ಪಣಜಿ : ಉತ್ತರ ಗೋವಾದ ಅರ್ಪೋರಾ ನೈಟ್‌ಕ್ಲಬ್ ಅಗ್ನಿ ದುರಂತದಲ್ಲಿ 25 ಮಂದಿ ಸಜೀವ ದಹನ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಹಿರಿಯ ಅಧಿಕಾರಿಗಳನ್ನು ಅಮಾನತುಗೊಳಿಸಿ ಗೋವಾ ಸರ್ಕಾರ ಆದೇಶಿಸಿದೆ.
ಸರ್ಕಾರದ ಆದೇಶದಲ್ಲಿ, ಅಗತ್ಯ ಸುರಕ್ಷತಾ ದಾಖಲೆಗಳಿಲ್ಲದಿದ್ದರೂ ಕೂಡ 2023ರಲ್ಲಿ ನೈಟ್ ಕ್ಲಬ್‌ಗೆ ಮೂವರು ಅಧಿಕಾರಿಗಳು ಅನುಮತಿ ನೀಡಿದ್ದಾರೆ. ಹೀಗಾಗಿ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಿ, ಮಾಲಿನ್ಯ ನಿಯಂತ್ರಣ ಮಂಡಳಿಯ ಡಾ.ಶಮಿಲಾ ಮಾಂಟೆರೋ, ಪಂಚಾಯತಿಗಳ ನಿರ್ದೇಶಕಿ ಸಿದ್ಧಿ ಹಲರ್ನ್ಕರ್ ಮತ್ತು ಹಡ್‌ಫಡೆ-ನಾಗ್ವಾ ಪಂಚಾಯತ್ ಕಾರ್ಯದರ್ಶಿ ರಘುವೀರ್ ಬಗ್ಕರ್ ಮೂವರನ್ನು ಅಮಾನತುಗೊಳಿಸಿದೆ.
ಇದಕ್ಕೂ ಮುನ್ನ ಕ್ಲಬ್‌ನ ನಾಲ್ವರು ಸಿಬ್ಬಂದಿಯಾದ ಮುಖ್ಯ ಜನರಲ್ ಮ್ಯಾನೇಜರ್ ರಾಜೀವ್ ಮೋಡಕ್, ಮ್ಯಾನೇಜರ್ ವಿವೇಕ್ ಸಿಂಗ್, ಉದ್ಯೋಗಿಗಳಾದ ರಾಜೀವ್ ಸಿಂಘಾನಿಯಾ, ಪ್ರಿಯಾಂಶು ಠಾಕೂರ್‌ನ್ನು ಅರೆಸ್ಟ್ ಮಾಡಲಾಗಿತ್ತು.
ಮಾಲೀಕರಾದ ಗೌರವ್ ಮತ್ತು ಸೌರಭ್ ಲುತ್ರಾ ವಿರುದ್ಧ ಬಂಧನ ವಾರಂಟ್ ಹೊರಡಿಸಲಾಗಿದ್ದು, ದೆಹಲಿಯಲ್ಲಿ ಗೋವಾ ಪೊಲೀಸರು ಪತ್ತೆಹಚ್ಚುವಲ್ಲಿ ಕಾರ್ಯನಿರತರಾಗಿದ್ದಾರೆ. ಸ್ಥಳೀಯ ಸರಪಂಚ್ ರೋಷನ್ ರೆಡ್ಕರ್‌ನ್ನು ವಶಕ್ಕೆ ಪಡೆಯಲಾಗಿದ್ದು, ವಿಚಾರಣೆ ನಡೆಯುತ್ತಿದೆ.
ಉತ್ತರ ಗೋವಾದ ಅರ್ಪೋರಾದ ರೋಮಿಯೋ ಲೇನ್‌ನಲ್ಲಿರುವ ಫೇಮಸ್ ನೈಟ್ ಕ್ಲಬ್‌ನಲ್ಲಿ ತಡರಾತ್ರಿ 1 ಗಂಟೆ ಸುಮಾರಿಗೆ ಅಗ್ನಿ ಅವಘಡ ಸಂಭವಿಸಿದೆ. ಕ್ಲಬ್ ಮುಚ್ಚಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾಗ ಅಡುಗೆ ಮನೆಯ ಬಳಿ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡು ಅವಘಡ ಸಂಭವಿಸಿದೆ.
ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ರಾಜ್ಯ ಸರ್ಕಾರ ಮುಂದಿನ ಕ್ರಮ ಕೈಗೊಂಡಿದೆ. ಅವಘಡದಲ್ಲಿ ಸುಮಾರು 50 ಮಂದಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನ ಗೋವಾ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ನೀಡಲಾಗುತ್ತಿದೆ ಎಂದು ವರದಿಯಾಗಿದೆ.














