ವರುಣ್ ಸಿನಿ ಕ್ರಿಯೇಷನ್ ಮೊದಲ ಪ್ರಯತ್ನದ ‘ನಿಮ್ಮೆಲ್ಲರ ಆಶೀರ್ವಾದ’ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಯುವ ಸಿನಿ ಸಿನಿಮೋತ್ಸಾಹಿಗಳೇ ಸೇರಿಕೊಂಡು ತಯಾರಿಸಿರುವ ‘ನಿಮ್ಮೆಲ್ಲರ ಆಶೀರ್ವಾದ ‘ಜುಲೈ 21ಕ್ಕೆ ರಾಜ್ಯಾದ್ಯಂತ ತೆರೆಗೆ ಬರ್ತಿದೆ.
ಚಿತ್ರರಂಗದ ಮೇಲಿನ ಅಪಾರ ಅಭಿಮಾನ ಹಾಗೂ ಆಸಕ್ತಿಯಿಂದಾಗಿ ವರುಣ್ ಹೆಗ್ಡೆ ಈ ಸಿನಿಮಾ ನಿರ್ಮಾಣ ಮಾಡಿದ್ದಾರೆ.
ನಿರ್ದೇಶಕ ರವಿಕಿರಣ್ ಮಾತನಾಡಿ, ಸುಂದರ-ಸರಳ ಕತೆಯನ್ನು ಹೆಣೆದಿದ್ದೇವೆ. ಪ್ರತಿಯೊಬ್ಬರಿಗೂ ಸಿನಿಮಾ ಇಷ್ಟಪಡಬೇಕು. ಅರ್ಥ ಮಾಡಿಕೊಳ್ಳಬೇಕು ಎಂಬ ರೀತಿಯಲ್ಲಿ ಸಿನಿಮಾ ಮಾಡಿದ್ದೇವೆ. ಇತ್ತೀಚೆಗಿನ ವರ್ಷಗಳಲ್ಲಿ ತುಂಬಾ ಜಾನರ್ ಗಳ ಬಗ್ಗೆ ಯೋಚನೆ ಮಾಡುತ್ತಿದ್ದೆ. ಫ್ಯಾಮಿಲಿ ಡ್ರಾಮಾ ಬಂದಿವೆ. ಆದರೆ ಮೊದಲಿನಿಂದ ಕೊನೆತನಕ ಸಿಂಪಲ್ ಆಗಿ ಎಂಟರ್ಟೈನ್ ಡ್ರಾಮಾಗಳು ಇತ್ತೀಚೆಗೆ ಕಡಿಮೆಯಾಗಿವೆ ಎಂದು ಈ ಕತೆ ಬರೆದಿದ್ದೇವೆ. ಈಗ ಸಿನಿಮಾ ರಿಲೀಸ್ ಹಂತದಲ್ಲಿದೆ. ಇಡೀ ಫ್ಯಾಮಿಲಿ ಕುಳಿತುಕೊಂಡು ನೋಡುವ ಚಿತ್ರ ಇದಾಗಿದ್ದು, ಇದೇ ಜುಲೈ 21ಕ್ಕೆ ತೆರೆಗೆ ಬರುತ್ತಿದೆ. ಈ ಚಿತ್ರದ ಮೇಲೆ ನಿಮ್ಮ ಆಶೀರ್ವಾದ ಇರಲಿ ಎಂದರು.
ಈ ಚಿತ್ರದ ಮೂಲಕ ಪ್ರತೀಕ್ ಶೆಟ್ಟಿ ನಾಯಕನಾಗಿ ಸ್ಯಾಂಡಲ್ ವುಡ್ ಗೆ ಪದಾರ್ಪಣೆ ಮಾಡಿದ್ದು, ಭಿನ್ನ ಸಿನಿಮಾ ಖ್ಯಾತಿಯ ಪಾಯಲ್ ರಾಧಾಕೃಷ್ಣ ನಾಯಕಿಯಾಗಿ ನಟಿಸಿದ್ದಾರೆ. ಎಂ. ಎನ್.ಲಕ್ಷ್ಮೀದೇವಿ, ಅರವಿಂದ ಬೋಳಾರ್, ಗೋವಿಂದೇಗೌಡ, ಸ್ವಾತಿ ಗುರುದತ್, ದಿನೇಶ್ ಮಂಗಳೂರು ಸೇರಿದಂತೆ ಹಿರಿಯ ಹಾಗೂ ಅನುಭವಿ ಕಲಾದಂಡು ಚಿತ್ರದಲ್ಲಿದೆ.
‘ನಿಮ್ಮೆಲ್ಲರ ಆಶೀರ್ವಾದ’ ಸಿನಿಮಾಗೆ ಯುವ ನಿರ್ದೇಶಕ ರವಿಕಿರಣ್ ಆಕ್ಷನ್ ಕಟ್ ಹೇಳಿದ್ದು, ಸರವಣನ್ ಜಿ.ಎನ್.ಛಾಯಾಗ್ರಹಣ, ರಘು ನಿಡುವಳ್ಳಿ ಸಂಭಾಷಣೆ, ರೂಪೇಂದ್ರ ಆಚಾರ್ ಕಲಾ ನಿರ್ದೇಶನ, ಸುನಾದ್ ಗೌತಮ್ ಸಂಗೀತ ಮತ್ತು ವಿವೇಕ್ ಚಕ್ರವರ್ತಿ ಹಿನ್ನೆಲೆ ಸಂಗೀತ, ಸುರೇಶ್ ಆರುಮುಗಂ ಸಂಕಲನವಿದೆ. ಕರಾವಳಿಯ ವಿವಿಧ ಭಾಗಗಳಲ್ಲಿ ಸಿನಿಮಾವನ್ನು ಚಿತ್ರೀಕರಿಸಲಾಗಿದೆ. ಈಗಾಗಲೇ ಪೋಸ್ಟರ್ ಮತ್ತು ಹಾಡಿನ ಮೂಲಕ ನಿರೀಕ್ಷೆ ಹೆಚ್ಚಿಸಿರುವ ‘ನಿಮ್ಮೆಲ್ಲರ ಆಶೀರ್ವಾದ’ ಚಿತ್ರ ಇದೇ ತಿಂಗಳು 21 ರಾಜ್ಯಾದ್ಯಂತ ತೆರೆಗಪ್ಪಳಿಸಲಿದೆ.














