ಮನೆ ಕಾನೂನು ಎನ್‌ ಎಲ್‌ ಎಸ್‌  ಐಯು ಪ್ರವೇಶ ನೀತಿಯಿಂದ ತೃತೀಯ ಲಿಂಗಿಗಳಿಗೆ ತಾರತಮ್ಯ: ಶೇ. 0.5 ಮಧ್ಯಂತರ...

ಎನ್‌ ಎಲ್‌ ಎಸ್‌  ಐಯು ಪ್ರವೇಶ ನೀತಿಯಿಂದ ತೃತೀಯ ಲಿಂಗಿಗಳಿಗೆ ತಾರತಮ್ಯ: ಶೇ. 0.5 ಮಧ್ಯಂತರ ಮೀಸಲಾತಿ ನೀಡಲು ಹೈಕೋರ್ಟ್‌ ಆದೇಶ

0

ಬೆಂಗಳೂರಿನ ಭಾರತೀಯ ವಿಶ್ವವಿದ್ಯಾಲಯದ ರಾಷ್ಟ್ರೀಯ ಕಾನೂನು ಶಾಲೆಯ (ಎನ್‌ಎಲ್‌ಎಸ್‌ಐಯು) ಹಾಲಿ ಪ್ರವೇಶ ಮತ್ತು ಆರ್ಥಿಕ ನೀತಿಯು ತೃತೀಯ ಲಿಂಗಿಗಳಿಗೆ ತಾರತಮ್ಯ ಮಾಡುತ್ತಿದೆ. ಹೀಗಾಗಿ, ಎನ್‌ಎಲ್‌ಎಸ್‌ಐಯುನಲ್ಲಿ ಪ್ರವೇಶ ಕೋರಿ ಅರ್ಜಿ ಹಾಕುವ ತೃತೀಯ ಲಿಂಗಿಗಳಿಗೆ ಎಲ್ಲ ಕೋರ್ಸ್‌ಗಳಲ್ಲಿ ಶೇ. 0.5ರಷ್ಟು ಮೀಸಲಾತಿ ಕಲ್ಪಿಸಬೇಕು ಎಂದು ನಿರ್ದೇಶಿಸಿದೆ.

Join Our Whatsapp Group

ಎನ್‌ಎಲ್‌ಎಸ್‌ಐಯುನಲ್ಲಿ ಮೂರು ವರ್ಷದ ಎಲ್‌ಎಲ್‌ಬಿ ಕೋರ್ಸ್‌ಗೆ ಪ್ರವೇಶ ಕೋರಿ ಹಾಗೂ ಸುಪ್ರೀಂ ಕೋರ್ಟ್‌ನ ಎನ್‌ಎಎಲ್‌ಎಸ್‌ಎ ತೀರ್ಪು ಜಾರಿಗೊಳಿಸುವಂತೆ ಕೋರಿ 33 ವರ್ಷದ ತೃತೀಯ ಲಿಂಗಿಯೊಬ್ಬರು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ರವಿ ವಿ. ಹೊಸಮನಿ ಅವರ ಏಕಸದಸ್ಯ ಪೀಠ ಪುರಸ್ಕರಿಸಿದೆ.

ಸುಪ್ರೀಂ ಕೋರ್ಟ್‌ನ 2014ರ ತೀರ್ಪಿನ ಅನುಸಾರ ತೃತೀಯ ಲಿಂಗಿಗಳಿಗೆ ಮಧ್ಯಂತರ ಪರಿಹಾರದ ಭಾಗವಾಗಿ ಎನ್‌ಎಲ್‌ಎಸ್‌ಐಯು ಮೀಸಲಾತಿ ಕಲ್ಪಿಸಬೇಕು. ಮೀಸಲಾತಿ ಮತ್ತು ಆರ್ಥಿಕ ನೆರವು ನೀತಿ ರೂಪಿಸುವವರೆಗೆ ಎಲ್ಲಾ ತೃತೀಯ ಲಿಂಗಿ ಅರ್ಜಿದಾರರಿಗೆ ಎನ್‌ಎಲ್‌ಎಸ್‌ಐಯು ಶುಲ್ಕ ವಿನಾಯಿತಿ ಕಲ್ಪಿಸಬೇಕು ಎಂದು ನ್ಯಾಯಾಲಯ ಹೇಳಿದೆ.

“ಮುಂದಿನ ವರ್ಷದ ಶೈಕ್ಷಣಿಕ ಪ್ರಕ್ರಿಯೆ ಆರಂಭವಾಗುವುದಕ್ಕೂ ಮುನ್ನ ತೃತೀಯ ಲಿಂಗಿಗಳಿಗೆ ನೆರವಾಗುವ ನಿಟ್ಟಿನಲ್ಲಿ ಸುಪ್ರೀಂ ಕೋರ್ಟ್‌ ಎನ್‌ಎಎಲ್‌ಎಸ್‌ಎ ತೀರ್ಪಿನ ಅನುಸಾರ ಆರ್ಥಿಕ ನೆರವು ಮತ್ತು ಮೀಸಲಾತಿ ಕಲ್ಪಿಸಲು ನೀತಿ ರೂಪಿಸಬೇಕು. ಅಲ್ಲಿಯವರೆಗೆ ಮಧ್ಯಂತರ ಪರಿಹಾರದ ಭಾಗವಾಗಿ ಶೇ. 0.5 (ರಾಜ್ಯ ಸರ್ಕಾರವು ಉದ್ಯೋಗದಲ್ಲಿ ತೃತೀಯ ಲಿಂಗಿಗಳಿಗೆ ಶೇಕಡಾ ಅರ್ಧ ಮೀಸಲಾತಿ ನೀಡಬೇಕು) ಮೀಸಲಾತಿ ನೀಡಬೇಕು. ಇದರಲ್ಲಿ ಶುಲ್ಕ ವಿನಾಯಿತಿ ಸೇರಿಸಬೇಕು. ಇದಕ್ಕಾಗಿ ಎನ್‌ಎಲ್‌ಎಸ್‌ಐಯು ರಾಜ್ಯ/ಕೇಂದ್ರ ಸರ್ಕಾರದಿಂದ ಸೂಕ್ತ ಅನುದಾನ ಪಡೆಯಬಹುದು” ಎಂದು ನ್ಯಾಯಾಲಯ ಹೇಳಿದೆ.

ಅಂತೆಯೇ, ಹಾಲಿ ಅರ್ಜಿದಾರ ವಿದ್ಯಾರ್ಥಿಗೆ ಮಧ್ಯಂತರ ಕ್ರಮದ ಭಾಗವಾಗಿ ಶೇ. 0.5 ಮೀಸಲಾತಿ ನೀತಿಯಡಿ ಪ್ರವೇಶ ಕಲ್ಪಿಸಬೇಕು ಎಂದು ಆದೇಶಿಸಿದೆ.

ಅರ್ಜಿದಾರ ವಿದ್ಯಾರ್ಥಿಯು ಸಾಮಾನ್ಯ ವರ್ಗ ವಿಭಾಗದಲ್ಲಿ ಕಾನೂನು ಕೋರ್ಸ್‌ಗೆ ಅರ್ಜಿ ಹಾಕಿ, ಪ್ರವೇಶ ಖಾತರಿ ಮಾಡಿಕೊಂಡಿದ್ದರು. ಆದರೆ, ₹ 1 ಲಕ್ಷ ಶುಲ್ಕದ ಪೈಕಿ ಅವರಿಗೆ ₹50,000 ಮಾತ್ರ ಪಾವತಿಸಲು ಸಾಧ್ಯವಾಗಿತ್ತು. ಇದರಲ್ಲಿ ಭಾಗಶಃ ಹಣ ಹಿಡಿದು, ಬಾಕಿಯನ್ನು ಎನ್‌ಎಲ್‌ಎಸ್‌ಐಯು ಅರ್ಜಿದಾರರಿಗೆ ಮರಳಿಸಿತ್ತು. ಇದರಿಂದಾಗಿ ಪ್ರವೇಶಾತಿ ರದ್ದಾಗಿತ್ತು. ಕಳೆದ ವರ್ಷದ ಆಗಸ್ಟ್‌ನಲ್ಲಿ ಬೇರೋಂದು ಪೀಠವು ಎನ್‌ಎಲ್‌ಎಸ್‌ಐಯುಗೆ ಮಧ್ಯಂತರ ಕ್ರಮದ ಭಗವಾಗಿ ಅರ್ಜಿದಾರನಿಗೆ ಪ್ರವೇಶ ನೀಡಬೇಕು. ಇದು ಅರ್ಜಿಯ ಅಂತಿಮ ಆದೇಶಕ್ಕೆ ಒಳಪಟ್ಟಿರುತ್ತದೆ ಎಂದಿತ್ತು.

ವಿಚಾರಣೆಯ ವೇಳೆ ಎನ್‌ಎಲ್‌ಎಸ್‌ಐಯು ತೃತೀಯ ಲಿಂಗಿಗಳ (ಹಕ್ಕುಗಳ ರಕ್ಷಣೆ) ಕಾಯಿದೆಯಲ್ಲಿ ತೃತೀಯ ಲಿಂಗಿಗಳಿಗೆ ಮೀಸಲಾತಿ ನೀಡಬೇಕು ಎಂದು ಹೇಳಲಾಗಿಲ್ಲ. 2019ರ ನಿಯಮಗಳಲ್ಲಿಯೂ ಸ್ಪಷ್ಟವಾಗಿ ಖಾಸಗಿ ಅಥವಾ ಸ್ವಾಯತ್ತ ಸಂಸ್ಥೆಗಳು ಮೀಸಲಾತಿ ನೀಡಬೇಕು ಎಂದು ಹೇಳಲಾಗಿಲ್ಲ. ಅದಾಗ್ಯೂ, ತೃತೀಯ ಲಿಂಗಿಗಳಿಗೆ ಸಮಾನ ಅವಕಾಶ ಕಲ್ಪಿಸುವ ಸಂಬಂಧ ಕ್ರಮಕೈಗೊಳ್ಳಲಾಗಿದೆ. ಎನ್‌ಎಎಲ್‌ಎಸ್‌ಎ ಪ್ರಕರಣದ ತೀರ್ಪಿನ ಬಳಿಕ ಕೇಂದ್ರ ಅಥವಾ ರಾಜ್ಯ ಸರ್ಕಾರವು ಕಾನೂನು ರೂಪಿಸಿಲ್ಲವಾದ್ದರಿಂದ ಅರ್ಜಿದಾರರಿಗೆ ಪರಿಹಾರ ಸಿಗುವುದಿಲ್ಲ ಎಂದು ವಾದಿಸಿತ್ತು.

ರಾಜ್ಯ ಸರ್ಕಾರವು ಎನ್‌ಎಲ್‌ಎಸ್‌ಐಯು ಸ್ವಾಯತ್ತ ಸಂಸ್ಥೆಯಾಗಿದ್ದು, ಸ್ವತಂತ್ರವಾಗಿದೆ. ಹೀಗಾಗಿ, ರಾಜ್ಯ ತೃತೀಯ ಲಿಂಗಿಗಳ ನೀತಿಯ ನಿಯಮಗಳ ಅನುಸಾರ ಕ್ರಮಕೈಗೊಳ್ಳಬೇಕು ಎಂಬ ಅರ್ಜಿದಾರರ ವಾದದಲ್ಲಿ ಹುರುಳಿಲ್ಲ ಎಂದಿತ್ತು.

ತೃತೀಯ ಲಿಂಗಿಗಳಿಗೆ ಶಿಕ್ಷಣದಲ್ಲಿ ಮೀಸಲಾತಿ ಕಲ್ಪಿಸುವ ವಿಚಾರವನ್ನು ಪರಿಗಣಿಸಬೇಕು. ತೃತೀಯ ಲಿಂಗಿಗಳಿಗೆ ಮೀಸಲಾತಿ ಮತ್ತು ಶುಲ್ಕ ಮರುಪಾವತಿ ನೀತಿ ರೂಪಿಸುವಂತೆ ರಾಜ್ಯ ಸರ್ಕಾರ ನಿರ್ದೇಶಿಸಿದೆ.

ಹಿರಿಯ ವಕೀಲ ಕೆ ಜಿ ರಾಘವನ್‌ ಮತ್ತು ವಕೀಲ ಆದಿತ್ಯ ನಾರಾಯಣ್‌ ಅವರು ಎನ್‌ಎಲ್‌ಎಸ್‌ಐಯು ಪ್ರತಿನಿಧಿಸಿದ್ದರು. ರಾಜ್ಯ ಸರ್ಕಾರದ ಪರವಾಗಿ ವಕೀಲೆ ಮಮತಾ ಶೆಟ್ಟಿ ವಾದಿಸಿದರು.