ನವದೆಹಲಿ: ಐಸಿಸ್ ಉಗ್ರ ಸಂಘಟನೆಯ ಸಂಚಿನ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ಸಂಸ್ಥೆ ಮಹಾರಾಷ್ಟ್ರ, ಕರ್ನಾಟಕ ಸೇರಿ ದೇಶದ 41 ಕಡೆ ದಾಳಿ ನಡೆಸಿದೆ ಎಂದು ವರದಿಯಾಗಿದೆ.
ಶನಿವಾರ ಮುಂಜಾನೆ(ಡಿ.9 ರಂದು) ದೇಶದ 41 ಕಡೆಗಳಲ್ಲಿ ಐಸಿಸ್ ಉಗ್ರ ಸಂಘಟನೆಯ ಸಂಚಿನ ಪ್ರಕರಣಕ್ಕೆ ಸಂಬಂಧಿಸಿ ಎನ್ ಐಎ ದಾಳಿ ನಡೆಸಿದೆ.
ಕರ್ನಾಟಕದ ಒಂದು ಸ್ಥಳದಲ್ಲಿ, ಮಹಾರಾಷ್ಟ್ರದ ಪುಣೆ, ಥಾಣೆ ಗ್ರಾಮಾಂತರ, ಥಾಣೆ ನಗರ ಮತ್ತು ಮೀರಾ ಭಯಂದರ್ ನಲ್ಲಿ ದಾಳಿ ನಡೆಸಿ ಪರಿಶೀಲನೆ ನಡೆಸಲಾಗಿದೆ. ಈ ವೇಳೆ ಇಸ್ಲಾಮಿಕ್ ಸ್ಟೇಟ್ ಜೊತೆ ನಂಟು ಹೊಂದಿದ್ದಾರೆ ಎಂದು ಶಂಕಿಸಲಾದ ಪುಣೆ ಮೂಲದ 15 ಮಂದಿಯನ್ನು ಅಧಿಕಾರಿಗಳು ವಶಕ್ಕೆ ಪಡೆದಿರುವುದಾಗಿ ವರದಿ ತಿಳಿಸಿದೆ.
ವಿದೇಶಿ ಮೂಲದ ಐಸಿಸ್ ಹ್ಯಾಂಡ್ಲರ್ ಗಳ ಕೈವಾಡ ಹಾಗೂ ಅಂತರರಾಷ್ಟ್ರೀಯ ನಂಟುಗಳ ಸಂಚಿನ ಕುರಿತು ತನಿಖೆಯ ಮೂಲಕ ಬಯಲಾಗಿದೆ ಎಂದು ಎನ್ಐಎ ಮೂಲಗಳು ತಿಳಿಸಿರುವುದಾಗಿ ವರದಿಯಾಗಿದೆ.