ಮನೆ ಕಾನೂನು ಅರಣ್ಯ ಸಂರಕ್ಷಣಾ ಕಾಯಿದೆಯಲ್ಲಿ ‘ಡೀಮ್ಡ್‌ ಫಾರೆಸ್ಟ್‌’ ಪರಿಕಲ್ಪನೆಯೇ ಇಲ್ಲ ಹೈಕೋರ್ಟ್‌

ಅರಣ್ಯ ಸಂರಕ್ಷಣಾ ಕಾಯಿದೆಯಲ್ಲಿ ‘ಡೀಮ್ಡ್‌ ಫಾರೆಸ್ಟ್‌’ ಪರಿಕಲ್ಪನೆಯೇ ಇಲ್ಲ ಹೈಕೋರ್ಟ್‌

0

ಬೆಂಗಳೂರು (Bengaluru): ಅರಣ್ಯ ಸಂರಕ್ಷಣಾ ಕಾಯಿದೆ-1980ರಲ್ಲಿ ‘ಡೀಮ್ಡ್‌ ಫಾರೆಸ್ಟ್‌’ ಪರಿಕಲ್ಪನೆಯೇ ಇಲ್ಲ. ಹಾಗಾಗಿ, ಸರ್ಕಾರದ ‘ಡೀಮ್ಡ್‌ ಫಾರೆಸ್ಟ್‌’ ವ್ಯಾಖ್ಯಾನವನ್ನು ಒಪ್ಪಲಾಗದು ಎಂದು ಹೈಕೋರ್ಟ್‌ ಪುನರುಚ್ಚರಿಸಿದೆ. ಉಚ್ಚ ನ್ಯಾಯಾಲಯದ ಈ ತೀರ್ಪು ರಾಜ್ಯ ಸರ್ಕಾರಕ್ಕೆ ಸಂಕಷ್ಟ ತಂದೊಡ್ಡಲಿದೆ.

ಸರ್ಕಾರ ಡೀಮ್ಡ್‌ ಫಾರೆಸ್ಟ್‌ ಹೆಸರಿನಲ್ಲಿ ಲಕ್ಷಾಂತರ ಹೆಕ್ಟೇರ್‌ ಅರಣ್ಯ ಪ್ರದೇಶವನ್ನು ಗಣಿಗಾರಿಕೆ, ವಸತಿ, ಮೂಲಸೌಕರ್ಯ ವೃದ್ಧಿ ಮತ್ತಿತರ ವಾಣಿಜ್ಯ ಉದ್ದೇಶಗಳಿಗೆ ಬಳಕೆ ಮಾಡಲು ಮುಂದಾಗಿದೆ. ಹಾಗಾಗಿ, ಈ ತೀರ್ಪು ಸರ್ಕಾರಕ್ಕೆ ಸಂಕಷ್ಟವಾಗಿ ಪರಿಣಮಿಸಲಿದೆ.

ಚಿಕ್ಕಮಗಳೂರು ಜಿಲ್ಲೆಯ ಅರೆನೂರು ಗ್ರಾಮದ ಡಿ.ಎಂ ದೇವೇಗೌಡ ಸಲ್ಲಿಸಿದ್ದ ಅರ್ಜಿ ಪರಿಶೀಲಿಸಿದ ಮುಖ್ಯ ನ್ಯಾಯಮೂರ್ತಿ ರಿತುರಾಜ್‌ ಅವಸ್ಥಿ ಮತ್ತು ನ್ಯಾ. ಅಶೋಕ್‌ ಕಿಣಗಿ ಅವರಿದ್ದ ವಿಭಾಗೀಯ ಪೀಠ ಈ ಆದೇಶ ನೀಡಿದೆ.

ಈ ಹಿಂದೆ 2019ರ ಜೂನ್‌ 12ರಂದು ಧನಂಜಯ ವರ್ಸಸ್‌ ಕರ್ನಾಟಕ ರಾಜ್ಯ ಪ್ರಕರಣದಲ್ಲಿ ಡೀಮ್ಡ್‌ ಫಾರೆಸ್ಟ್‌ ಕುರಿತಂತೆ ಹೈಕೋರ್ಟ್‌ ವಿಭಾಗೀಯ ಪೀಠ ಸ್ಪಷ್ಟ ತೀರ್ಪು ನೀಡಿದೆ. ಹಾಗಾಗಿ, ಮತ್ತೆ ಆ ವಿಚಾರದಲ್ಲಿ ನ್ಯಾಯಾಲಯ ವ್ಯಾಖ್ಯಾನ ನೀಡುವ ಅಗತ್ಯವಿಲ್ಲ. ಹಿಂದಿನ ಆದೇಶದಂತೆ ‘ಅರಣ್ಯ’ ಮತ್ತು ‘ಅರಣ್ಯ ಭೂಮಿ’ ಎಂಬುದು ಕಾಯಿದೆಯಲ್ಲಿ ಉಲ್ಲೇಖವಿದೆ.

ಆದರೆ, ಡೀಮ್ಡ್‌ ಅರಣ್ಯ ಎಂಬ ಉಲ್ಲೇಖ ಕಾಯಿದೆಯಲ್ಲಿ ಎಲ್ಲೂ ಇಲ್ಲ. ಕಾಯಿದೆ-ನಿಯಮಗಳಲ್ಲಿ ಇಲ್ಲದೆ, ಅದನ್ನು ಮಾನ್ಯ ಮಾಡಲಾಗದು ಎಂದು ವಿಭಾಗೀಯ ಪೀಠ ಹೇಳಿದೆ. ಈ ಹಿನ್ನೆಲೆಯಲ್ಲಿ ಡೀಮ್ಡ್‌ ಫಾರೆಸ್ಟ್‌ ಹೆಸರಿನಲ್ಲಿ ಸರ್ಕಾರ ಅರಣ್ಯ ಪ್ರದೇಶಗಳಲ್ಲಿ ಇತರೆ ಚಟುವಟಿಕೆಗಳಿಗೆ ಅವಕಾಶ ನೀಡುವುದಕ್ಕೆ ಕಡಿವಾಣ ಬೀಳಲಿದೆ.

ಅರ್ಜಿದಾರರು ಕಲ್ಲು ಕ್ವಾರಿ ನಡೆಸಲು ಪರವಾನಗಿ ಕೋರಿ ಸಲ್ಲಿಸಿರುವ ಅರ್ಜಿಯನ್ನು ಎರಡು ತಿಂಗಳಲ್ಲಿ ಹೊಸದಾಗಿ ಪರಿಶೀಲಿಸುವಂತೆ ನ್ಯಾಯಾಲಯ ಆದೇಶದಲ್ಲಿ ತಿಳಿಸಿದೆ. ಅಲ್ಲದೆ, ಅರ್ಜಿ ಪರಿಗಣಿಸುವಾಗ ಸುಪ್ರೀಂ ಕೋರ್ಟ್‌ 1997ರಲ್ಲಿ ‘ಟಿ.ಎನ್‌.ಗೋದಾವರ್ಮನ್‌ ವರ್ಸಸ್‌ ಯೂನಿಯನ್‌ ಆಫ್‌ ಇಂಡಿಯಾ’ ಪ್ರಕರಣದಲ್ಲಿ ನೀಡಿರುವ ತೀರ್ಪಿನಂತೆ ಅರ್ಜಿದಾರರು ಕೋರಿರುವ ಭೂಮಿ ಅರಣ್ಯವೇ ಅಥವಾ ಅರಣ್ಯ ಪ್ರದೇಶವೇ ಎಂಬುದನ್ನು ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದೂ ಆದೇಶದಲ್ಲಿ ತಿಳಿಸಿದೆ.

ಅರ್ಜಿದಾರರ ಪರ ವಕೀಲರು ಮತ್ತು ಹೆಚ್ಚುವರಿ ಸರ್ಕಾರಿ ವಕೀಲರು ಇಬ್ಬರೂ ಸಹ ಧನಂಜಯ ಪ್ರಕರಣದಲ್ಲಿ ಹೈಕೋರ್ಟ್‌ ಈಗಾಗಲೇ ನೀಡಿರುವ ತೀರ್ಪಿಗೆ ಈ ಪ್ರಕರಣ ಒಳಪಡುತ್ತದೆಂದು ಒಪ್ಪಿದ್ದಾರೆ. ಆ ಹಿನ್ನೆಲೆಯಲ್ಲಿ ನಾವು ಅರ್ಜಿಯನ್ನು ಪುರಸ್ಕರಿಸುತ್ತಿದ್ದೇವೆ ಹಾಗೂ ಧನಂಜಯ ಪ್ರಕರಣದಲ್ಲಿ ವಿಭಾಗೀಯ ಪೀಠ ನೀಡಿರುವ ತೀರ್ಪು ಪಾಲನೆ ಮಾಡಬೇಕೆಂದು ಆದೇಶ ನೀಡುತ್ತಿದ್ದೇವೆ ಎಂದು ಆದೇಶಿಸಿದೆ.

ಒಂದು ವೇಳೆ ಸಕ್ಷಮ ಪ್ರಾಧಿಕಾರಕ್ಕೆ ಅರ್ಜಿದಾರರು ಕಲ್ಲು ಗಣಿಗಾರಿಕೆಗೆ ಪರವಾನಗಿ ಕೋರಿರುವ ಪ್ರದೇಶ ಅರಣ್ಯ ಅಥವಾ ಅರಣ್ಯ ಪ್ರದೇಶ ಎಂದು ಕಂಡು ಬಂದರೆ, ಆಗ ಅರಣ್ಯ ಸಂರಕ್ಷಣಾ ಕಾಯಿದೆ- 1980 ಸೆಕ್ಷನ್‌ 2ರ ಪ್ರಕಾರ ಕೇಂದ್ರ ಸರ್ಕಾರದಿಂದ ಒಪ್ಪಿಗೆ ಪಡೆಯುವವರೆಗೆ ಪರವಾನಗಿ ಅಥವಾ ಗುತ್ತಿಗೆ ನೀಡಲಾಗದು. ಅಲ್ಲದೆ, ಅರ್ಜಿದಾರರ ಅರ್ಜಿಯನ್ನು ಮರುಪರಿಶೀಲಿಸಿ ಯಾವುದೇ ನಿರ್ಧಾರ ಕೈಗೊಂಡರೂ ಅದನ್ನು ಅವರ ಗಮನಕ್ಕೆ ತರಬೇಕು ಎಂದೂ ನ್ಯಾಯಾಲಯ ಸೂಚನೆ ನೀಡಿದೆ.

ಅರ್ಜಿದಾರರು ತಮ್ಮ ಭೂಮಿಯಲ್ಲಿ ಕಲ್ಲು ಗಣಿಗಾರಿಕೆಗೆ ಪರವಾನಗಿ ಕೋರಿದ್ದರು. ಆದರೆ, ಚಿಕ್ಕಮಗಳೂರು ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ, ಪರವಾನಗಿ ನೀಡಲಾಗದು ಎಂದು ಹಿಂಬರಹ ನೀಡಿದ್ದರು. ಅದನ್ನು ಪ್ರಶ್ನಿಸಿ ಹೈಕೋರ್ಟ್‌ ಮೊರೆ ಹೋಗಿದ್ದ ಅರ್ಜಿದಾರರು, ತಮಗೆ ಕಲ್ಲುಗಣಿಕಾರಿಕೆ ನಡೆಸಲು ಅನುಮತಿ ನೀಡುವಂತೆ ಕೋರಿದ್ದರು.

6.64 ಲಕ್ಷ ಹೆಕ್ಟೇರ್‌ ಡೀಮ್ಡ್‌ ಅರಣ್ಯ ಡಿನೋಟಿಫೈ

ಇತ್ತೀಚೆಗೆ ಕರ್ನಾಟಕ ಸರ್ಕಾರ ಸುಪ್ರೀಂ ಕೋರ್ಟ್‌ಗೆ ಪ್ರಮಾಣಪತ್ರ ಸಲ್ಲಿಸಿ, 9.94 ಲಕ್ಷ ಹೆಕ್ಟೇರ್‌ ಡೀಮ್ಡ್‌ ಫಾರೆಸ್ಟ್‌ ಪೈಕಿ 6.64 ಲಕ್ಷ ಹೆಕ್ಟೇರ್‌ ಪ್ರದೇಶವನ್ನು ಡಿನೋಟಿಫೈ ಮಾಡಲಾಗಿದೆ ಎಂದು ತಿಳಿಸಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ. ಡಿನೋಟಿಫೈ ಮಾಡಿರುವ ಪ್ರದೇಶದ ಪೈಕಿ 1.62 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ನಿಯಮದಂತೆ ಪ್ರತಿ ಹೆಕ್ಟೇರ್‌ಗೆ 50 ಮರಗಳಿರಲಿಲ್ಲ ಎಂದು ಹೇಳಿದೆ.

ಅಲ್ಲದೆ, ಸರ್ವೆ ನಂಬರ್‌ ಪುನರಾವರ್ತನೆ ಕಾರಣಕ್ಕೆ ಸುಮಾರು 28 ಸಾವಿರ ಎಕರೆ ಡಿನೋಟಿಫೈ ಮಾಡಲಾಗಿತ್ತು ಎಂದೂ ಸರ್ಕಾರ ಹೇಳಿತ್ತು. 1996ರಲ್ಲಿಯೇ ಸುಪ್ರೀಂ ಕೋರ್ಟ್‌, ಕೇಂದ್ರ ಸರ್ಕಾರದ ಅನುಮತಿ ಇಲ್ಲದೆ ಅರಣ್ಯ ಪ್ರದೇಶದಲ್ಲಿ ಅರಣ್ಯೇತರ ಚಟುವಟಿಕೆಗಳನ್ನು ನಡೆಸುವಂತಿಲ್ಲ ಎಂದು ಹೇಳಿ ನಿಷೇಧಿಸಿದೆ. ಆದರೆ ಅಭಿವೃದ್ಧಿ ಹೆಸರಿನಲ್ಲಿ ಅರಣ್ಯ ಪ್ರದೇಶದ ಒತ್ತುವರಿ, ಅರಣ್ಯೇತರ ಉದ್ದೇಶಗಳಿಗೆ ಬಳಕೆ ಅವ್ಯಾಹತವಾಗಿ ಮುಂದುವರಿದಿದೆ.