ದೆಹಲಿ : ಮಧ್ಯಪ್ರದೇಶದ ಸಚಿವ ವಿಜಯ್ ಶಾ ಅವರು, ಭಾರತೀಯ ಸೇನೆಯ ನಿವೃತ್ತ ಕರ್ನಲ್ ಖುರೇಷಿ ವಿರುದ್ಧ ನೀಡಿದ್ದ ಅವಹೇಳನಕಾರಿ ಹೇಳಿಕೆಯ ಪರಿಣಾಮವಾಗಿ ಇದೀಗ ಸುಪ್ರೀಂ ಕೋರ್ಟ್ ಹಸ್ತಕ್ಷೇಪಿಸಿದ್ದು, ಪ್ರಕರಣದ ತನಿಖೆಗೆ ವಿಶೇಷ ತನಿಖಾ ತಂಡ (ಎಸ್ಐಟಿ) ರಚಿಸಿ ಎಂದು ನ್ಯಾಯಮೂರ್ತಿ ಸೂರ್ಯ ಕಾಂತ್ ಅವರಿದ್ದ ಏಕ ಸದಸ್ಯ ಪೀಠ ಆದೇಶಿಸಿದೆ. ಇದು ರಾಜಕೀಯ ವಲಯದಲ್ಲಿ ಭಾರೀ ಸಂಚಲನ ಎಬ್ಬಿಸಿರುವ ಮಹತ್ವದ ಬೆಳವಣಿಗೆ.
ವಿಜಯ್ ಶಾ ಅವರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡ ನ್ಯಾಯಾಲಯ, ನೀವು ಯಾವ ರೀತಿ ಕ್ಷಮೆಯಾಚಿಸಿದ್ದೀರಿ? ಕ್ಷಮೆಯಾಚನೆಗೆ ಸ್ವಲ್ಪ ಅರ್ಥವಿದೆ. ಕೆಲವೊಮ್ಮೆ ಜನರು ವಿಚಾರಣೆಯಿಂದ ಹೊರಬರಲು ಮಾತ್ರ ಸೌಮ್ಯ ಭಾಷೆ ಬಳಸುತ್ತಾರೆ. ಅಲ್ಲದೇ ಮೊಸಳೆ ಕಣ್ಣೀರು ಸುರಿಸುತ್ತಿದ್ದಾರೆ. ನಿಮ್ಮದು ಯಾವ ರೀತಿಯ ಕ್ಷಮೆಯಾಚನೆ? ನ್ಯಾಯಾಲಯ ಹೇಳಿದೆ ಎಂಬ ಕಾರಣಕ್ಕೆ ಕ್ಷಮೆ ಕೇಳಿದ್ದೀರಿ, ಇಲ್ಲಿಯವರೆಗೆ ನಿಮ್ಮ ಅಸಭ್ಯ ಹೇಳಿಕೆಗಳಿಗೆ ಪ್ರಾಮಾಣಿಕವಾಗಿ ಕ್ಷಮೆಯಾಚಿಸಲು ನಿಮ್ಮನ್ನು ಏನು ತಡೆದಿತ್ತು ಎಂದು ಪೀಠ ಛೀಮಾರಿ ಹಾಕಿತು.
ಸಚಿವರ ವಿರುದ್ಧದ ಪ್ರಕರಣವನ್ನು ತನಿಖೆ ಮಾಡಲು ಮಂಗಳವಾರ ಬೆಳಗ್ಗೆ ಮೂವರು ಐಪಿಎಸ್ ಅಧಿಕಾರಿಗಳನ್ನು ಒಳಗೊಂಡ ವಿಶೇಷ ತನಿಖಾ ತಂಡ ರಚಿಸಬೇಕು. ಅದು ಮಹಿಳಾ ಅಧಿಕಾರಿಯನ್ನು ಹೊಂದಿರಬೇಕು ಮತ್ತು ಮೇ 28ರೊಳಗೆ ವರದಿಯನ್ನು ಸಲ್ಲಿಸಬೇಕು ಎಂದು ನ್ಯಾಯಾಲಯ ಆದೇಶಿಸಿದೆ.
ವಿಜಯ್ ಶಾ ಬಂಧನದಿಂದ ವಿನಾಯಿತಿ ನೀಡಿದ ನ್ಯಾಯಾಲಯ, ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿತು. ಅಲ್ಲದೇ ಈ ಸಂಬಂಧ ಸೂಕ್ತ ಕ್ರಮ ಕೈಗೊಳ್ಳಬೇಕಿತ್ತು, ಈ ಬಗ್ಗೆ ಉತ್ತರಿಸುವಂತೆ ಮಧ್ಯಪ್ರದೇಶ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿ, ಇದನ್ನು ಪೀಠ ಗಮನಿಸುತ್ತದೆ. ನಿಮಗೆ ಇದೊಂದು ಅಗ್ನಿ ಪರೀಕ್ಷೆ ಎಂದು ಸರ್ಕಾರಕ್ಕೆ ಸೂಚಿಸಿದೆ.