ಚಿಕ್ಕಮಗಳೂರು(Chikkamagaluru): ಮೀಸಲಾತಿ ವಿಚಾರದಲ್ಲಿ ಗೊಂದಲಗಳಿಲ್ಲ. ಮಧ್ಯಂತರ ವರದಿಯನ್ನು ಸಚಿವ ಸಂಪುಟದ ಮುಂದೆ ಇಟ್ಟಿದ್ದೇವೆ. ಅಂತಿಮ ವರದಿ ನಂತರ ಸ್ಪಷ್ಟ ಚಿತ್ರಣ ಲಭಿಸುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ಅತಿ ಉತ್ಸಾಹ ಮಿತ್ರರು ಎಂದು ಹೇಳುತ್ತೇವೆ. ಉತ್ಸಾಹದಲ್ಲಿ ಕೆಲ ಹೇಳಿಕೆ ನೀಡುತ್ತಾರೆ. ಅವರ ವಿಚಾರವನ್ನು ದೆಹಲಿಯವರಿಗೆ ತಿಳಿಸಿದ್ದೇನೆ. ಹೈಕಮಾಂಡ್’ನವರು ಅವರನ್ನು ಕರೆಸಿ ಮಾತನಾಡಿ ಸರಿಪಡಿಸುತ್ತಾರೆ ಎಂದು ಉತ್ತರಿಸಿದರು.
ಗೃಹಿಣಿ ಶಕ್ತಿ ಯೋಜನೆ ರೂಪಿಸುವುದಾಗಿ ಈಗಾಗಲೇ ಹೇಳಿದ್ದೇನೆ. ಅಸ್ಸಾಂನಲ್ಲಿ ಈ ಯೋಜನೆ ಜಾರಿಯಲ್ಲಿದೆ, ಅದೇ ರೀತಿ ಇಲ್ಲಿಯೂ ಅನುಷ್ಠಾನಗೊಳಿಸುವ ಚಿಂತನೆ ಇದೆ ಎಂದು ಪ್ರತಿಕ್ರಿಯಿಸಿದರು.
ಬಡ ಕುಟುಂಬಗಳವರು ನಿತ್ಯದ ಅಗತ್ಯ ವಸ್ತುಗಳನ್ನು ಪಡೆದುಕೊಳ್ಳಲು, ಆರೋಗ್ಯ ನಿಟ್ಟಿನಲ್ಲಿ ಹಲವು ಯೋಜನೆಗಳು ಇವೆ. ಗೃಹಿಣಿ ಶಕ್ತಿ ರೂಪಿಸಿ ನೆರವು ಒದಗಿಸಿದರೆ ಅವರಿಗೆ ಅನುಕೂಲವಾಗುತ್ತದೆ ಎಂದರು.