಸಿಕೊಂಡವರು ಅದನ್ನು ಮಾಡಲು ವಿಫಲವಾದರೆ ಆಸ್ತಿ ವರ್ಗಾವಣೆ ಕರಾರು ರದ್ದುಗೊಳಿಸಬಹುದು ಎಂದು ನ್ಯಾಯಾಲಯ ವಿವರಿಸಿದೆ.
ಆಸ್ಟ್ರೇಲಿಯಾದಲ್ಲಿ ಉತ್ತಮ ಜೀವನ ನಡೆಸುತ್ತಿರುವ ಹಿರಿಯ ಪುತ್ರ ತನ್ನ ಹೆಸರಿಗೆ ಪೋಷಕರ ಮನೆ ದೊರೆಯುವಂತೆ ದಾಖಲೆ ಸೃಷ್ಟಿಸಿ ಮನೆ ಖಾಲಿ ಮಾಡಲು ಹೇಳಿದ್ದ. ಇತ್ತ ಕಿರಿಯ ಮಗ ಪೋಷಕರ ಇಮೇಲ್ ಮತ್ತು ಫೋನ್ ಕರೆಗೆ ಸ್ಪಂದಿಸುತ್ತಿರಲಿಲ್ಲ. ಪತ್ನಿ ಅನಾರೋಗ್ಯದಿಂದ ಬಳಲುತ್ತಿದ್ದು ಆಸ್ಪತ್ರೆಗೆ ದಾಖಲಾಗುವ ಸಾಧ್ಯತೆ ಇದೆ ಎಂದು ಅರ್ಜಿಯಲ್ಲಿ ವಿವರಿಸಲಾಗಿತ್ತು. ಇಬ್ಬರು ಗಂಡು ಮಕ್ಕಳು ತನಗೆ ಮತ್ತು ತನ್ನ ಹೆಂಡತಿಗೆ ಸಹಾಯ ಮಾಡಲು ನಿರಾಕರಿಸುತ್ತಿರುವುದರಿಂದ ವೃದ್ಧಾಶ್ರಮ ಸೇರಲು ಮತ್ತು ಆಸ್ತಿ ಇತ್ಯರ್ಥ ಕರಾರು ರದ್ದುಗೊಳಿಸಲು ಅರ್ಜಿದಾರರು ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಿದ್ದರು.