ಕೆಲವು ದಿನಗಳ ಹಿಂದಷ್ಟೇ ನಟ ಸುದೀಪ್ “ಮ್ಯಾಕ್ಸ್’ ಚಿತ್ರದ ರಿಲೀಸ್ ಕುರಿತಾಗಿ ನಿರ್ಮಾಪಕರ ಮೇಲಿನ ಅಸಮಾಧಾನವನ್ನು ಬಿಗ್ಬಾಸ್ ವೇದಿಕೆ ಮೇಲೆ ಹೊರ ಹಾಕಿದ್ದರು. ಭಾನುವಾರದ ಕಿಚ್ಚನ ಮಾತುಕತೆಯಲ್ಲಿ ಅಭಿಮಾನಿಯೊಬ್ಬರು “ನಿಮ್ಮ ಎಲ್ಲಾ ಸಿನಿಮಾಗಳನ್ನು ನೋಡಿದ್ದೇನೆ. ನಿಮ್ಮ ಮ್ಯಾಕ್ಸ್ ಗಾಗಿ ಕಾಯುತ್ತಿದ್ದೇನೆ’ ಎಂದಾಗ ಸುದೀಪ್ ನೀಡಿದ ಉತ್ತರ ಕೇಳಿ ಅವರ ಅಭಿಮಾನಿಗಳು ಶಾಕ್ ಆಗಿದ್ದಾರೆ.
“ನಾನು ಕಾಯುತ್ತಿದ್ದೇನೆ. ಆ ಪುಣ್ಯಾತ್ಮರು ಯಾವಾಗ ದೊಡ್ಡ ಮನಸ್ಸು ಮಾಡ್ತಾರೋ ಗೊತ್ತಿಲ್ಲ’ ಎನ್ನುವ ಮೂಲಕ “ಮ್ಯಾಕ್ಸ್’ ಅಪ್ಡೇಟ್ ತಮಗೂ ಇಲ್ಲ ಎಂಬ ಸುಳಿವು ನೀಡಿದ್ದರು. ಇದರ ಬೆನ್ನಲ್ಲೇ ನಿರ್ಮಾಣ ಸಂಸ್ಥೆ ಎಚ್ಚೆತ್ತುಕೊಂಡಿದೆ. ಚಿತ್ರವನ್ನು ಡಿಸೆಂಬರ್ 27ರಂದು ತೆರೆಗೆ ತರಲು ನಿರ್ಧರಿಸಿದೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಚಿತ್ರದ ಕುರಿತಾದ ಅಪ್ಡೇಟ್ವೊಂದನ್ನು ನ.27ರಂದು ನೀಡಲು ಮುಂದಾಗಿದೆ. ಅದು ರಿಲೀಸ್ ಕುರಿತಾದ ಆಪ್ ಡೇಟ್ ಎನ್ನುವುದು ಸಿನಿಮಂದಿಯ ಮಾತು.
ಈ ಚಿತ್ರದ ನಿರ್ಮಾಣ ಸಂಸ್ಥೆ ತಮಿಳಿನದ್ದು. ಇಷ್ಟೊತ್ತಿಗೆ ಬಿಡುಗಡೆಯಾಗಬೇಕಿದ್ದ ಚಿತ್ರ ಮುಂದಕ್ಕೆ ಹೋಗುತ್ತಲೇ ಇದೆ. ಈ ನಡುವೆಯೇ ಸುದೀಪ್ ಹಾಗೂ ನಿರ್ಮಾಣ ಸಂಸ್ಥೆ ನಡುವೆ ಸಣ್ಣ ಮನಸ್ತಾಪವಿದೆ ಎಂಬ ಮಾತೂ ಕೇಳಿಬರುತ್ತಿದೆ. ಇದಕ್ಕೆ ಪೂರಕವೆಂಬಂತೆ ಸುದೀಪ್ ಬಿಗ್ಬಾಸ್ ವೇದಿಕೆ ಮಾತನಾಡಿದ್ದರು.
ವಿಜಯ್ ಕಾರ್ತಿಕೇಯ ನಿರ್ದೇಶನದ ಆ್ಯಕ್ಷನ್ ಥ್ರಿಲ್ಲರ್ “ಮ್ಯಾಕ್ಸ್’ ಚಿತ್ರದಲ್ಲಿ ಕಿಚ್ಚ ಸುದೀಪ್, ವರಲಕ್ಷ್ಮೀ ಶರತ್ ಕುಮಾರ್, ಸಂಯುಕ್ತ ಹೊರ ನಾಡು, ಪ್ರಮೋದ್ ಶೆಟ್ಟಿ ಮುಂತಾದವರು ಬಣ್ಣ ಹಚ್ಚಿದ್ದಾರೆ. ಕಲೈಪುಲಿ ಎಸ್ ತನು ವಿ ಕ್ರಿಯೇಷನ್ಸ್ ಹಾಗೂ ಕಿಚ್ಚ ಸುದೀಪ್ ಕಿಚ್ಚ ಕ್ರಿಯೇ ಷನ್ಸ್ ಬ್ಯಾನರ್ ಅಡಿಯಲ್ಲಿ ಈ ಚಿತ್ರವನ್ನು ನಿರ್ಮಿಸಿದ್ದಾರೆ.
ಡಿಸೆಂಬರ್ 27ರಂದು ಸಿನಿಮಾ ತೆರೆಗೆ ತರಲು ಈಗಾಗಲೇ ಹಲವು ಸಿನಿಮಾ ತಂಡಗಳು ಮುಂದಾಗಿವೆ. “ಗಜರಾಮ’, “ರಾಕ್ಷಸ’, “ರುದ್ರ ಗರುಡ ಪುರಾಣ’.. ಹೀಗೆ ಐದಾರು ಚಿತ್ರಗಳು ಸಿದ್ಧತೆ ಮಾಡಿಕೊಂಡಿದ್ದವು. ಈಗ ಸುದೀಪ್ ಅವರ “ಮ್ಯಾಕ್ಸ್’ ಚಿತ್ರ ಬರುತ್ತಿರುವುದರಿಂದ ಈ ಎಲ್ಲಾ ಚಿತ್ರಗಳು ತಮ್ಮ ಬಿಡುಗಡೆಯನ್ನು ಅನಿವಾರ್ಯವಾಗಿ ಮುಂದಕ್ಕೆ ಹಾಕಬೇಕಿದೆ. ಏಕೆಂದರೆ ಒಂದು ವಾರ ಮುಂಚೆ ರಿಲೀಸ್ ಮಾಡಿ ಬಿಡುವ ಎಂಬ ನಿರ್ಧಾರಕ್ಕೂ ಬರುವಂತಿಲ್ಲ. ಏಕೆಂದರೆ ಡಿ.20ರಂದು ಉಪೇಂದ್ರ ನಟನೆ, ನಿರ್ದೇಶನದ “ಯು-ಐ’ ಚಿತ್ರ ತೆರೆಕಾಣುತ್ತಿದೆ. ಹಾಗಾಗಿ, ಹೊಸ ವರ್ಷಕ್ಕೆ ಹೋಗುವ ಆಯ್ಕೆ ಮಾತ್ರ ಉಳಿಯುತ್ತದೆ.