ನವದೆಹಲಿ: ಮೇ 28 ರಂದು ನಡೆಯಲಿರುವ ನೂತನ ಸಂಸತ್ ಭವನ ಉದ್ಘಾಟನೆ ಸಮಾರಂಭವನ್ನು ಬಹಿಷ್ಕರಿಸುವುದಾಗಿ ತಮಿಳುನಾಡಿನ ಆಡಳಿತರೂಢ ಡಿಎಂಕೆ, ಬಿಹಾರದ ಆಡಳಿತ ಪಕ್ಷ ಆರ್ ಜೆಡಿ, ತೆಲಂಗಾಣದ ಆಡಳಿತ ಪಕ್ಷ ಭಾರತ್ ರಾಷ್ಟ್ರೀಯ ಸಮಿತಿ, ಮಹಾರಾಷ್ಟ್ರದ ಶಿವಸೇನಾ ಉದ್ಧವ್ ಬಾಳಾ ಸಾಹೇಬ್ ಠಾಕ್ರೆ, ಎನ್ ಸಿಪಿ, ವಿಸಿಕೆ ಪಕ್ಷಗಳು ತಿಳಿಸಿವೆ.
ಈ ಸಮಾರಂಭವನ್ನು ನಾವು ಬಹಿಷ್ಕರಿಸುತ್ತೇವೆ ಎಂದು ಡಿಎಂಕೆ ಸಂಸದ ತಿರುಚಿ ಶಿವ ಸುದ್ದಿ ಸಂಸ್ಥೆ ಎಎನ್ಐಗೆ ಹೇಳಿದ್ದಾರೆ.
ರಾಷ್ಟ್ರಪತಿಗಳು ಸಂಸತ್ ನ ಮುಖ್ಯಸ್ಥರು. ಅವರು ಸಂಸತ್ ಭವನವನ್ನು ಉದ್ಘಾಟನೆ ಮಾಡಬೇಕಿತ್ತು. ಆದರೆ ರಾಷ್ಟ್ರಪತಿಗಳಿಂದ ಉದ್ಘಾಟನೆ ಮಾಡಿಸದೆ, ಅವರಿಗೆ ಅವಮಾನ ಮಾಡಲಾಗುತ್ತಿದೆ. ಹೀಗಾಗಿ ಮೊದಲ ಅಧಿವೇಶನವನ್ನು ಎಲ್ಲಾ ವಿಪಕ್ಷಗಳು ಸೇರಿ ಬಹಿಷ್ಕಾರ ಮಾಡುತ್ತೇವೆ ಎಂದು ಬಿಹಾರದ ಉಪಮುಖ್ಯಮಂತ್ರಿಯೂ ಆಗಿರುವ ಆರ್ ಜೆಡಿ ನಾಯಕ ತೇಜಸ್ವಿ ಯಾದವ್ ಹೇಳಿದ್ದಾರೆ.
ಎಲ್ಲಾ ವಿರೋಧ ಪಕ್ಷಗಳು ನೂತನ ಸಂಸತ್ ಭವನದ ಉದ್ಘಾಟನಾ ಸಮಾರಂಭವನ್ನು ಬಹಿಷ್ಕರಿಸುವುದಾಗಿ ಹೇಳಿವೆ. ನಾವೂ ಕೂಡ ಬಹಿಷ್ಕರಿಸುತ್ತೇವೆ ಎಂದು ಶಿವಸೇನಾ ಉದ್ಧವ್ ಬಾಳಾ ಸಾಹೇಬ್ ಠಾಕ್ರೆ ಪಕ್ಷದ ಸಂಜಯ್ ರಾವುತ್ ಹೇಳಿದ್ದಾರೆ.
ದೇಶದ ಅರ್ಥಿಕ ಪರಿಸ್ಥಿತಿ ಬಿಗಾಡಾಯಿಸಿರುವಾಗ ಕೋಟ್ಯಾಂತರ ರೂಪಾಯಿ ಖರ್ಚು ಮಾಡಿ ಸೆಂಟ್ರಲ್ ವಿಸ್ತಾ ನಿರ್ಮಾಣ ಮಾಡಿದ್ದರ ಬಗ್ಗೆ ಮೊದಲು ನಾವೇ ಪ್ರಶ್ನೆ ಎತ್ತಿದ್ದೆವು. ಈ ಯೋಜನೆಯನ್ನು ಪ್ರಧಾನಮಂತ್ರಿಯವ ಇಚ್ಛೆಗಾಗಿ ಮಾಡಲಾಗಿದೆ. ಇದರ ಅಗತ್ಯ ಇತ್ತೇ? ಹಳೆಯ ಸಂಸತ್ ಭವನ ಇನ್ನೂ ನೂರು ವರ್ಷಕ್ಕೆ ಸಾಲುತ್ತಿತ್ತು. ಹಳೆಯ ಸಂಸತ್ ಭವನಕ್ಕೆ ಆರ್ ಎಸ್ ಎಸ್ ಹಾಗೂ ಬಿಜೆಪಿಗೆ ಸಂಬಂಧ ಇಲ್ಲ. ಪ್ರಧಾನಿ ನರೇಂದ್ರ ಮೋದಿಯವರು ಉದ್ಘಾಟನೆ ಮಾಡಿದ್ದಾರೆ ಎನ್ನುವ ಫಲಕ ಹಾಕಲು ಹೊಸ ಭವನವನ್ನು ನಿರ್ಮಾಣ ಮಾಡಲಾಗಿದೆ ಎಂದು ಸಂಜಯ್ ರಾವುತ್ ಕಿಡಿಕಾರಿದ್ದಾರೆ.