ಮೈಸೂರು : ಮೈಸೂರಿನಲ್ಲಿ ಸಿಎಂ ಸಿದ್ದರಾಮಯ್ಯನವರ ಮಹತ್ತರ ಯೋಜನೆಯ ನಿಮ್ಹಾನ್ಸ್ ಮಾದರಿಯ ಸಂಸ್ಥೆ ಸ್ಥಾಪನೆಗೆ ಗ್ರೀನ್ ಸಿಗ್ನಲ್ ದೊರೆತಿದೆ. ಆಸ್ಪತ್ರೆ ನಿರ್ಮಾಣಕ್ಕಾಗಿ ಮೀಸಲಿಟ್ಟ 20 ಎಕ್ರೆ ಜಮೀನು ಒತ್ತುವರಿದಾರರಿಂದ ವಶಕ್ಕೆ ಪಡೆಯುವಲ್ಲಿ ಜಿಲ್ಲಾಡಳಿತ ಯಶಸ್ವಿಯಾಗಿದ್ದು ಮೈಸೂರು ಮೆಡಿಕಲ್ ಕಾಲೇಜು ಅಧಿಕಾರಿಗಳಿಗೆ ಹಸ್ತಾಂತರಿಸಲಾಗಿದೆ.
ಸಾಕಷ್ಟು ವಿರೋಧ ಎದುರಿಸಿದರೂ ಪಟ್ಟು ಬಿಡದ ತಹಸೀಲ್ದಾರ್ ಮಹೇಶ್ ಕುಮಾರ್ ಒತ್ತುವರಿದಾರರಿಂದ ಮೀಸಲಿಟ್ಟ 20 ಎಕ್ರೆ ಜಮೀನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.ಅಲ್ಲದೆ ವಶಕ್ಕೆ ಪಡೆದ ಜಮೀನನ್ನ ಮೈಸೂರು ಮೆಡಿಕಲ್ ಕಾಲೇಜು ಡೀನ್ ರವರಿಗೆ ಹಸ್ತಾಂತರಿಸಿದ್ದಾರೆ.
ಮೈಸೂರು ತಾಲೂಕು ವರುಣಾ ಹೋಬಳಿ ಗುಡಮಾದನಹಳ್ಳಿ ಸರ್ವೆ ನಂ.8 ರಲ್ಲಿ 5.05 ಎಕ್ರೆ,ಸರ್ವೆ ನಂ.60 ರಲ್ಲಿ 6.10 ಎಕ್ರೆ ಹಾಗೂ ಸರ್ವೆ ನಂ.68 ರಲ್ಲಿ 8.25 ಎಕ್ರೆ ಗೋಮಾಳ ಜಮೀನು ನಿಮ್ಹಾನ್ಸ್ ಮಾದರಿಯ ಸಂಸ್ಥೆ ಸ್ಥಾಪಿಸಲು ಉದ್ದೇಶಿಸಿ ಮೀಸಲಿಡಲಾಗಿತ್ತು. ಸದರಿ ಜಮೀನಿನಲ್ಲಿ ಕೆಲವು ಸ್ಥಳೀಯರು ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿದ್ದರು.
ಒತ್ತುವರಿ ತೆರವಿಗಾಗಿ ಮುಂದಾದಾಗ ತಾಲೂಕು ಆಡಳಿತಕ್ಕೆ ಸಾಕಷ್ಟು ವಿರೋಧ ವ್ಯಕ್ತವಾಗಿತ್ತು.ಒತ್ತುವರಿದಾರರ ಪರ ರೈತ ಸಂಘದ ವತಿಯಿಂದ ಪ್ರತಿಭಟನೆ ಎದುರಿಸಬೇಕಾಯಿತು.ಮಹಿಳಾ ಅಧಿಕಾರಿ ಭವ್ಯ ಎಂಬುವರ ಮೇಲೆ ಹಲ್ಲೆ ನಡೆಸಲೂ ಮುಂದಾಗಿದ್ದ ವಿಡಿಯೋ ಸಹ ವೈರಲ್ ಆಗಿತ್ತು.
ಒತ್ತುವರಿದಾರರ ವಿರೋಧ ಲೆಕ್ಕಿಸದ ತಹಸೀಲ್ದಾರ್ ಮಹೇಶ್ ಕುಮಾರ್ ಸದರಿ ಜಮೀನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿರುವುದಲ್ಲದೆ ಮೈಸೂರು ಮೆಡಿಕಲ್ ಕಾಲೇಜಿಗೂ ಸಹ ಹಸ್ತಾಂತರಿಸಿದ್ದಾರೆ. ಇದೀಗ ಸಿಎಂ ಕನಸಿನ ಯೋಜನೆ ಸಾಕಾರಗೊಳ್ಳಲು ಇದ್ದ ಎಲ್ಲಾ ಅಡೆತಡೆಗಳೂ ನಿವಾರಣೆಯಾದಂತಾಗಿದೆ. ನಿಮ್ಹಾನ್ಸ್ ಮಾದರಿಯ ಸಂಸ್ಥೆ ಮೈಸೂರಿನಲ್ಲಿ ತಲೆ ಎತ್ತಲಿದೆ.















