ಮನೆ ರಾಜಕೀಯ ರಾಷ್ಟ್ರಧ್ವಜ ಕಂಬದ ಮೇಲೆ ಬೇರೆ ಧ್ವಜ ಹಾರಿಸಲು ಅವಕಾಶವಿಲ್ಲ: ಡಿಕೆಶಿ

ರಾಷ್ಟ್ರಧ್ವಜ ಕಂಬದ ಮೇಲೆ ಬೇರೆ ಧ್ವಜ ಹಾರಿಸಲು ಅವಕಾಶವಿಲ್ಲ: ಡಿಕೆಶಿ

0

ಬೆಂಗಳೂರು:  ‘ರಾಷ್ಟ್ರಧ್ವಜಕ್ಕೆ ಅದರದೇ ಆದ ಕಾಯ್ದೆ ಇದೆ. ರಾಷ್ಟ್ರ ಧ್ವಜದ ಕಂಬದ  ಮೇಲೆ ಎಲ್ಲ ಧ್ವಜವನ್ನು ಹಾರಿಸಲು ಸಾಧ್ಯವಿಲ್ಲ. ಅದು ಸರ್ಕಾರ ಆಸ್ತಿ. ನನ್ನ ತಲೆ ಕಾಣಬೇಕಾದರೆ ನನ್ನ ಕೈಕಾಲುಗಳು ಇರುವಂತೆ ರಾಷ್ಟ್ರಧ್ವಜಕ್ಕೆ ಅದರ ಕಂಬ ಮುಖ್ಯ. ಇವೆರಡನ್ನೂ ಬೇರೆ ಮಾಡಲು ಸಾಧ್ಯವಿಲ್ಲ. ಅದು ಒಂದು ಉದ್ದೇಶಕ್ಕಾಗಿ ಇರುವ ಕಂಬ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.

 ನಾನು ಮಾಧ್ಯಮಗಳಲ್ಲಿ ಬಂದ ಸುದ್ದಿಯನ್ನು ನೋಡಿ ಪ್ರತಿಕ್ರಿಯೆ ನೀಡಿದ್ದೇನೆ. ಕೆಲವು ಬಾರಿ ಬೇರೆ ನಾಯಕರು ಕೊಟ್ಟಿರುವ ಹೇಳಿಕೆ ವಿಚಾರವಾಗಿ ಮಾಧ್ಯಮದವರು ಕೇಳುವ ಪ್ರಶ್ನೆಗೆ ಪ್ರತಿಕ್ರಿಯಿಸುತ್ತೇವೆ. ಮಾಧ್ಯಮದವರು ಸರಿಯಾಗಿ ಹೇಳುತ್ತಿದ್ದಾರೆ ಎಂದು ಭಾವಿಸಿ ಆ ಬಗ್ಗೆ ಪ್ರತಿಕ್ರಿಯೆ ನೀಡುತ್ತೇವೆ ಎಂದರು.

ಸರ್ಕಾರದ ಆಸ್ತಿಯಲ್ಲಿ ಈ ರೀತಿ ಬೇರೆ ಧ್ವಜ ಹಾರಿಸಿರುವುದನ್ನು ನೋಡಿಕೊಂಡು ಸರ್ಕಾರ ಏನು ಮಾಡುತ್ತಿದೆ? ಈ ರೀತಿ ಆಗಿರುವುದು ತಪ್ಪು ಎಂದು ಸಚಿವ ಅಶೋಕ್ ಅವರು ಒಪ್ಪಿಕೊಂಡಿರುವುದು ಅವರ ದೊಡ್ಡತನ ಎಂದು ಹೇಳಿದರು.

ಶಿವಮೊಗ್ಗ ಜಿಲ್ಲೆಯಲ್ಲಿ ಮಂತ್ರಿಯೊಬ್ಬರ ಮಗ ವಿದ್ಯಾರ್ಥಿಗಳಿಗೆ ಕೇಸರಿ ಶಾಲು ಹಾಗೂ ಪೇಟಗಳನ್ನು ಹಂಚಿದ್ದಾರೆ. ಬಿಜೆಪಿ ಕಾರ್ಯಕರ್ತರು ಈ ಕೆಲಸ ಮಾಡುತ್ತಿದ್ದಾರೆ. ನಿಮ್ಮ ರಾಜಕೀಯ ಲಾಭಕ್ಕಾಗಿ ಮಕ್ಕಳನ್ನು ಯಾಕೆ ಹಾಳು ಮಾಡುತ್ತಿದ್ದೀರಿ. ಚುನಾವಣೆ ಸಮಯ ಬಂದಾಗ ರಾಜಕಾರಣ ಮಾಡೋಣ. ಆದರೆ ಅನಗತ್ಯವಾಗಿ ಸಮಸ್ಯೆ ಸೃಷ್ಟಿಸುತ್ತಿರುವುದೇಕೆ? ನಮ್ಮಲ್ಲಿ ಎಂತಹ ವಿಜ್ಞಾನಿಗಳು, ವಿದ್ಯಾವಂತರು ತಯಾರಾಗಿದ್ದಾರೆ. ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ನೀಡಿ ವಿದ್ಯಾವಂತರನ್ನು ತಯಾರು ಮಾಡಬೇಕೇ ಹೊರತು ಅವರಲ್ಲಿ ಜಾತಿ, ಧರ್ಮದ ನಡುವಣ ದ್ವೇಷದ ವಿಷಬೀಜ ಬಿತ್ತುವುದಲ್ಲ. ಈ ವಿಚಾರದ ಬಗ್ಗೆ ವಿದ್ಯಾರ್ಥಿಗಳ ಪೋಷಕರು ಮುಂದೆ ಮಾನಸಿಕವಾಗಿ ಬಹಳ ನೊಂದುಕೊಳ್ಳುತ್ತಾರೆ ಎಂದು ಡಿ ಕೆ ಶಿವಕುಮಾರ್ ತಿಳಿಸಿದರು.

ಈ ವಿವಾದದ ಹಿಂದೆ ಕಾಂಗ್ರೆಸ್ ಪಿತೂರಿ ಇದೆ ಎಂಬ ಗೃಹ ಸಚಿವ ಅರಗ ಜ್ಞಾನೇಂದ್ರ ಅವರ ಹೇಳಿಕೆ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ‘ನಾನು ವಿರೋಧ ಪಕ್ಷದ ಅಧ್ಯಕ್ಷ. ಬಿಜೆಪಿಯವರು ನಮ್ಮ ಮೇಲೆ ಆರೋಪ ಮಾಡುತ್ತಾರೆ. ಪಿತೂರಿ ಯಾರು ಎಲ್ಲಿಂದ ಮಾಡುತ್ತಿದ್ದಾರೆ, ಮಂಡ್ಯ, ಶಿವಮೊಗ್ಗ, ಬೇರೆ ಕಡೆಗಳಲ್ಲಿ ಪಿತೂರಿ ಮಾಡುತ್ತಿರುವವರು ಯಾರು? ವಿದ್ಯಾರ್ಥಿಗಳು ಕೇಸರಿ ಶಾಲು, ಪೇಟವನ್ನು ಅವರ ಮನೆಯಿಂದ ತಂದಿದ್ದರಾ? ಅವರೇನು ಕಾಸು ಕೊಟ್ಟು ಖರೀದಿಸಿದ್ದರಾ? ಅವುಗಳನ್ನು ಹೇಗೆ ಹಂಚುತ್ತಿದ್ದರು ಎಂಬುದನ್ನು ಮಾಧ್ಯಮಗಳಲ್ಲೇ ನೋಡಿದ್ದೇವೆ. ರಾತ್ರೋರಾತ್ರಿ ಅಷ್ಟೋಂದು ಪೇಟಗಳು ಎಲ್ಲಿಂದ ಬಂದಿವೆ? ಸೂರತ್ ನಿಂದ 50 ಲಕ್ಷ ಕೇಸರಿ ಶಾಲುಗಳನ್ನು ತರಿಸಲಾಗಿದೆ. ಇದೆಲ್ಲವೂ ನಮಗೆ ಗೊತ್ತಿಲ್ಲವೇ? ಈ ಶಾಲುಗಳನ್ನು ಸರಬರಾಜು ಮಾಡುತ್ತಿರುವವರು ಯಾರು? ಎಂಬುದರ ಬಗ್ಗೆ ನಮಗೂ ಗೊತ್ತಿದೆ. ನಮಗೂ ಸಾಕಷ್ಟು ಲಿಂಕ್ ಗಳಿದ್ದು, ಎಲ್ಲ ಮಾಹಿತಿಗಳು ಗೊತ್ತಾಗುತ್ತವೆ’ ಎಂದರು.

ಕೇಸರಿ ಹಾಗೂ ಹಿಜಾಬ್ ವಿಚಾರವಾಗಿ ಕಾಂಗ್ರೆಸ್ ಅಂತರ ಕಾಯ್ದುಕೊಳ್ಳುತ್ತಿದೆಯೇ ಎಂಬ ಪ್ರಶ್ನೆಗೆ, ‘ರಾಷ್ಟ್ರ ಧ್ವಜ ಹಾಗೂ ಸಂವಿಧಾನ ನಮ್ಮ ಧರ್ಮ. ಸಂವಿಧಾನ ನಮ್ಮ ಪಾಲಿಗೆ ಭಗವದ್ಗೀತೆ, ಕುರಾನ್ ಹಾಗೂ ಬೈಬಲ್ ಆಗಿದೆ. ಇದೇ ನಮ್ಮ ನಿಲುವು. ನಾವು ಶಾಸಕರಾಗಿ ಅಧಿಕಾರ ಸ್ವೀಕರಿಸುವಾಗ ಮಾಡಿದ ಪ್ರಮಾಣವನ್ನು ನಾನು ಪಾಲಿಸುತ್ತೇನೆ. ನಾನು ಒಬ್ಬ ಹಿಂದೂ ಆಗಿ ಎಲ್ಲ ಧರ್ಮದವರಿಗೆ ಗೌರವ ನೀಡಬೇಕು. ನಾನು ಹಿಂದು. ಹಾಗೆಂದು ನಾನು ಹುಟ್ಟುವಾಗ ಅರ್ಜಿ ಹಾಕಿಕೊಂಡು ಹುಟ್ಟಿರಲಿಲ್ಲ. ಅವರವರು ಅವರ ಧರ್ಮಕ್ಕೆ ಗೌರವ ಕೊಡಬೇಕು. ನಾನು ದಿನಬೆಳಗಾದರೆ ದೇವರಿಗೆ ನಮಸ್ಕಾರ ಮಾಡಿ, ಹಣೆಗೆ ಕುಂಕುಮ, ವಿಭೂತಿ, ಗಂಧ ಇಟ್ಟುಕೊಳ್ಳುತ್ತೇನೆ. ಕೆಲವರು ನೀನು ಕುಂಕುಮ ಹಾಕಬೇಡ, ಓಲೆ ಹಾಕಬೇಡ, ಮೂಗುತಿ ಹಾಕಬೇಡ ಎಂದರೆ ಹೇಗೆ?’ ಎಂದರು.

ಮಹಿಳೆಯರ ಉಡುಪು ಅವರ ಇಚ್ಛೇ ಎಂಬ ಪ್ರಿಯಾಂಕಾ ಗಾಂಧಿ ಅವರ ಹೇಳಿಕೆ ಕುರಿತ ಪ್ರಶ್ನೆಗೆ, ‘ಸಂವಿಧಾನದಲ್ಲಿ ಪ್ರತಿಯೊಬ್ಬರಿಗೂ ಕೊಟ್ಟಿರುವ ಹಕ್ಕಿನ ಬಗ್ಗೆ ಅವರು ಮಾತನಾಡಿದ್ದಾರೆ’ ಎಂದು ಉತ್ತರಿಸಿದರು.

ಬಿಜೆಪಿ ನಾಯಕ ರೇಣುಕಾಚಾರ್ಯ ಅವರು ಮಹಿಳೆಯರ ಬಟ್ಟೆ ನೋಡಿ ಪುರುಷರು ಉದ್ವೇಗಕ್ಕೆ ಒಳಗಾಗುತ್ತಾರೆ ಎಂಬ ವಿವಾದಾತ್ಮಕ ಹೇಳಿಕೆ ನೀಡಿದ್ದಾರಲ್ಲಾ ಎಂಬ ಪ್ರಶ್ನೆಗೆ, ‘ಆ ಮುತ್ತುರಾಜನ ಬಗ್ಗೆ ನಾನು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ’ ಎಂದರು.